ಈಗಂತೂ ಚಿತ್ರಗಳ ಶೀರ್ಷಿಕೆಗಳೇ ಆಕರ್ಷಕವಾಗಿರುತ್ತವೆ. ಆ ಸಾಲಿಗೆ “ಬಿಎಂಡಬ್ಲ್ಯು’ ಎಂಬ ಶೀರ್ಷಿಕೆಯೂ ಒಂದು. ಕಾರಿನ ಹೆಸರೂ ಚಿತ್ರವಾಗಿದೆಯಲ್ಲ ಅಂದುಕೊಂಡರೆ, ಆ ಊಹೆ ತಪ್ಪು. “ಬೆಂಗಳೂರು ಮೆನ್ ಆ್ಯಂಡ್ ವುಮೆನ್ಸ್ ಕಾಲೇಜ್’ ಈ ಹೆಸರನ್ನು ಚಿಕ್ಕದ್ದಾಗಿ “ಬಿಎಂಡಬ್ಲ್ಯು’ ಅಂತ ಇಟ್ಟು ಚಿತ್ರ ಮಾಡಿದ್ದಾರೆ ನಿರ್ದೇಶಕ ಗಂಧರ್ವರಾಯ ರಾವತ್. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ನಿರ್ದೇಶಕರೇ ಕಥೆ, ಚಿತ್ರಕಥೆ ಮತ್ತು ಮೂರು ಗೀತೆ ರಚಿಸಿದ್ದಾರೆ.
ಇದು ಯುವಕರ ಕುರಿತ ಕಥೆ. ಕಾಲೇಜಿನ ಹುಡುಗ, ಹುಡುಗಿಯರ ತುಂಟಾಟ, ಚೆಲ್ಲಾಟ, ಪ್ರೀತಿ, ಪ್ರೇಮ, ಒಳ್ಳೆಯದು, ಕೆಟ್ಟದ್ದು ಇವೆಲ್ಲವನ್ನೂ ಇಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಚಿತ್ರದ ಶೀರ್ಷಿಕೆಗೆ “ಫನ್ ಅನ್‌ಲಿಮಿಟೆಡ್’ ಎಂಬ ಅಡಿಬರಹವೂ ಇದೆ.
ಅಂದು ಪ್ರಥಮ್ ಕೂಡ ಆಗಮಿಸಿದ್ದರು. “ನಿರ್ದೇಶಕರ ಸಿನಿಮಾ ಪ್ರೀತಿ ಬಗ್ಗೆ ಮಾತನಾಡಿದರು. ಒಂಥರಾ ಓಂಪ್ರಕಾಶ್ ರಾವ್‌ರಂತೆ ಕೆಲಸ ಮಾಡುತ್ತಾರೆ. ಇವರು ಅವರಂತೆಯೇ ಇನ್ನೂ ಎತ್ತರಕ್ಕೆ ಬೆಳೆಯಲಿ. ಇಲ್ಲಿ ಪ್ರವೀಣ್ ತನ್ನ ಗೆಳೆಯನ ಹುಡುಗಿಯ ಜೊತೆಗೇ ಫ್ಲರ್ಟ್ ಮಾಡುವುದಕ್ಕೆ ಹೋಗುತ್ತಾರೆ. ಆದರೆ, ಅದು ನಿಜಜೀವನದಲ್ಲಿ ಆಗುವುದು ಬೇಡ. ಬೇರೆಯವರ ತಟ್ಟೆಗೆ ಕೈ ಹಾಕಬಾರದು ಅಂತ ಕಾಲೆಳೆದು ಮಾತಾಡುತ್ತಲೇ, ಹಣ ಕೊಟ್ಟು ಆಡಿಯೋ ಸಿಡಿ ಖರೀದಿಸಿದರು ಪ್ರಥಮ್.
ಚಿತ್ರದ ವಿಶೇಷವೆಂದರೆ, ನಿರ್ದೇಶಕರ ಪುತ್ರ ಶ್ರೀರಾಂ ಗಂಧರ್ವ ಅವರು ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತ ನೀಡುವುದರೊಂದಿಗೆ ಒಂದು ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರವೀಣ್, ಆಕಾಶ್‌ಸಿಂಗ್ ರಜಪೂತ್, ಚಿಕ್ಕಣ್ಣ , ಪ್ರಿಯಾಂಕ ಮಲಾ°ಡ್, ಅನುಷಾ ರೈ, ಏಕ್ತಾ ರಾಥೋಡ್ ಮುಂತಾದವರು ಅಭಿನಯಿಸಿದ್ದಾರೆ. ಗೌರವ್ ಅವರಿಲ್ಲಿ ಎರಡು ಗೀತೆಗಳನ್ನು ಬರೆದಿದ್ದಾರೆ. ಜಿ.ಎಸ್. ವಾಲಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಸೂರಜ್ ಚಿತ್ರಕ್ಕೆ ಸಂಕಲನ ಮಾಡಿದರೆ, ಮುರಳಿ ಅವರು ನೃತ್ಯ ಸಂಯೋಜಿಸಿದ್ದಾರೆ. ನಿರ್ಮಾಪಕ ಜಗದೀಶ್ ಪುರುಶೋತ್ತಮ್ ಅವರು, ಚಿತ್ರದ ಹೆಸರು “ಬಿಎಂಡಬ್ಲ್ಯು’ ಅಂತ ಇದ್ದರೂ, ಸಿನಿಮಾ ಟಿಕೆಟ್ ಅಂಬಾಸಿಡರ್ ಕಾರ್ ಬೆಲೆಯಷ್ಟೆ ಇರುತ್ತದೆ ಎಂದರು. ಅಂದು ನಟಿ ಸ್ಪರ್ಶ ರೇಖಾ, ನಿರ್ಮಾಪಕ ಜಾಕ್ ಮಂಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.