Advertisement

ನಿಯಮ ಬಾಹಿರ ಜಾಬ್‌ಕೋಡ್‌

06:30 AM Feb 16, 2019 | |

ಬೆಂಗಳೂರು: ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೊದಲೇ ಆಯ್ದ ವಿಧಾನಸಭಾ ಕ್ಷೇತ್ರಗಳಿಗೆ 55 ಕೋಟಿ ರೂ.ಗಳ ಜಾಬ್‌ಕೋಡ್‌ ನೀಡಿ ಕಾಮಗಾರಿ ಆರಂಭಿಸಿದ್ದು, ಕೂಡಲೇ ಜಾಬ್‌ಕೋಡ್‌ ಹಿಂಪಡೆಯಬೇಕೆಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಣಕಾಸು ಆಯೋಗ (ಎಸ್‌ಎಫ್ಸಿ) ಅನುದಾನದಡಿ ನಡೆದ ಹಂಚಿಕೆಯಲ್ಲಿ ಈಗಾಗಲೇ ತಾರತಮ್ಯ ಮಾಡುತ್ತಿರುವ ಕಾಂಗ್ರೆಸ್‌-ಜೆಡಿಎಸ್‌ ಆಡಳಿತ, ಇದೀಗ ಸರ್ಕಾರದ ಪಾರದರ್ಶಕ ಕಾಯ್ದೆ ಉಲ್ಲಂ ಸಿ ಎಸ್‌ಎಫ್ಸಿ ಅನುದಾನ ಬಿಡುಗಡೆಗೂ ಮೊದಲೇ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾನೂನು ಬಾಹಿರವಾಗಿ ಕಾಮಗಾರಿ ಆರಂಭಿಸಲು ಜಾಬ್‌ಕೋಡ್‌ ನೀಡಿದ್ದಾರೆ ಎಂದು ಆರೋಪಿಸಿದರು.

ಮೂರು ವರ್ಷಗಳಲ್ಲಿ ಪಾಲಿಕೆಗೆ 12,368 ಕೋಟಿ ರೂ. ಅನುದಾನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಈವರೆಗೆ 6,892 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿದ 5,476 ಕೋಟಿ ರೂ. ಬಿಡುಗಡೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇದೀಗ ಮುಂದಿನ ಮೂರು ವರ್ಷಗಳಿಗೆ 8,015 ಕೋಟಿ ರೂ. ಘೋಷಿಸಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸದ ಸರ್ಕಾರ, ಹೊಸ ಕಾಮಗಾರಿಗಳಿಗೆ ಅನುದಾನ ಎಲ್ಲಿಂದ ಕೊಡುತ್ತದೆ ಎಂದು ಪ್ರಶ್ನಿಸಿದರು.

ಸರ್ಕಾರ 2018-19ನೇ ಸಾಲಿನಲ್ಲಿ ಪಾಲಿಕೆಗೆ 271.21 ಕೋಟಿ ರೂ. ಎಸ್‌ಎಫ್ಸಿ ಅನುದಾನ ನೀಡಿದೆ. ಆ ಪೈಕಿ ಈಗಾಗಲೇ 233 ಕೋಟಿ ರೂ.ಗಳಿಗೆ ಪಾಲಿಕೆ ಅಧಿಕಾರಿಗಳು ಜಾಬ್‌ಕೋಡ್‌ ನೀಡಿದ್ದಾರೆ. ಆದರೆ, ಪಾಲಿಕೆಗೆ ಈವರೆಗೆ 68 ಕೋಟಿ ರೂ. ಮಾತ್ರ ಬಂದಿದ್ದು, ಇನ್ನೂ 165 ಕೋಟಿ ರೂ. ಬರಬೇಕಿದೆ. ಆದರೂ, ಅಧಿಕಾರಿಗಳು ಮಾತ್ರ ಅನುದಾನ ಬರುವ ಮೊದಲೇ ಜಾಬ್‌ಕೋಡ್‌ ನೀಡಿ ಕೆಲಸ ಆರಂಭಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಎರಡು ಕ್ಷೇತ್ರಗಳಿಗೆ 55 ಕೋಟಿ ರೂ. ಜಾಬ್‌ಕೋಡ್‌: ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 30 ಕೋಟಿ ರೂ. ಹಾಗೂ ಮಹಾಲಕ್ಷ್ಮೀ ಲೇಔಟ್‌ಗೆ 25 ಕೋಟಿ ರೂ. ಸೇರಿ ಒಟ್ಟು 55 ಕೋಟಿ ರೂ.ಗಳಿಗೆ ಅನುದಾನ ಬರುವ ಮೊದಲೇ ಜಾಬ್‌ಕೋಡ್‌ ನೀಡಿ, ಕಾಮಗಾರಿ ಆರಂಭಿಸಲಾಗಿದೆ.

Advertisement

ಆದರೆ, ಕಳೆದ ವರ್ಷ ಪುಲಿಕೇಶಿ ನಗರಕ್ಕೆ 25 ಕೋಟಿ ರೂ. ಹಾಗೂ ಚಾಮರಾಜಪೇಟೆಗೆ 30 ಕೋಟಿ ರೂ.ಗಳನ್ನು ಎಸ್‌ಎಫ್ಸಿ ಅನುದಾನದಲ್ಲಿ ನೀಡುವುದಾಗಿ ಕಾಮಗಾರಿ ಆರಂಭಿಸಲು ಸರ್ಕಾರ ಆದೇಶಿಸಿತ್ತು. ಆದರೆ, ಈವರೆಗೆ ಕಾಮಗಾರಿಗಳಿಗೆ ಜಾಬ್‌ಕೋಡ್‌ ನೀಡಿಲ್ಲ. ಹೀಗಾಗಿ ಸರ್ಕಾರದ ಆದೇಶದಂತೆ ಎಸ್‌ಎಫ್ಸಿ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾದರೆ ಪಾಲಿಕೆಯ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಟಿವಿಸಿಸಿ, ಬಿಎಂಟಿಎಫ್ಗೆ ದೂರು: ಅನುದಾನ ಬಿಡುಗಡೆಯಾಗುವ ಮೊದಲೇ ಬೇಕಾಬಿಟ್ಟಿಯಾಗಿ ಜಾಬ್‌ಕೋಡ್‌ ನೀಡಿರುವುದನ್ನು ಕೂಡಲೇ ಉಪಮುಖ್ಯಮಂತ್ರಿಗಳು ತಡೆಹಿಡಿದು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಜತೆಗೆ ಪಾಲಿಕೆ ಆಯುಕ್ತರು ಕೂಡಲೇ ಜಾಬ್‌ಕೋಡ್‌ ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಪದ್ಮನಾಭರೆಡ್ಡಿ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸೋಮವಾರ ಟಿವಿಸಿಸಿ ಹಾಗೂ ಬಿಎಂಟಿಎಫ್ಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next