Advertisement

“ನಾನಾ” ಮುಖ! ಬದುಕಲು ಕಲಿಸಿದ್ದು ಬಡತನ, ಸಿನಿಮಾಕ್ಕಾಗಿ 3 ವರ್ಷ ಸೇನೆಯಲ್ಲಿ ತರಬೇತಿ

09:40 AM Apr 05, 2019 | Nagendra Trasi |

ರಾಜಕಾರಣಿಗಳು, ಸಿನಿಮಾ ನಟ, ನಟಿಯರು, ಪಾಪ್ ಸಿಂಗರ್ ಗಳ ಬಗ್ಗೆ ಪುಂಖಾನುಪುಂಖವಾಗಿ ಆರೋಪಗಳ ಸರಮಾಲೆ ಇದ್ದಿರುತ್ತದೆ. ಲವ್, ಸೆಕ್ಸ್, ಕ್ರೈಮ್ ಈ ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿರುವುದು ಸುಳ್ಳಲ್ಲ. ಖ್ಯಾತ ನಟ, ನಟಿಯರು ಇದಕ್ಕೆ ಹೊರತಲ್ಲ. ಇವೆಲ್ಲದರ ನಡುವೆಯೂ ಹಲವರು ನಟನೆಯ ಜೊತೆ, ಜೊತೆ ಸಮಾಜಸೇವೆಯ ಮೂಲಕ ಗಮನಸೆಳೆಯುವ ಸೆಲೆಬ್ರಿಟಿಗಳು ಇದ್ದಾರೆ. ಅಂತಹ ಹೆಸರುಗಳ ಸಾಲಿನಲ್ಲಿ ಮರಾಠಿ ರಂಗಭೂಮಿಯಲ್ಲಿ ಖ್ಯಾತರಾಗಿ, ಬಾಲಿವುಡ್ ನಲ್ಲಿ ಮಿಂಚಿದ್ದ ನಾನಾ ಪಾಟೇಕರ್ ಪ್ರಮುಖರು!

Advertisement

ಪರಿಂದಾ, ಪ್ರಹಾರ್, ತಿರಂಗಾ, ಕ್ರಾಂತಿವೀರ್, ಕೋಹ್ರಂ, ಯಶವಂತ್, ಯುಗ್ ಪುರುಷ್ ಹೀಗೆ ಯಂಗ್ ಅಂಡ್ ಎನರ್ಜಿಟಿಕ್ ನಟನೆ, ನಿರರ್ಗಳವಾಗಿ ಡೈಲಾಗ್ ಡೆಲಿವರಿ ಮಾಡುವ ನಾನಾ ಪಾಟೇಕರ್ ದೇಶದ ನಾನಾ ಭಾಷೆಗಳ ಸಿನಿಮಾಗಳಲ್ಲಿ ಲೀಲಾಜಾಲವಾಗಿ ನಟಿಸಿ ಅದ್ಭುತ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಚಿತ್ರಗಳ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ನಾನಾ ಪಾಟೇಕರ್ ಅವರ ನಟನೆಯನ್ನು ಮರೆಯಲು ಸಾಧ್ಯವೇ?

ಸಿನಿಮಾರಂಗಕ್ಕೆ ಬರೋ ಮುನ್ನ “ನಾನಾ” ಜೀವನ ಹೇಗಿತ್ತು ಗೊತ್ತಾ?

ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯ ಮುರುಡ್ ಜಂಜೀರಾದಲ್ಲಿ 1951ರ ಜನವರಿ 1ರಂದು ಪಾಟೇಕರ್ ಜನಿಸಿದ್ದರು. ತಮ್ಮ ಬಾಲ್ಯದ ಕುರಿತು ಸಂದರ್ಶನವೊಂದರಲ್ಲಿ ನಾನಾ ಹೇಳಿದ್ದು..ನಾನು 13 ವರ್ಷದ ಬಾಲಕನಾಗಿದ್ದಾಗ ಮಧ್ಯಮ ವರ್ಗದವರಾಗಿದ್ದೇವು, ನಂತರ ಸಾಮಾನ್ಯ ಮಧ್ಯಮ ವರ್ಗದವರಾದೆವು..ಕೊನೆಗೆ ಏನೂ ಇಲ್ಲದಂತಾಗಿಬಿಟ್ಟೆವು..ಹೌದು ಆಪ್ತರೆನಿಸಿಕೊಂಡವರೇ ನನ್ನ ತಂದೆ ಆಸ್ತಿ ಸೇರಿದಂತೆ ಎಲ್ಲವನ್ನೂ ದೋಚಿಕೊಂಡು ಬಿಟ್ಟಿದ್ದರು.

Advertisement

ಆಗ ತಂದೆಗೆ ಕುಟುಂಬ ನಿರ್ವಹಣೆ ಹೇಗೆ ಮಾಡಬೇಕೆಂಬುದು ದಿಕ್ಕೆ ತೋಚದಂತಾಗಿದ್ದರು. ಆಗ ನಾನು ಶಾಲೆಯಿಂದ ಬಂದ ನಂತರ 8 ಕಿಲೋ ಮೀಟರ್ ದೂರ ಇರುವ ಚುನ್ನಾಭಟ್ಟಿಗೆ ನಡೆದುಕೊಂಡು ಹೋಗಿ ಸಿನಿಮಾ ಪೋಸ್ಟರ್ ಗಳ ನ್ನು ಪೇಯಿಂಟ್ ನಲ್ಲಿ ಬರೆದು ಕೊಡುತ್ತಿದ್ದೆ. ಅದಕ್ಕೆ ನನಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ 35 ರೂಪಾಯಿ! ಕೆಲವೊಮ್ಮೆ ರಸ್ತೆಗಳಿಗೆ ಜೀಬ್ರಾ ಕ್ರಾಸ್ (ರಸ್ತೆ ದಾಟಲು ರಸ್ತೆಯಲ್ಲಿ ಪೆಯಿಂಟ್ ನಿಂದ ಹಾಕುವ ಕಪ್ಪು-ಬಿಳುಪು ಗೆರೆ) ಹಾಕುವ ಕೆಲಸ ಮಾಡಿದ್ದೆ.

ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ನನಗೆ ಮಾನವೀಯತೆ ಮತ್ತು ಹಸಿವು ಬದುಕಿಗೆ ದೊಡ್ಡ ಪಾಠವನ್ನೇ ಕಲಿಸಿಬಿಟ್ಟಿದ್ದವು. ಹೀಗಾಗಿ ನನಗೆ ಯಾವುದೇ ನಟನಾ ಶಾಲೆಗೆ ಹೋಗಬೇಕಾದ ಅಗತ್ಯವಿರಲಿಲ್ಲ! ನನ್ನ ತಂದೆ ಎಲ್ಲವನ್ನೂ ಕಳೆದುಕೊಂಡಾಗ ನಾನು ಬೆಂಬಲಕ್ಕೆ ನಿಂತಿದ್ದೆ. ತನ್ನ ಬಳಿ ಏನೂ ಇಲ್ಲವಲ್ಲಾ ಎಂದು ತಂದೆ ಕೊರಗುತ್ತಿದ್ದರು..ಅಂತೂ ನಾನು 28 ವರ್ಷದವನಾಗಿದ್ದಾಗ ತಂದೆ ಹೃದಯಾಘಾತದಿಂದ ತೀರಿಹೋಗಿದ್ದರು.

13 ವರ್ಷದ ಬಾಲಕನಾಗಿದ್ದಾಗ ಕೆಲಸ ಮಾಡಲು ಆರಂಭಿಸಿದ್ದ ನಾನು ಕಳೆದ 55 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ವಿಜಯ್ ಮೆಹ್ತಾ ಅವರು ನನ್ನ ಮೊತ್ತ ಮೊದಲ ನಾಟಕವನ್ನು ನಿರ್ದೇಶಿಸಿದ್ದರು. ಆ ನಾಟಕದಲ್ಲಿ ಪ್ರತಿಯೊಬ್ಬರು ನನ್ನ ಪಾತ್ರವನ್ನು ಮೆಚ್ಚಿಕೊಂಡು ಹೊಗಳಿದ್ದರು. ನನ್ನ ತಂದೆ ಕೂಡಾ ಮೆಚ್ಚಿದ್ದರು. ನನಗೆ ತಾಯಿ ಮತ್ತು ನನ್ನ 2ನೇ ಮಗ ಮಲಾರ್ ಬಗ್ಗೆ ತುಂಬಾ ಪ್ರೀತಿ. ನನ್ನ 56ನೇ ವಯಸ್ಸಿನವರೆಗೆ ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದೆ. ತದನಂತರ ಸಿಗರೇಟ್ ಸಹವಾಸ ಬಿಟ್ಟುಬಿಟ್ಟೆ!

ಪ್ರಹಾರ್ ಸಿನಿಮಾಕ್ಕಾಗಿ 3 ವರ್ಷ ಸೇನೆಯಲ್ಲಿ ತರಬೇತಿ ಪಡೆದಿದ್ದ ನಾನಾ!

ಮರಾಠಿ ರಂಗಭೂಮಿಯಲ್ಲಿ ಹೆಸರಾಗಿದ್ದ ನಾನಾ ಪಾಟೇಕರ್ 1978ರಲ್ಲಿ ಮುಜಾಫರ್ ಅಲಿ ನಿರ್ದೇಶನದ ಗಮನ್ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್  ಪ್ರವೇಶಿಸಿದ್ದರು. ಬಳಿಕ ಅಂಕುಶ್, ಪ್ರತಿಘಾತ್, ಮೊಹ್ರೆ, ತ್ರಿಶಾಗ್ನಿ, ಆಜ್ ಕಿ ಅವಾಜ್, ಅವಾಂ, ಸಾಗರ್ ಸಂಗಂನಂತಹ ಪ್ರಮುಖ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದರು. ಲಾರ್ಡ್ ಮೌಂಟ್ ಬ್ಯಾಟನ್ ಬ್ರಿಟನ್ ಟೆಲಿವಿಷನ್ ಸೀರೀಸ್ ನಲ್ಲಿ ನಾನಾ ನಾಥೂರಾಮ್ ಗೋಡ್ಸೆ ಪಾತ್ರ ಮಾಡಿದ್ದರು.

1991ರಲ್ಲಿ ನಾನಾ ಪಾಟೇಕರ್ ನಾಯಕ ನಟನಿಂದ ನಿರ್ದೇಶಕನಾಗಿ ಭಡ್ತಿ ಪಡೆದಿದ್ದರು. ಪ್ರಹಾರ್ ಹಿಂದಿ ಸಿನಿಮಾ ನಿರ್ದೇಶಿಸಿದ್ದರು. ಆದರೆ ಈ ಸಿನಿಮಾ ಚಿತ್ರೀಕರಣಕ್ಕೂ ಮುನ್ನ 3 ವರ್ಷಗಳ ಕಾಲ ಮರಾಠ ಲೈಟ್ ಇನ್ ಫ್ಯಾಂಟ್ರಿಯಲ್ಲಿ ತರಬೇತಿ ಪಡೆದಿದ್ದರು! ಇದಕ್ಕಾಗಿ ಗೌರವ ಕ್ಯಾಪ್ಟನ್ ಬಿರುದನ್ನು ಸೇನೆ ನೀಡಿ ಗೌರವಿಸಿತ್ತು… ಈ ಚಿತ್ರ ಫಿಲ್ಮ್ ಫೇರ್ ಪ್ರಶಸ್ತಿಗೂ ಭಾಜನವಾಗಿತ್ತು.

1994ರಲ್ಲಿ ತೆರೆಕಂಡಿದ್ದ ಕ್ರಾಂತಿವೀರ್ ಸಿನಿಮಾದ ನಂತರ ನಾನಾ ಪಾಟೇಕರ್ ಸೂಪರ್ ಸ್ಟಾರ್ ಆಗಿ ಬಿಟ್ಟಿದ್ದರು. 1998ರವರೆಗೆ ನಾನಾ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಸೈ ಎನ್ನಿಸಿಕೊಂಡಿದ್ದರು. ಯಶವಂತ್, ವಾಜೂದ್, ಯುಗ್ ಪುರುಷ್, ಗುಲಾಮ್ ಎ ಮುಸ್ತಾಫಾದ ನಂತರ ನಾನಾ ಪಾಟೇಕರ್ ಸಿನಿಮಾ ನಟನೆಯಿಂದ ವಿಮುಖರಾಗತೊಡಗಿದ್ದರು.

ಕಾರ್ಗಿಲ್ ಯುದ್ಧದ ವೇಳೆ ಸೈನಿಕರ ಜೊತೆ ಬೆಂಬಲಕ್ಕೆ ನಿಂತಿದ್ದ ನಾನಾ!

ಪ್ರಹಾರ್ ಸಿನಿಮಾಕ್ಕಾಗಿ ಮೂರು ವರ್ಷಗಳ ಕಾಲ ಸೇನೆಯಲ್ಲಿ ತರಬೇತಿ ಪಡೆದಿದ್ದ ನಾನಾ ಪಾಟೇಕರ್ 1999ರಲ್ಲಿ ಕಾರ್ಗಿಲ್ ಯುದ್ಧ ಆರಂಭಗೊಂಡಾಗ ಗಡಿಭಾಗಕ್ಕೆ ತೆರಳಿದ್ದ ನಾನಾ ಪಾಟೇಕರ್ ಸೈನಿಕರ ಜೊತೆ ಕಾಲಕಳೆದಿದ್ದರು. ಒಂದು ಶಿಬಿರದಿಂದ ಇನ್ನೊಂದು ಶಿಬಿರಕ್ಕೆ ಹೋಗುತ್ತ ಸೈನಿಕರನ್ನು ಹುರಿದುಂಬಿಸಿದ್ದರಂತೆ! ಭಾರತೀಯ ಸೇನೆಗೆ ಬೋಪೋರ್ಸ್, ಮಿಗ್ ನಿಜವಾದ ಶಕ್ತಿಯಲ್ಲ,  ನಿಜವಾದ ಶಕ್ತಿ ಸೈನಿಕರದ್ದು..ಎಂದು ಹೇಳುವ ಮೂಲಕ ಕಾರ್ಗಿಲ್ ಯುದ್ಧದ ವೇಳೆ ನಾನಾ ಸೈನಿಕರಿಗೆ ಸಾಥ್ ನೀಡಿದ್ದರು.

ಸರಳ ಜೀವಿ, ಲೋಕೋಪಕಾರಿ ನಾನಾ…

ನಾಟಕಗಳಲ್ಲಿ, ಬಾಲಿವುಡ್ ಸಿನಿಮಾಗಳಲ್ಲಿ ವಿಲನ್ ಆಗಿ, ಹೀರೋ ಆಗಿದ್ದ ನಾನಾ ಪಾಟೇಕರ್ ಇಂದಿಗೂ ವಾಸಿಸುತ್ತಿರುವುದು 1 ಬಿಎಚ್ ಕೆ ಕೋಣೆಯಲ್ಲಿ!ತಾಯಿಯೂ ಕೂಡಾ ನಾನಾ ಜತೆಗಿದ್ದರು, ನಿರ್ಮಲಾ ಪಾಟೇಕರ್ (99ವರ್ಷ) ಜನವರಿಯಲ್ಲಿ ಇಹಲೋಕ ತ್ಯಜಿಸಿದ್ದರು.ಅಡುಗೆ ಮಾಡುವುದೆಂದರೆ ನಾನಾ ಗೆ ತುಂಬಾ ಪ್ರೀತಿ. ನಾನಾ ತಯಾರಿಸಿದ ಅಡುಗೆ ರುಚಿ ಸವಿಯಲು ಗೆಳೆಯರ ದಂಡೇ ಬರುತ್ತಂತೆ! ಸರಳವಾಗಿ ಜೀವಿಸುವ ನಾನಾ ಪಾಟೇಕರ್ ತಮ್ಮ ದುಡಿಮೆಯ ಹಣವನ್ನು ರೈತರಿಗೆ, ಕುಡಿಯುವ ನೀರಿಗಾಗಿ ದೇಣಿಗೆ ನೀಡುತ್ತಿದ್ದಾರೆ.

ಬಿಹಾರದಲ್ಲಿ ಪ್ರವಾಹದಿಂದ ಮನೆ, ಮಠ ಕಳೆದುಕೊಂಡವರಿಗಾಗಿ ಅನುಭೂತಿ ಚಾರಿಟೇಬಲ್ ಮೂಲಕ ದೇಣಿಗೆ ನೀಡಿ ಪುನರ್ ವಸತಿ ಕಲ್ಪಿಸಿಕೊಟ್ಟಿದ್ದರು. ರಾಜ್ ಕಪೂರ್ ಪ್ರಶಸ್ತಿ ನೀಡಿದಾಗ ಕೊಟ್ಟ 10 ಲಕ್ಷ ರೂಪಾಯಿ ನಗದನ್ನು ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳಲ್ಲಿ ವಿನಿಯೋಗಿಸುವಂತೆ ಹೇಳಿ ದೇಣಿಗೆ ನೀಡಿ ಬಿಟ್ಟಿದ್ದರು. ಬರಗಾಲದಿಂದಾಗಿ ಸಾವನ್ನಪ್ಪಿರುವ ಸುಮಾರು 62 ರೈತ ಕುಟುಂಬದ ಸದಸ್ಯರಿಗೆ ತಲಾ 15 ಸಾವಿರ ರೂಪಾಯಿ ನೀಡಿದ್ದರು. 2015ರಲ್ಲಿ ಮರಾಠಾವಾಡಾ, ಉಸ್ಮಾನಾಬಾದ್ ಜಿಲ್ಲೆಯ 113 ರೈತ ಕುಟುಂಬಗಳಿಗೂ ಆರ್ಥಿಕ ನೆರವು ನೀಡಿದ್ದರು. 2015 ಸೆಪ್ಟೆಂಬರ್ ನಲ್ಲಿ ನಾನಾ ಪಾಟೇಕರ್ ಸ್ವತಃ ನಾಮ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದರು. ಈ ಮೂಲಕ ನಾನಾ ಪಾಟೇಕರ್ ಬರಗಾಲ ಪೀಡಿತ ಪ್ರದೇಶದ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ಉತ್ತಮ ನಟ, ಉತ್ತಮ ಸಹ ನಟ, ಉತ್ತಮ ವಿಲನ್ ಪಾತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದ ನಾನಾ ಪಾಟೇಕರ್ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಮುಂಗೋಪಿ, ಯಾವುದಕ್ಕೂ ಧೈರ್ಯಗೆಡದ, ಸಾಹಸ ಮನೋಭಾವದ ನಾನಾ ಅಬ್ ತಕ್ ಚಪ್ಪನ್ ಭಾಗ 2 ಸಿನಿಮಾದ ನಂತರ ನಟನೆಗೆ ಗುಡ್ ಬೈ ಹೇಳಿದ್ದರು…ಆದರೆ ನಾನಾ ಪಾಟೇಕರ್ ಎಂಬ ನಟ ಸಾರ್ವಭೌಮನ ನಟನೆ ಹೇಗೆ ಮರೆಯಲು ಸಾಧ್ಯ?!

Advertisement

Udayavani is now on Telegram. Click here to join our channel and stay updated with the latest news.

Next