ಬೆಂಗಳೂರು: ಕಲಾಸಿಪಾಳ್ಯದ ಮಿನರ್ವ ಸರ್ಕಲ್ ಬಳಿಯ ಎಟಿಎಂ ಕೇಂದ್ರದ ಬಳಿ ಪತ್ತೆಯಾದ ಮೂರು ಬಾಕ್ಸ್‌ಗಳು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು. ಬಳಿಕ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಪೊಲೀಸರು ಬಂದು ತಪಾಸಣೆ ನಡೆಸಿದಾಗ ಚಿಂದಿ ಆಯುವ ವ್ಯಕ್ತಿ ಮಾಡಿದ ಎಡವಟ್ಟು ಎಂಬುದು ಗೊತ್ತಾಗಿ ಎಲ್ಲರೂ ನಿರಾಳರಾದರು.
ಸೋಮವಾರ ಬೆಳಗ್ಗೆ 11 ಗಂಟೆಗೆ ಮಿನರ್ವ ಸರ್ಕಲ್ ಬಳಿಯ ಖಾಸಗಿ ಬ್ಯಾಂಕ್ ಎಟಿಎಂ ಬಳಿ ಎರಡು ಬಾಕ್ಸ್ ಗಳು ಪತ್ತೆಯಾಗಿತ್ತು. ಆತಂಕಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮೂಲಕ ತಪಾಸಣೆ ನಡೆಸಿದರು.
ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ, ಎಟಿಎಂ ಕೇಂದ್ರದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿಂದಿ ಆಯುವ ವ್ಯಕ್ತಿಯೊಬ್ಬ ಇಟ್ಟು ಹೋಗಿದ್ದಾನೆ ಎಂಬುದು ಖಾತ್ರಿ ಆಯಿತು ಎಂದು ಪೊಲೀಸರು ಮಾಹಿತಿ ನೀಡಿದರು.
ಎಟಿಎಂನಲ್ಲಿ ಹಣ ತುಂಬುವ ಬಾಕ್ಸ್ ಗಳು: ಭಿಕ್ಷುಕ ತಂದಿಟ್ಟಿದ್ದ ಬಾಕ್ಸ್‌ಗಳು ಎಟಿಎಂ ಯಂತ್ರದ ಒಳಭಾಗದಲ್ಲಿ ಹಣ ತುಂಬಿ ಇಡಲು ಬಳಸಲಾಗುತ್ತದೆ. ಹೀಗಾಗಿ ಬ್ಯಾಂಕ್‌ನ ಅಧಿಕಾರಿಗಳನ್ನು ಪ್ರಶ್ನಿಸಿದಾಗ ತಮ್ಮ ಎಟಿಎಂ ಕೇಂದ್ರಕ್ಕೆ ಸಂಬಂಧಿಸಿದಲ್ಲ ಎಂದಿದ್ದಾರೆ. ಆ ನಂತರ ತನಿಖೆ ಆರಂಭಿಸಿದಾಗ ಭಿಕ್ಷುಕ, ಈ ಮೂರು ಬಾಕ್ಸ್‌ಗಳನ್ನು ಬೇರೆಡೆ ತಂದು, ಗುಜರಿಯಲ್ಲಿ ಮಾರಾಟಕ್ಕೆ ಹೋಗಿದ್ದಾನೆ. ಆದರೆ, ಗುಜರಿಯವರು ಖರೀದಿ ಮಾಡಿಲ್ಲ. ಹೀಗಾಗಿ ಎಟಿಎಂ ಕೇಂದ್ರದ ಬಳಿ ಇಟ್ಟು ಹೋಗಿದ್ದಾನೆ. ಆದರಿಂದ ಬಾಕ್ಸ್‌ಗಳಲ್ಲಿ ತಯಾರಿಕಾ ಕಂಪನಿಯ ಕೆಲ ನೋಂದಣಿ ನಂಬರ್ ಗಳಿದ್ದು, ಪರಿಶೀಲಿಸಿ ತನಿಖೆ ಮುಂದು ವರಿ ಸಲಾಗಿದೆ. ಈ ಬಾಕ್ಸ್ ಗಳ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸದ್ಯ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.