Advertisement

ವಿವಿಗಳ ಡಾಕ್ಟರೆಟ್ ಮಾರಾಟಕ್ಕಿದೆ!

12:19 PM Aug 02, 2019 | Team Udayavani |

ಮಂಡ್ಯ: ಒಂದು ಕಾಲದಲ್ಲಿ ಗೌರವ-ಘನತೆ ಮತ್ತು ಸಾಧನೆಯ ಸಂಕೇತವಾಗಿದ್ದ ಡಾಕ್ಟರೆಟ್ ಪದವಿ ಇಂದು ಮಾರಾಟಕ್ಕಿಟ್ಟ ಸರಕಾಗಿದ್ದು, ಇಂತಹದೊಂದು ಡಾಕ್ಟರೆಟ್ ಪಿಡುಗಿಗೆ ಮಂಡ್ಯ ಕೂಡ ಹೊರತಾಗಿಲ್ಲ.

Advertisement

ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಅಪರೂಪದ ಸಾಧಕರು ಹಾಗೂ ಮೌಲ್ಯಯುತ ವ್ಯಕ್ತಿಗಳನ್ನು ಗುರುತಿಸಿ ಹಿಂದೆ ಡಾಕ್ಟರೆಟ್ ನೀಡಲಾಗುತ್ತಿತ್ತು. ಇಂದು ಸಮಾಜಸೇವೆಯ ಕನಿಷ್ಠ ಪರಿಚಯ ಪತ್ರಗಳನ್ನು ನೀಡಿದವರಿಗೂ ಡಾಕ್ಟರೆಟ್ ಪದವಿ ನೀಡಲಾಗುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಡಾಕ್ಟರೆಟ್ ಪಡೆದವರ ಸಂಖ್ಯೆ 200ಕ್ಕೂ ಹೆಚ್ಚಿದೆ. ಸ್ವಾಯತ್ತ ವಿಶ್ವವಿದ್ಯಾಲಯಗಳು ಅರ್ಹತೆ, ಸಾಧನೆಯನ್ನು ಗುರುತಿಸದೆ ಮನಸೋಇಚ್ಛೆ ಪದವಿ ಪ್ರದಾನ ಮಾಡುತ್ತಿರುವುದರಿಂದ ಡಾಕ್ಟರೆಟ್ ಈಗ ಮೌಲ್ಯವನ್ನೇ ಕಳೆದುಕೊಂಡಿದೆ.

ಹಣ ಕೊಟ್ಟರೆ ಸಿಗುವ ಡಾಕ್ಟರೆಟ್: ಸಮಾಜ ಸೇವೆ ಹೆಸರಿನಲ್ಲಿ ಮಳವಳ್ಳಿ ತಾಲೂಕಿನ 12 ಮಂದಿಗೆ ಒಂದು ವರ್ಷದ ಅವಧಿಯಲ್ಲಿ ಚೆನ್ನೈನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೊಂದು ಡಾಕ್ಟರೆಟ್ ಪದವಿ ನೀಡಿರುವುದು ಜನರ ಕುತೂಹಲಕ್ಕೂ ಕಾರಣವಾಗಿದೆ. ಈ ಡಾಕ್ಟರೆಟ್ ಪಡೆಯಲು ಯಾವುದೇ ಸಂಶೋಧನೆ ನಡೆಸಬೇಕಿಲ್ಲ, ಪ್ರಬಂಧ ಮಂಡಿಸಬೇಕಿಲ್ಲ.

ಕಷ್ಟಪಟ್ಟು ಸಾಧನೆಯನ್ನೂ ಮಾಡಬೇಕಿಲ್ಲ. ಹಣ ಕೊಟ್ಟರೆ ಸಿಗುವ ತರಕಾರಿಯಂತಾಗಿದೆ ಡಾಕ್ಟರೆಟ್. ಕೇವಲ 15 ಸಾವಿರ ರೂ. ನಿಂದ 20 ಸಾವಿರ ರೂ.ಗೆ ಡಾಕ್ಟರೆಟ್ ಸಿಗುತ್ತಿದೆ. ಅಲ್ಲದೆ, ಹತ್ತು ಡಾಕ್ಟರೆಟ್ ಕೊಡಿಸಿದ ಮಧ್ಯವರ್ತಿಗಳಿಗೆ ಒಂದು ಡಾಕ್ಟರೆಟ್ ಉಚಿತವಾಗಿ ನೀಡಲಾಗುತ್ತಿದೆ. ಇದೊಂದು ದೊಡ್ಡದಂಧೆಯಾಗಿ ಮಾರ್ಪಟ್ಟಿದ್ದು, ಡಾಕ್ಟರೆಟ್ ಬಯಸುವಂತಹವರನ್ನು ಬಂಡವಾಳ ಮಾಡಿಕೊಂಡು ದುಡ್ಡು ಮಾಡಿಕೊಳ್ಳುವ ದಂಧೆ ನಿರಂತರವಾಗಿ ಸಾಗಿದೆ.

ಡಾಕ್ಟರೆಟ್ ಕೊಡಿಸಲೂ ಮಧ್ಯವರ್ತಿಗಳು: ಡಾಕ್ಟರೆಟ್ ಕೊಡಿಸುವುದಕ್ಕೆಂದೇ ಜಿಲ್ಲೆಯೊಳಗೆ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಡಾಕ್ಟರೆಟ್ ಬಯಸುವವರಿಂದ ಸಾವಿರಾರು ರೂ. ಹಣ ಪಡೆದು ಬೇಡಿಕೆ ಇಡುತ್ತಾ ಹಣ ವಸೂಲಿ ಮಾಡುತ್ತಿದ್ದಾರೆ. ನಂತರ ಬೆಂಗಳೂರಿನಲ್ಲಿರುವ ಸಂಪರ್ಕ ಜಾಲ ಸಂಸ್ಥೆಗಳೊಡನೆ ವ್ಯವಹರಿಸಿ ವಿವಿಧ ವಿಶ್ವವಿದ್ಯಾಲಯಗಳಿಂದ ಡಾಕ್ಟರೆಟ್ ಕೊಡಿಸುತ್ತಿದ್ದಾರೆ. ಮಧ್ಯವರ್ತಿಗಳಾಗಿ ಕಮಿಷನ್‌ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಇದಕ್ಕೆ ಯಾವುದೇ ಕಡಿವಾಣ ಹಾಕದೆ ಮೌನ ವಹಿಸಿರುವುದು ದಂಧೆಕೋರರ ಹಣ ಲೂಟಿ ಮಾಡಲು ಎಡೆಮಾಡಿ ಕೊಟ್ಟಂತಾಗಿದೆ.

Advertisement

ಹಿಂದೆ ನಕಲಿ ಡಾಕ್ಟರ್‌ಗಳನ್ನು ತಡೆಯುವ ಸಲುವಾಗಿ ಆರೋಗ್ಯ ಇಲಾಖೆ ವಿಚಕ್ಷಣ ದಳದ ತಂಡವೊಂದನ್ನು ರಚನೆ ಮಾಡಿತ್ತು. ಅದೇ ಮಾದರಿಯಲ್ಲಿ ಡಾಕ್ಟರೆಟ್ ಪಡೆದವರ ಸಾಧನೆಯನ್ನು ಪತ್ತಹಚ್ಚಲು ಶಿಕ್ಷಣ ಇಲಾಖೆ ಹೊಸದೊಂದು ತಂಡ ರಚಿಸುವ ಅಗತ್ಯತೆ ಇದೆ ಎಂಬುದು ಎಲ್ಲರ ಒತ್ತಾಸೆಯಾಗಿದೆ.

•ಪದವಿ ಕೊಡಿಸಲು 15 ಸಾವಿರ ರೂ.ನಿಂದ 25 ಸಾವಿರ ರೂ. ವಸೂಲಿ

•ಜಿಲ್ಲೆಯಲ್ಲಿ 1 ವರ್ಷದಲ್ಲಿ ಡಾಕ್ಟರೆಟ್ ಪಡೆದವರ ಸಂಖ್ಯೆ 200ಕ್ಕೂ ಹೆಚ್ಚಿದೆ

•ಮಳವಳ್ಳಿ ತಾಲೂಕಿನ 12 ಮಂದಿಗೆ ಒಂದೇ ವರ್ಷದ ಚೆನ್ನೈನ ಪ್ರತಿಷ್ಠಿತ ವಿವಿಯಿಂದ ಡಾಕ್ಟರೆಟ್

•ಹತ್ತು ಡಾಕ್ಟರೆಟ್ ಕೊಡಿಸಿದ ಮಧ್ಯವರ್ತಿಗಳಿಗೆ ಒಂದು ಡಾಕ್ಟರೆಟ್ ಉಚಿತ

•ಬೆಂಗಳೂರಿನಲ್ಲಿರುವ ಸಂಪರ್ಕ ಜಾಲ ಸಂಸ್ಥೆಗಳೊಡನೆ ವ್ಯವಹರಿಸಿ ಡಾಕ್ಟರೆಟ್ ಕೊಡಿಸುವ ಮಧ್ಯವರ್ತಿಗಳು

Advertisement

Udayavani is now on Telegram. Click here to join our channel and stay updated with the latest news.

Next