Advertisement

ಎಕ್ಕೂರಿನಲ್ಲಿ ಫಿಶರೀಸ್‌ ವಿಶ್ವವಿದ್ಯಾನಿಲಯ?

12:30 AM Oct 27, 2020 | mahesh |

ಮಂಗಳೂರು: ನಗರ ಹೊರವಲಯದ ಎಕ್ಕೂರಿನಲ್ಲಿ ಅರ್ಧ ಶತಮಾನ ಇತಿಹಾಸವುಳ್ಳ ಮೀನುಗಾರಿಕೆ ಕಾಲೇಜು ಇದ್ದು, ಇದನ್ನು ಕೇಂದ್ರೀಕರಿಸಿ ಮೀನುಗಾರಿಕೆ ವಿಶ್ವವಿದ್ಯಾನಿಲಯ ರೂಪುಗೊಳ್ಳುವುದು ಕರಾವಳಿ ಸಹಿತ ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಅನುಕೂಲ.

Advertisement

ಇಂಥ ಪ್ರಸ್ತಾವ ಸೋಮವಾರ ಮೀನುಗಾರಿಕೆ ಕಾಲೇಜಿ ನಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಂಡನೆ ಯಾಗಿದ್ದು, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸುರು ನಿಶಾನೆ ತೋರಿದ್ದಾರೆ. ಈ ಬಗ್ಗೆ ವಿಶೇಷ ಟಿಪ್ಪಣಿ ಸಹಿತ ಪ್ರಸ್ತಾ ವನೆಯನ್ನು ವಾರದೊಳಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಸಚಿವ ಕೋಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಡೀನ್‌ ಡಾ| ಸೆಂಥಿಲ್‌ ವೇಲು ಹಾಗೂ ಕಾಲೇಜಿನ ಕೌಶಲ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರದ ಸಂಯೋಜಕ ಡಾ| ರಾಮಚಂದ್ರ ನಾಯಕ್‌ ಅವರು ಕಾಲೇಜನ್ನು ವಿ.ವಿ.ಯನ್ನಾಗಿ ಪರಿವರ್ತಿಸಬೇಕು ಎಂಬ ಪ್ರಸ್ತಾವ ಮಂಡಿಸಿದರು.

ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿ.ವಿ. ಸ್ಥಾಪಿಸುವುದರಿಂದ ಆಗುವ ಪ್ರಯೋಜನ, ಮೀನಿನ ಉತ್ಪಾದನೆಯಲ್ಲಿ ಹೆಚ್ಚಳ, ಉದ್ಯೋಗ ಸೃಷ್ಟಿ, ಸ್ವ ಉದ್ಯೋಗದ ಅವಕಾಶಗಳು, ರಾಜ್ಯ ಮತ್ತು ದೇಶಕ್ಕೆ ಆಗುವ ಅನುಕೂಲಗಳು ಇತ್ಯಾದಿಯಾಗಿ ಸಮಗ್ರ ವಿವರಗಳನ್ನು ಒಳಗೊಂಡ ವಿಶೇಷ ಟಿಪ್ಪಣಿಯನ್ನು ಸಿದ್ಧಪಡಿಸಿ ವಾರದೊಳಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ಮೀನುಗಾರಿಕೆ ಕಾಲೇಜಿನ ಡೀನ್‌ ಅವರಿಗೆ ಸೂಚಿಸಿದರು.

ಈ ವಿಶೇಷ ಟಿಪ್ಪಣಿಯನ್ನು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯವರ ಮುಂದಿಟ್ಟು ಚರ್ಚಿಸಿ, ಬಳಿಕ ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು. ಸರಕಾರವು ಇದಕ್ಕೆ ಅನುಮತಿ ನೀಡಬಹುದೆಂಬ ವಿಶ್ವಾಸ ತನಗಿದೆ ಎಂದು ಸಚಿವರು ತಿಳಿಸಿದರು.

Advertisement

ಮೀನುಗಾರಿಕೆ ಕಾಲೇಜು 51ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 1960ರಲ್ಲಿ ಸ್ಥಾಪನೆಯಾದ ಇದು ರಾಜ್ಯದ ಏಕೈಕ ಮೀನುಗಾರಿಕೆ ಕಾಲೇಜು. ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಲ್ಲಿ ಮೀನುಗಾರಿಕೆ ವಿ.ವಿ. ಸ್ಥಾಪನೆಯಾಗಿದ್ದು, ಈ ರಾಜ್ಯಗಳಲ್ಲಿ ಮೀನು ಉತ್ಪಾದನೆ ಜಾಸ್ತಿಯಾಗಿದೆ. ಹಾಗಾಗಿ ರಾಜ್ಯದಲ್ಲಿಯೂ ಮೀನುಗಾರಿಕೆ ವಿ.ವಿ. ಸ್ಥಾಪಿಸಬೇಕು ಎಂದು ಡೀನ್‌ ಡಾ| ಸೆಂಥಿಲ್‌ ವೇಲು ಮನವಿ ಮಾಡಿದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅನುಷ್ಠಾನ, ಕೌಶಲ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಧುನಿಕ ಫಿಶ್‌ ಫಾರಂ ಮತ್ತು ಸಂಶೋಧನ ಕೇಂದ್ರ ಹಾಗೂ ಪ್ರಸ್ತಾವಿತ ಕರ್ನಾಟಕ ಮೀನುಗಾರಿಕೆ ವಿಜ್ಞಾನಗಳ ವಿ.ವಿ. ಸ್ಥಾಪನೆಯ ಬಗ್ಗೆ ಡಾ| ರಾಮಚಂದ್ರ ನಾಯಕ್‌ ವಿವರ ನೀಡಿದರು. ಮೀನುಗಾರಿಕೆ ವಿ.ವಿ. ಸ್ಥಾಪನೆಯಾದರೆ ಅದಕ್ಕೆ ಸಂಯೋಜನೆಗೊಂಡು ಗಂಗೊಳ್ಳಿ, ಶಿವಮೊಗ್ಗ, ವಿಜಯಪುರದ‌ಲ್ಲಿ ಹೊಸ ಮೀನುಗಾರಿಕೆ ಕಾಲೇಜು ಸ್ಥಾಪನೆ, 5 ಹೊಸ ಮೀನುಗಾರಿಕೆ ಪಾಲಿಟೆಕ್ನಿಕ್‌ ಮತ್ತು 5 ಮೀನುಗಾರಿಕೆ ಸಂಶೋಧನ ಕೇಂದ್ರಗಳನ್ನು ಆರಂಭಿಸಬಹುದಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್‌, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್‌. ದೊಡ್ಡಮನಿ, ಅರುಣ್‌ ಧನಪಾಲ್‌, ಕಾರ್ಪೊರೇಟರ್‌ ಭರತ್‌ ಕುಮಾರ್‌, ಮೀನುಗಾರಿಕೆ ಮುಖಂಡರಾದ ನಿತಿನ್‌ ಕುಮಾರ್‌, ಮೋಹನ್‌ ಬೆಂಗ್ರೆ, ಶಶಿಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next