Advertisement
ಕನ್ನಡ ಭಾಷೆಗಿಂದು ಸಾಂಸ್ಥಿಕ ಮನ್ನಣೆಯು ಈ ಹಿಂದೆಂದಿಗಿಂತಲೂ ಹೆಚ್ಚಾಗುತ್ತಿದೆ. ಅಖೀಲ ಭಾರತೀಯ ಮಟ್ಟದ ಸಂಸ್ಥೆಗಳು ಉದ್ಯೋಗಕ್ಕಾಗಿ ಆಯ್ಕೆ ಮಾಡಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಮಾತ್ರವಲ್ಲದೆ ಎಂಜಿನಿಯರಿಂಗ್ನಂತಹ ಪದವಿಯನ್ನೂ ಕನ್ನಡ ಭಾಷೆಯÇÉೇ ಓದಿ ಪಡೆಯಬಹುದಾದ ಅನುಕೂಲಕರ ಸ್ಥಿತಿ ನಿರ್ಮಾಣವಾಗುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಭಾಷೆ, ಸಾಹಿತ್ಯಗಳ ಅಧ್ಯಯನಕ್ಕಾಗಿಯೇ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ.
Related Articles
Advertisement
ಮಹದುದ್ದೇಶದ ಯೋಜನೆ1966ರಲ್ಲಿ ಆರಂಭವಾದ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ (ಪ್ರಸ್ತುತ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ) ಉದ್ದೇಶ ಮತ್ತು ರೂಪುಗೊಳ್ಳುವಿಕೆಯನ್ನು ಕುರಿತು ಹೇಳುವಾಗ “ಬೋಧನೆ, ಸಂಶೋಧನೆ, ಸಂಪಾದನೆಗಳೊಂದಿಗೆ, ಬೇರೆ ಬೇರೆ ಭಾಷೆಗಳಿಂದ ಬಗೆಬಗೆಯಾದ ಗ್ರಂಥಗಳನ್ನು ಕನ್ನಡಕ್ಕೆ ತರಬೇಕು, ಕನ್ನಡದ ಶ್ರೇಷ್ಠ ಕೃತಿಗಳನ್ನು ಇತರ ಭಾಷೆಗಳವರಿಗೆ ಪರಿಚಯಿಸಬೇಕು, ಇನ್ನೂ ಬೆಳಕಿಗೆ ಬಾರದ ಪ್ರಾಚೀನ ಗ್ರಂಥಗಳನ್ನು ಶಾಸ್ತ್ರೀಯವಾಗಿ ಪ್ರಕಟಿಸಬೇಕು, ಜನಪದದಂಥ ಮೂಲೆಗುಂಪಾದ ವಿಷಯಗಳನ್ನು ಅಧ್ಯಯನ ವ್ಯಾಪ್ತಿಗೆ ಒಳಪಡಿಸಬೇಕು, ಭಾರತೀಯ ಸಾಹಿತ್ಯದ ಹಿನ್ನೆಲೆಯಲ್ಲಿ ಕನ್ನಡದ ವಲಯವನ್ನು ವಿಸ್ತೃತಗೊಳಿಸಬೇಕು, ಕನ್ನಡ ಭಾಷೆಯನ್ನು ಆಧುನಿಕ ಕಾಲಕ್ಕೆ ಅನುಗುಣವಾಗಿ ಬಲಪಡಿಸಬೇಕು…’ ಇವೇ ಮೊದಲಾದ ಉದ್ದೇಶಗಳಿಗೆ ಅನುಗುಣವಾಗಿ ವ್ಯವಸ್ಥಿತ ಯೋಜನೆಗಳನ್ನು ಕೈಗೊಂಡು ಅದನ್ನು ಶ್ರದ್ಧೆ- ನಿಷ್ಠೆಗಳಿಂದ ಕಾರ್ಯರೂಪಕ್ಕೆ ತರುವ, ಕನ್ನಡದ ಬಹುಮುಖ ಬೆಳವಣಿಗೆಗೆ ಉತ್ತೇಜನ ನೀಡುವ, ನಾನಾ ಕಡೆ ಹಂಚಿಹೋದ ಶಕ್ತಿಗಳನ್ನೆಲ್ಲ ಒಂದೆಡೆ ಸೇರಿಸುವ ರಂಗವಾಗಿ ಸಜ್ಜುಗೊಳಿಸಲು ಕನ್ನಡ ಅಧ್ಯಯನ ಸಂಸ್ಥೆ ರೂಪುಗೊಂಡಿತು’ ಎಂದು ಹೇಳಲಾಗಿದೆ. ಮೊದಲ ನಿರ್ದೇಶಕರಾಗಿದ್ದ ಪೊ›| ದೇಜಗೌ ಅವರು ಹೇಳಿದ “ಈ ಸಂಸ್ಥೆಯೊಂದು ಭೂಮ ಬಂಧುರ ವಿಸ್ಮಯವಾಗಿ, ಕರ್ನಾಟಕ ಸಾಹಿತ್ಯ, ಸಂಸ್ಕೃತಿಗಳ ತಲಕಾವೇರಿಯಾಗಿ, ಕನ್ನಡಿಗರ ಪವಿತ್ರ ಯಾತ್ರಾಸ್ಥಾನವಾಗಿ ನಾಡಿನ ಪುಣ್ಯವೇ ಸಾಕಾರಗೊಂಡಂತೆ ವಿಕಾಸಗೊಳ್ಳುತ್ತದೆ’ ಎನ್ನುವ ಮಾತುಗಳು ಅಕ್ಷರಶಃ ಕಾರ್ಯರೂಪಕ್ಕೆ ಬಂದವು. ಅಧ್ಯಯನ ಪೀಠಗಳ ಕೊಡುಗೆ
ಅನೇಕ ಕಡೆಗಳಲ್ಲಿ ವಿಶ್ವವಿದ್ಯಾನಿಲಯದ ಒಂದು ವಿಭಾಗ ಮಾತ್ರವೇ ಆಗಿ ಉಳಿಯದೆ ವಿಭಾಗವೇ ಒಂದು ವಿಶ್ವವಿದ್ಯಾನಿಲಯದಂತೆ ಬೆಳೆಯಿತು. ಸಾಹಿತ್ಯ, ಹಸ್ತಪ್ರತಿಶಾಸ್ತ್ರ, ಭಾಷಾವಿಜ್ಞಾನ, ಜಾನಪದ ಅಧ್ಯಯನ, ಶಾಸನಶಾಸ್ತ್ರ, ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ತಜ್ಞತೆಯನ್ನು ಸಾಧಿಸಿ ಮುಂದೆ ಇವೆಲ್ಲವೂ ಒಂದೊಂದೂ ಸ್ವತಂತ್ರ ವಿಭಾಗಗಳಾಗಿ ಬೆಳೆಯುವಷ್ಟು ಜೀವದ್ರವ್ಯವನ್ನು ಒಂದು ಕನ್ನಡ ಅಧ್ಯಯನ ಸಂಸ್ಥೆ ಮಾಡಿತು. ಈ ವಿಭಾಗದ ಕಾರ್ಯದಿಂದ ಪ್ರೇರಣೆ ಪಡೆದಂತೆ ಧಾರವಾಡ, ಗುಲ್ಬರ್ಗ, ಶಿವಮೊಗ್ಗ, ಬೆಂಗಳೂರು ಹೀಗೆ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಕನ್ನಡ ಅಧ್ಯಯನ ಪೀಠಗಳು ಬೆಳೆದು ನಿಂತವು. ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ ಸಂಶೋಧನೆ, ಪುಸ್ತಕಗಳ ಪ್ರಕಟನೆ, ಹಸ್ತಪ್ರತಿಗಳ ಸಂಗ್ರಹ – ಸಂಪಾದನೆಯ ಜತೆಜತೆಗೆ ಮ್ಯೂಸಿಯಂಗಳ ನಿರ್ಮಾಣದಲ್ಲೂ ಕೆಲಸಮಾಡಿ ನಾಡಿನ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಈ ಪೀಠಗಳು ಮಹತ್ವದ ಕೊಡುಗೆ ನೀಡಿದವು. ದಿಗ್ಗಜರಿಂದ ಮಹತ್ವದ ಕೆಲಸ
ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ಅಧ್ಯಯನ ಪೀಠಗಳೂ ನೂರಾರು ಗ್ರಂಥಗಳನ್ನು ಪ್ರಕಟಸಿದ್ದು ಮಾತ್ರವಲ್ಲ, ವಿಶ್ವವಿದ್ಯಾನಿಲಯದ ಜ್ಞಾನವನ್ನು ಜನರೆಡೆಗೆ ತೆಗೆದುಕೊಂಡು ಹೋಗುವ ಪ್ರಚಾರ ಉಪನ್ಯಾಸಗಳ ಆಯೋಜನೆ, ಜನಪದರ ಜ್ಞಾನದ ದಾಖಲೀಕರಣಗಳನ್ನು ಮಾಡುತ್ತಾ, ಇಲ್ಲಿನ ಪ್ರಾಧ್ಯಾಪಕರಿಂದ ಕನ್ನಡ ಸಾಹಿತ್ಯದ ಮಹತ್ವದ ಕೃತಿಗಳ ನಿರ್ಮಾಣವೂ ಆಯಿತು. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯಗಳ ಓದು ವಿಮರ್ಶೆ ಮಾತ್ರವಲ್ಲದೆ, ಛಂದಸ್ಸು, ಅಲಂಕಾರ, ಕಾವ್ಯಮೀಮಾಂಸೆ, ಭಾಷಾ ವಿಜ್ಞಾನ ಮೊದಲಾದ ಕ್ಷೇತ್ರಗಳ ಅಪ್ರತಿಮ ವಿದ್ವಾಂಸರ ತಂಡವೇ ಹುಟ್ಟಿಕೊಂಡಿತು. ಪ್ರಾತಃಸ್ಮರಣೀಯರಾದ ಟಿ.ಎಸ್.ವೆಂಕಣ್ಣಯ್ಯ, ಕುವೆಂಪು, ದೇಜಗೌ, ಹಾಮಾನಾ, ಎಸ್ವಿಪಿ, ಜಿಎಸ್ಎಸ್, ತೀನಂಶ್ರೀ, ಅನಕೃ ಮೊದಲಾದವರು ಬಿತ್ತಿದ ಈ ವಿದ್ವತ್ತಿನ ಪರಂಪರೆ ಬೆಳೆದು ಚಿದಾನಂದ ಮೂರ್ತಿ, ಟಿ.ವಿ. ವೆಂಕಟಾಚಲ ಶಾಸಿŒ, ಸಿಪಿಕೆ, ಚಂದ್ರಶೇಖರ ಕಂಬಾರ, ವಿವೇಕ ರೈ, ಎಲ್ .ಬಸವರಾಜು, ಆರ್.ಸಿ.ಹಿರೇಮಠ, ಸಂಗಮೇಶ ಸವದತ್ತಿಮಠ, ಡಿ.ಆರ್.ನಾಗರಾಜ್ , ಸಿದ್ದಲಿಂಗಯ್ಯ, ಹಂಪನಾ, ಬರಗೂರು ರಾಮಚಂದ್ರಪ್ಪ, ಚಿನ್ನಪ್ಪ ಗೌಡ ಮೊದಲಾದ ಮಹನೀಯರು ಕನ್ನಡ ಪೀಠಗಳನ್ನು ಕಟ್ಟಿ ಅಲ್ಲಿ ಕಾರ್ಯನಿರ್ವಹಿಸಿದ್ದರು. ಹಳೆಯ ವೈಭವ ಮಸುಕಾಗಿದೆ…
ಈ ಪೀಠಗಳು ಇಂದು ಹೇಗೆ ಕಾರ್ಯನಿರ್ವಹಿಸುತ್ತಿವೆ ಎನ್ನುವುದರ ಕಡೆಗೊಮ್ಮೆ ತಿರುಗಿ ನೋಡಿದರೆ ಕಾಣುವುದೇನು? ಇಂದು ಸರಕಾರದ ಯೋಜನೆಯಂತೆ ಜಿಲ್ಲೆಗಳಿಗೂ ಒಂದೊಂದು ವಿಶ್ವವಿದ್ಯಾನಿಲಯಗಳು ಹುಟ್ಟಿಕೊಂಡಿದೆ. ಹಳೆಯ ವಿಶ್ವವಿದ್ಯಾನಿಲಯಗಳು ವಿಭಜನೆಗೊಂಡು ಮೂರು ನಾಲ್ಕು ಭಾಗಗಳಾಗಿದೆ. ಪ್ರತೀ ವಿಶ್ವವಿದ್ಯಾನಿಲಯಕ್ಕೂ ಒಂದೊಂದು ಕನ್ನಡ ಪೀಠ ಪ್ರಾರಂಭವಾಗಿದೆ. ಆದರೆ ಹಳೆಯ ವೈಭವ ಮಸುಕಾಗಿದೆ. ಕಾರಣಗಳು ಹಲವಿವೆ. ಮುಖ್ಯವಾಗಿ, ವಿಶ್ವ ವಿದ್ಯಾನಿಲಯಗಳಿಗೆ ದಶಕಗಳ ಕಾಲ ಯಾವ ಹೊಸ ನೇಮಕಾತಿಗಳೂ ನಡೆಯದ ಕಾರಣ ವಿಭಾಗಗಳು ಕೃಶವಾಗಿದೆ. ಹತ್ತಾರು ಪ್ರಾಧ್ಯಾಪಕರು ಕೆಲಸ ಮಾಡುತ್ತಿದ್ದ ವಿಭಾಗಗಳಲ್ಲಿ ನಿವೃತ್ತಿಯ ಬಳಿಕ ಹೊಸ ನೇಮಕಾತಿಗಳೇ ಆಗದೇ ಒಬ್ಬಿಬ್ಬರು ಕಾರ್ಯ ನಿರ್ವಹಿಸುತ್ತಿ¨ªಾರೆ. ಅನೇಕ ಕಡೆ ವಿಭಾಗಗಳಿಗೆ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದು ಪಾಠಗಳಿಗಷ್ಟೇ ಸೀಮಿತವಾಗುತ್ತಿವೆ. ಒಂದೊಂದು ವಿಶ್ವವಿದ್ಯಾನಿಲ ಯವೂ ಹತ್ತಾರು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಿಗೆ (ಪಿ.ಜಿ. ಸೆಂಟರ್) ಅನುಮತಿ ನೀಡಿದ ಪರಿಣಾಮವಾಗಿ ಮೂಲ ಸೌಕರ್ಯ ಗಳು, ಬೋಧಕರು, ಗ್ರಂಥಾಲಯ ಯಾವುದೂ ಇಲ್ಲದೆಯೂ ಪ್ರತೀ ವರ್ಷ ನೂರಾರು ಪದವೀಧರರು ಹೊರಬರುತ್ತಿದ್ದಾರೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಜತೆಗೆ ಹಳೆಗನ್ನಡ ಬೇಡ, ಕಾವ್ಯಮಿಮಾಂಸೆ ಬೇಡ, ಛಂದಸ್ಸು ಬೇಡ, ಭಾಷಾ ವಿಜ್ಞಾನ ಬೇಡ, ಮಹಾಪ್ರಾಣ ಬೇಡ ಎನ್ನುವ ನಕಾರಾತ್ಮಕ ವಾದಗಳ ಸೈದ್ಧಾಂತಿಕ ಭಾರಕ್ಕೆ ತಾತ್ವಿಕವಾಗಿಯೂ ಕುಸಿಯುತ್ತಿವೆ. ಅಂತಿಮವಾಗಿ ಯಾವ ಮಹಾನ್ ಉದ್ದೇಶವನ್ನು ಈ ಪೀಠಗಳ ಮೂಲಕ ಸಾಧಿಸಬೇಕು ಎನ್ನುವ ಕನಸನ್ನು ಕಟ್ಟಲಾಗಿತ್ತೋ ಅವೆಲ್ಲ ಮರೆಯಾಗಿ ನಾಡಿನ ಸಮಗ್ರತೆಯ ದೃಷ್ಟಿಕೋನವೇ ಇಲ್ಲವಾಗುತ್ತಾ ತೀರಾ ಪ್ರಾದೇಶಿಕಗೊಳ್ಳುತ್ತಿದೆ. ಪಠ್ಯಕ್ರಮವೆಲ್ಲ ಸ್ಥಳೀಕರಣಗೊಳ್ಳುವ ನೆಪದಲ್ಲಿ ವಿದ್ಯಾರ್ಥಿಗಳು ಕನ್ನಡದ ಸತ್ವಪೂರ್ಣ ಕೃತಿಗಳ ಓದಿನ ಅನುಭವದಿಂದ ವಂಚಿತರಾಗುತ್ತಿದ್ದಾರೆ. ವಿಶ್ವಮಾನವತೆಯನ್ನು, ಅನಿಕೇತನತೆಯನ್ನು ಸಾರಬೇಕಾದ ಕಡೆಗೆ ಜಾತಿವಾದ ನುಸುಳಿ ಪ್ರಾಧ್ಯಾಪಕರು ಇದರ ಭಾಗವೇ ಆಗಿರುವ ಅಂತರಂಗದ ಧ್ವನಿಗಳು ಗೋಡೆಗಳಾಚೆಗೂ ಅನುರಣಿಸುತ್ತಿದೆ. ನಡುವೆ ನಾವೇ ಕಟ್ಟಿದ ಗೋಡೆಗಳು ಮೇಲೆದ್ದು ನಿಂತಿದೆ. ಆಗಬೇಕಾದ್ದೇನು?
1.ಇಂದು ಹೆಚ್ಚು ಪ್ರಚಲಿತದಲ್ಲಿರುವ ವಿದ್ಯಾರ್ಥಿಗಳ ಇಂಟರ್ನ್ಶಿಪ್ ಪರಿಕಲ್ಪನೆಯಡಿ ಪ್ರಾಯೋಗಿಕತೆಯ ಅವಕಾಶ ಸಿಗಬೇಕು.
2.ಶಾಲೆಗಳಿಗೆ, ಕಾಲೇಜುಗಳಿಗೆ ಒಳ್ಳೆಯ ಕನ್ನಡ ಬೋಧಕರು ತಯಾರಾಗುವಂತೆ ಆದ್ಯತೆ ನೀಡುವ ಪಠ್ಯಕ್ರಮವನ್ನು ಪುನಾರಚಿಸಬೇಕು.
3.ಕೇವಲ ವಿಮರ್ಶೆಯೇ ಅಲ್ಲದೆ, ಸೃಜನಶೀಲ ಸಾಹಿತ್ಯ ರಚನೆ ಕೂಡ ಕಲಿಕೆಯ ಭಾಗವಾಗಬೇಕು
4.ಎಲ್ಲ ಕನ್ನಡ ಅಧ್ಯಯನ ಪೀಠಗಳ ನಡುವೆ ಪರಸ್ಪರ ರಚನಾತ್ಮಕ ಸಹಭಾಗಿತ್ವ ಬೆಳೆಸಬೇಕು.
5.ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳ ಓದು ಎಲ್ಲ ವಿದ್ಯಾರ್ಥಿಗಳಿಗೆ ಸಿಗುವಂತೆ ಪಠ್ಯಕ್ರಮ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ. -ಡಾ| ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ, ಕೇಂದ್ರೀಯ ವಿವಿ, ಕಲಬುರಗಿ.