Advertisement

ಸೆಪ್ಟಂಬರ್‌ನಿಂದ ಉನ್ನತ ಶೈಕ್ಷಣಿಕ ವರ್ಷ ; ಯುಜಿಸಿಯಿಂದ ಮಾರ್ಗಸೂಚಿ ಬಿಡುಗಡೆ

08:13 AM May 01, 2020 | Hari Prasad |

ಹೊಸದಿಲ್ಲಿ: ದೇಶಾದ್ಯಂತ ವಿಶ್ವವಿದ್ಯಾನಿಲಯಗಳಿಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷವು ಈ ಬಾರಿ ಸೆಪ್ಟಂಬರ್‌ನಿಂದ ಆರಂಭವಾಗಲಿದೆ.

Advertisement

ಈಗಾಗಲೇ ಪ್ರವೇಶ ಪಡೆದಿರುವಂಥ ವಿದ್ಯಾರ್ಥಿಗಳಿಗೆ ಆಗಸ್ಟ್‌ನಿಂದ ತರಗತಿಗಳು ನಡೆಯಲಿವೆ ಎಂದು ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ಬುಧವಾರ ತಿಳಿಸಿದೆ.

ವಿ.ವಿ. ಪರೀಕ್ಷೆಗಳು ಮತ್ತು ಶೈಕ್ಷಣಿಕ ಅವಧಿಗೆ ಸಂಬಂಧಿಸಿ ಯುಜಿಸಿ ಬುಧವಾರ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಜುಲೈಯಲ್ಲಿ ಪರೀಕ್ಷೆ ನಡೆಸಲಾಗುವುದು ಎಂದಿದೆ.

ಹಾಗೆಯೇ, ಆಗಸ್ಟ್‌ನಿಂದಲೇ ದಾಖಲಾತಿ ಆರಂಭವಾಗಲಿದೆ. ಅಗತ್ಯ ಬಿದ್ದರೆ ಜೂನ್‌ನಲ್ಲಿ ಬೇಸಗೆ ರಜೆ ನೀಡಬೇಕು. ಕೋವಿಡ್ ನಿಂದ ಕಾಲೇಜು ಸ್ಥಗಿತವಾದ ದಿನಗಳನ್ನು ವಿದ್ಯಾರ್ಥಿ ತರಗತಿಯಲ್ಲಿ ಹಾಜರಿದ್ದ ಎಂಬಂತೆಯೇ ಪರಿಗಣಿಸಬೇಕು ಎಂದೂ ಸೂಚಿಸಿದೆ.

ಆ್ಯಪ್‌ ಬಳಸಿ ಪರೀಕ್ಷೆ ನಡೆಸಿ
ವಿ.ವಿ.ಗಳು ವಾರಕ್ಕೆ ಆರು ದಿನ ತರಗತಿ ನಡೆಸುವಂಥ ನಿಯಮವನ್ನು ಜಾರಿ ಮಾಡಬಹುದು. ಅಂತೆಯೇ ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬಂದಿಯ ಪ್ರಯಾಣ ಅಥವಾ ವಾಸದ ವಿವರ ದಾಖಲಿಸಿ ಕೊಳ್ಳಬೇಕು.

Advertisement

ಎಂಫಿಲ್‌, ಪಿಎಚ್‌.ಡಿ ವಿದ್ಯಾರ್ಥಿಗಳಿಗೂ ಹೆಚ್ಚುವರಿ 6 ತಿಂಗಳ ಅವಧಿಯನ್ನು ನೀಡಲಾಗುವುದು. ವೈವಾ-ವಾಯ್ಸ್ ಪರೀಕ್ಷೆ ಗಳನ್ನು ಸ್ಕೈಪ್‌ ಅಥವಾ ಇತರ ಆ್ಯಪ್‌ ಬಳಸಿ ನಡೆಸಬಹುದು ಎಂದೂ ಹೇಳಿದೆ.

ಈ ಮಾರ್ಗಸೂಚಿಗಳು ಸಲಹಾ ಸ್ವರೂಪದ್ದಾಗಿದ್ದು, ಆಯಾಯ ವಿ.ವಿ.ಗಳು ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮದೇ ಆದ ಯೋಜನೆ ರೂಪಿಸಿಕೊಳ್ಳಬಹುದು ಎಂದೂ ತಿಳಿಸಿದೆ.

ವಿಶ್ವವಿದ್ಯಾಲಯಗಳಲ್ಲಿ ಕೋವಿಡ್‌ ಘಟಕ
ಪ್ರತೀ ವಿವಿಯಲ್ಲೂ ಕೋವಿಡ್‌-19 ಘಟಕವನ್ನು ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಸೇರಿದಂತೆ ಶೈಕ್ಷಣಿಕ ಸಂದೇಹಗಳನ್ನು ಇದರ ಮೂಲಕ ಪರಿಹರಿಸಿಕೊಳ್ಳಬಹುದು. ಗೊಂದಲಗಳೆಲ್ಲ ಮುಗಿಯುವರೆಗೆ ಕಾಲೇಜುಗಳು ಮುಚ್ಚಿರುತ್ತವೆ. ಆದರೆ ವಿದ್ಯಾರ್ಥಿಗಳಿಗೆ ಈ ಅವಧಿ ಯಲ್ಲಿ ಶೇ.100ರಷ್ಟು ಹಾಜರಾತಿ ನೀಡಲಾಗುತ್ತದೆ ಎಂದೂ ಯುಜಿಸಿ ಹೇಳಿದೆ.

ಇಂಟರ್ನಲ್‌ ಅಂಕ ಪರಿಗಣನೆ
ಇಂಟರ್‌ ಮೀಡಿಯೇಟ್‌ ಸೆಮಿಸ್ಟರ್‌ ವಿದ್ಯಾರ್ಥಿಗಳನ್ನು ಅವರ ಹಾಲಿ (ಶೇ.50) ಮತ್ತು ಹಿಂದಿನ ಸೆಮಿಸ್ಟರ್‌ (ಶೇ.50)ನ ಆಂತರಿಕ ಮೌಲ್ಯಮಾಪನದ (ಇಂಟರ್ನಲ್‌) ಆಧಾರದಲ್ಲಿ ತೇರ್ಗಡೆ ಮಾಡಲಾಗುತ್ತದೆ.

ಒಂದು ವೇಳೆ ಪ್ರಥಮ ವರ್ಷದವರಾಗಿದ್ದರೆ ಅವರಿಗೆ ಆಂತರಿಕ ಮೌಲ್ಯಮಾಪನದಿಂದಲೇ ಶೇ.100 ಅಂಕಗಳನ್ನು ತೆಗೆದುಕೊಳ್ಳಲಾಗುತ್ತದೆ. ಆಂತರಿಕ ಮೌಲ್ಯಮಾಪನವೆಂದರೆ ಅದು ಮುಂದುವರಿದ ಮೌಲ್ಯಮಾಪನ, ಪ್ರಿಲಿಮ್ಸ್‌, ಮಧ್ಯ-ಸೆಮಿಸ್ಟರ್‌ನ ಅಂಕಗಳನ್ನು ಪರಿಗಣಿಸಬಹುದಾಗಿದೆ.

ಒಂದು ವೇಳೆ ಈ ಅಂಕಗಳು ಸಮಾಧಾನ ನೀಡದೆ ಇದ್ದರೆ ವಿದ್ಯಾರ್ಥಿ ಮುಂದೆ ವಿಶೇಷ ಪರೀಕ್ಷೆ ತೆಗೆದುಕೊಳ್ಳಬಹುದು. ಕೋವಿಡ್ ಹತೋಟಿಗೆ ಬಂದು ಪರೀಕ್ಷೆ ನಡೆಸುವುದಾದರೆ ಇವರಿಗೂ ಪರೀಕ್ಷೆ ಮಾಡಬಹುದಾಗಿದೆ.

ಜುಲೈಯಲ್ಲಿ ಫೈನಲ್‌ ಪರೀಕ್ಷೆ
ಯಾವ ರಾಜ್ಯಗಳು ಸಹಜ ಸ್ಥಿತಿಗೆ ಬಂದಿವೆಯೋ ಅಲ್ಲೆಲ್ಲ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಜುಲೈಯಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ವಿಧಾನವನ್ನೂ ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಜತೆಗೆ 3 ಗಂಟೆಯಿಂದ 2 ಗಂಟೆಗೆ ಪರೀಕ್ಷಾ ಸಮಯವನ್ನು ಇಳಿಸಬಹುದು. ಪರೀಕ್ಷೆ ಮಾಡುವುದೇ ಆದರೆ ಸಾಮಾಜಿಕ ಅಂತರ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲನೆ ಮಾಡಲೇಬೇಕು.

ಚರ್ಚೆ ಅನಂತರ ನಿರ್ಧಾರ
ಯುಜಿಸಿ ಸೂಚನೆ ಪಾಲಿಸಬೇಕಾಗುತ್ತದೆ. ಈ ಸಂಬಂಧ ಈಗಾಗಲೇ ಉಪಕುಲಪತಿಗಳೊಂದಿಗೆ ಚರ್ಚೆ ನಡೆದಿದೆ. ಯುಜಿಸಿ ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಚರ್ಚೆ ಅಗತ್ಯವಿದೆ.

2019-20ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವಂತೆ ಸೂಚಿಸಿರುವ ಕ್ರಮ ಸದ್ಯದ ಮಟ್ಟಿಗೆ ಸರಿಯಿದೆ ಎಂದಾದರೂ ಮುಂದಿನ ಪರಿಸ್ಥಿತಿ ಆಧರಿಸಿ, ಅಗತ್ಯ ಚರ್ಚೆಯ ಅನಂತರವೇ ಕ್ರಮವನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಶಾಲಾ ಶುಲ್ಕ ಹೆಚ್ಚಿಸಕೂಡದು ; ಖಾಸಗಿ ಶಾಲಾಡಳಿತ ಮಂಡಳಿಗಳಿಗೆ ಸರಕಾರ ಸೂಚನೆ
ಬೆಂಗಳೂರು:
ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಖಾಸಗಿ ಶಾಲಾಡಳಿತ ಮಂಡಳಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ಶುಲ್ಕ ಹೆಚ್ಚಳಕ್ಕೆ ಸರಕಾರ ಅವಕಾಶ ನೀಡುವುದಿಲ್ಲ ಎಂದು ‘ಉದಯವಾಣಿ’ ಎ.19ರಂದೇ ವರದಿ ಮಾಡಿತ್ತು. ಈಗ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಸಂಬಂಧ ಸುತ್ತೋಲೆ ಹೊರಡಿಸುವ ಮೂಲಕ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಿದೆ.

ಖಾಸಗಿ ಶಾಲೆಗಳಿಗೆ ಪ್ರತಿ ವರ್ಷ ಶೇ. 15ರ ಮಿತಿಗೆ ಒಳಪಟ್ಟು ಬೋಧನಾ ಶುಲ್ಕ ಹೆಚ್ಚಿಸಲು ಅವಕಾಶವಿರುತ್ತದೆ. ಆದರೆ ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್‌ ಇರುವುದರಿಂದ ಮಕ್ಕಳ ಪಾಲಕ, ಪೋಷಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ 2020-21ನೇ ಸಾಲಿಗೆ ಖಾಸಗಿ ಶಾಲಾಡಳಿತ ಮಂಡಳಿಗಳು ಯಾವುದೇ ಶುಲ್ಕ ಹೆಚ್ಚಿಸದಂತೆ ಇಲಾಖೆ ಸೂಚನೆ ನೀಡಿದೆ.

ಒಂದು ವೇಳೆ ಶಾಲಾ ಆಡಳಿತ ಮಂಡಳಿಯವರು ಕಳೆದ ಸಾಲಿಗಿಂತ ಕಡಿಮೆ ಶುಲ್ಕ ಪಡೆಯಲು ಇಚ್ಛಿಸಿದಲ್ಲಿ ಅಂಥ ಕ್ರಮ ತೆಗೆದುಕೊಳ್ಳಲು ಅವರು ಸ್ವತಂತ್ರರಾಗಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next