Advertisement

ಸಪ್ತ ವಿವಿಗಳ ಸಮಸ್ಯೆ ಈಡೇರಿಸಲು ಗಮನ ನೀಡಲಿ

11:48 PM Jul 24, 2023 | Team Udayavani |

ರಾಜ್ಯದಲ್ಲಿನ ಪ್ರತೀ ಜಿಲ್ಲೆಯಲ್ಲಿಯೂ ಒಂದು ವಿಶ್ವವಿದ್ಯಾನಿಲಯವಿರಬೇಕು ಎಂಬ ಉದ್ದೇಶದಿಂದ ಹಿಂದಿನ ಸರಕಾರ ರಚಿಸಿದ್ದ ಸಪ್ತ ವಿವಿಗಳು, ತ್ರಿಶಂಕು ಸ್ಥಿತಿಗೆ ತಲುಪಿದ್ದು, ಅತ್ತ ಅನುದಾನವೂ ಇಲ್ಲದೆ, ಇತ್ತ ಸಿಬಂದಿಯೂ ಇಲ್ಲದೆ ತೊಳಲಾಡುತ್ತಿವೆ. ಇತ್ತೀಚೆಗಷ್ಟೇ ಅಧಿವೇಶನದಲ್ಲಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಅವರು ಅಗತ್ಯವಿಲ್ಲದಿದ್ದರೂ ಹಿಂದಿನ ಸರಕಾರ ಜಿಲ್ಲೆಗೊಂದು ವಿವಿ ರೂಪಿಸಿ, ಕೇವಲ 2 ಕೋಟಿ ರೂ. ಅನುದಾನ ನೀಡಿ ಹೋಗಿತ್ತು. ಇದರಿಂದ ಅಂಥ ಉಪಯೋಗವೇನೂ ಆಗುತ್ತಿಲ್ಲ ಎಂದು ಹೇಳಿದ್ದರು.

Advertisement

ಇದರ ಮಧ್ಯೆಯೇ ಸಪ್ತ ವಿಶ್ವವಿದ್ಯಾನಿಲಯಗಳ ಸ್ಥಿತಿಗತಿಯನ್ನು ಅವಲೋಕಿಸಿದಾಗ, ನಿಜಕ್ಕೂ ಈ ವಿವಿಗಳಲ್ಲಿ ಭಾರೀ ಸಮಸ್ಯೆಗಳಿರುವುದು ಕಂಡು ಬಂದಿದೆ. ಪ್ರತೀ ಜಿಲ್ಲೆಗೂ ಒಂದು ವಿವಿ ಇರಬೇಕು, ಉನ್ನತ ಶಿಕ್ಷಣವು ಕೈಗೆಟಕುವಂತಿರಬೇಕು ಎಂಬ ಹಿಂದಿನ ಸರಕಾರದ ಉದ್ದೇಶ ಉತ್ತಮವಾದದ್ದೇ. ಆದರೆ ವಿವಿ ರೂಪಿಸಿದ ಮೇಲೆ, ಅದಕ್ಕೆ ಸೂಕ್ತ ಅನುದಾನ ನೀಡುವುದರ ಜತೆಗೆ ಬೇಕಾದ ಮೂಲಸೌಕರ್ಯಗಳನ್ನೂ ಒದಗಿಸಬೇಕಾಗಿತ್ತು.

ಹಿಂದಿನ ಸರಕಾರವು ಮಂಡ್ಯ, ಹಾಸನ, ಚಾಮರಾಜನಗರ,ಹಾವೇರಿ, ಕೊಪ್ಪಳ, ಬಾಗಲಕೋಟೆ ಮತ್ತು ಬೀದರ್‌ ವಿವಿಗಳನ್ನು  ಸ್ಥಾಪಿಸಿತ್ತು. 2022ರ ಕೊನೆಯ ಭಾಗದಲ್ಲಿ ಈ ವಿವಿಗಳ ಬಗ್ಗೆ ಘೋಷಣೆ ಮಾಡಲಾಗಿತ್ತು. ವಿಚಿತ್ರವೆಂದರೆ ಇಂದಿಗೂ ಈ ವಿವಿಗಳಿಗೆ  ಮಾತೃ ವಿವಿಯಿಂದ ಬೋಧಕ ಮತ್ತು ಬೋಧಕೇತರ ಸಿಬಂದಿಯ ವಿಭಜನೆ ಆಗಿಲ್ಲ. ಕೆಲವು ವಿವಿಗಳಲ್ಲಿ ಕುಲಪತಿ ಮತ್ತು ಕುಲಸಚಿವರ ನೇಮಕವಾಗಿದ್ದರೆ ಉಳಿದ ಸಿಬಂದಿಯ ನೇಮಕಾತಿ ಹಾಗೆಯೇ ನನೆಗುದಿಗೆ ಬಿದ್ದಿದೆ. ಇನ್ನೂ ಕೆಲವು ವಿವಿಗಳು ಕೇವಲ ಅತಿಥಿ ಉಪನ್ಯಾಸಕರ ಸಹಾಯದಿಂದ ದಿನ ನೂಕುತ್ತಿವೆ.

ಕಟ್ಟಡ, ಕ್ರೀಡಾಂಗಣ, ಗ್ರಂಥಾಲಯ ಸಹಿತ ಇತರ ಮೂಲಸೌಕರ್ಯಗಳು ಇಲ್ಲದೆ, ಹೊಸದಾಗಿ ಕೋರ್ಸ್‌ ಆರಂಭಿಸುವಂತೆಯೂ ಇಲ್ಲ. ಕ್ರೀಡಾ ಸೌಲಭ್ಯಗಳಿಲ್ಲದೆ ವಿವಿಯ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಜತೆಗೆ ಹೊಸ ಸರಕಾರವೂ ಹೊಸ ವಿವಿಗಳ ಕುರಿತಂತೆ ಅಷ್ಟೇನೂ ಆಸಕ್ತಿಯನ್ನೂ ಹೊಂದಿಲ್ಲ. ಹಾಗಂಥ ಈಗಾಗಲೇ ಶುರುವಾಗಿರುವ ವಿವಿಗಳನ್ನು ಮುಚ್ಚುವುದಿಲ್ಲ ಎಂಬ ಮಾಹಿತಿ ಇದೆ.

ಸದ್ಯದ ಲೆಕ್ಕಾಚಾರ ಪ್ರಕಾರ, ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಈ ಹೊಸ ವಿವಿಗಳಿಗಾಗಿ ಎಷ್ಟು ಹಣ ತೆಗೆದಿಟ್ಟಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ಈ ಮಾಹಿತಿ ಇನ್ನೂ ಕುಲಪತಿಗಳು ಮತ್ತು ಕುಲಸಚಿವರ ಗಮನಕ್ಕೆ ಹೋಗಿಲ್ಲ. ಮೀಸಲಾಗಿರುವ ಅನುದಾನದ ಲೆಕ್ಕಾಚಾರದಲ್ಲಿ ಮೂಲಸೌಕರ್ಯಗಳನ್ನು ಕೈಗೆತ್ತಿಕೊಳ್ಳ ಬಹುದೇ? ಅಥವಾ ಈಗಿನ ರೀತಿಯಲ್ಲೇ ಇರುವ ಮೂಲಸೌಕರ್ಯದಲ್ಲೇ ನಡೆಸಿಕೊಂಡು ಹೋಗುವುದೇ ಎಂಬ ಸಂಗತಿ ಗೊತ್ತಾಗಲಿದೆ. ಈಗಿನ ಮಟ್ಟಿಗೆ ಹೇಳುವುದಾದರೆ, ಹೊಸ ವಿವಿಗಳನ್ನು ಮುಚ್ಚಿ,ವಾಪಸ್‌ ತವರು ವಿವಿಗಳಿಗೆ ವಿಲೀನ ಮಾಡುವ ಸಾಧ್ಯತೆಗಳು ಕಡಿಮೆಇವೆ. ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ ಅದನ್ನು ವಾಪಸ್‌  ಮಾಡುವುದು ಕಷ್ಟಕರ. ಅಲ್ಲದೆ ಈ ವಿವಿಗಳಿಗೆ ಕುಲಪತಿ, ಕುಲಸಚಿವರನ್ನು ನೇಮಕವನ್ನೂ ಮಾಡಲಾಗಿದೆ. ಇವರನ್ನು ಮುಂದೇನು ಮಾಡುವುದು ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ. ಹೀಗಾಗಿ ರಾಜ್ಯ ಸರಕಾರವು

Advertisement

ಹೊಸ ಸಪ್ತ ವಿವಿಗಳ ಅಭಿವೃದ್ಧಿಗೆ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅನನುಕೂಲ ಉಂಟಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next