ಮೈಸೂರು: ಭಾರತೀಯ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ತಿಳಿಸಿದರು. ಮಹಾರಾಜ ಎಜುಕೇಷನ್ ಟ್ರಸ್ಟ್ ವತಿಯಿಂದ ನಗರದ ರಾಜೇಂದ್ರ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಜೆ. ಹೇಮಂತ್‌ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಬೌದ್ಧಿಕಮಟ್ಟವನ್ನು ವೃದ್ಧಿಸಬೇಕಾದರೆ, ಸಂಶೋಧನೆಗಳು ಕ್ರಮಬದ್ಧವಾಗಿ ನಡೆಯಬೇಕಾದರೆ ಸಮರ್ಪಕ ಶಿಕ್ಷಕರ ವೃಂದವನ್ನು ಹೊಂದಬೇಕು. ಆಗ ಮಾತ್ರವೇ ವಿವಿಗಳು ರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಭಾರತೀಯ ವಿವಿಗಳು ಸಹ ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ವಿವಿಗಳ ಮಟ್ಟಕ್ಕೆ ಬೆಳೆಯುವ ಮೂಲಕ ಜಾಗತಿಕಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದ ಅವಶ್ಯತೆ ಇದೆ ಎಂದರು.
ಮೈಸೂರು ವಿಶ್ವವಿದ್ಯಾಲಯಕ್ಕೆ ಸುದೀರ್ಘ ಇತಿಹಾಸವಿದ್ದು, ಗುಣಮಟ್ಟದ ಶಿಕ್ಷಣ, ಪಾಕೃತಿಕ ವಾತಾವರಣ ಹಾಗೂ ಸಂಶೋಧನೆಗಳು ಇದಕ್ಕೆ ಪ್ರಮುಖ ಕಾರಣ. ಇಲ್ಲಿ ಓದಿ ಪ್ರಾಧ್ಯಾಪಕರಾಗಿರುವವರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಕುಲಪತಿ ಹುದ್ದೆ ಎಂಬುದು ಹೆಮ್ಮೆ ಪಡುವಂತಹ ಸ್ಥಾನವಲ್ಲ. ಅದೊಂದು ಮುಳ್ಳಿನ ಕುರ್ಚಿಯಾಗಿದ್ದು, ಗಟ್ಟಿಯಾಗಿ ಕುಳಿತಷ್ಟು ಚುಚ್ಚುತ್ತಾ ಹೋಗುತ್ತದೆ.
ಹೊಸ ಸವಾಲು, ಜವಾಬ್ದಾರಿಗಳನ್ನು ಪರಿಚಯಿಸುತ್ತದೆ. ಎಲ್ಲಾ ಪ್ರಾಧ್ಯಾಪಕರಿಗೂ ಕುಲಪತಿಯಾಗುವ ಅರ್ಹತೆ ಇರುತ್ತದೆ. ಆದರೆ ಕೆಲವರಿಗಷ್ಟೇ ಆ ಅವಕಾಶ ದೊರೆಯಲಿದೆ ಎಂದ ಅವರು, ಪ್ರೊ.ಜಿ.ಹೇಮಂತ್ ಕುಮಾರ್ ಅವರಿಗೆ ಈ ಅವಕಾಶ ಲಭಿಸಿದ್ದು, ಇತಿಹಾಸದ ಪುಟಗಳಲ್ಲಿ ಬರೆಯುವಂತಹ ಕೆಲಸ ಮಾಡಲಿ ಎಂದು ಆಶಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ ಮಾತನಾಡಿ, ಮಹಾರಾಜ ಕಾಲೇಜು ಮದ್ರಾಸ್ ವಿವಿ ಅಧೀನದಲ್ಲಿತ್ತು. ಹೊಸದಾಗಿ ಮೈಸೂರು ವಿವಿ ಪ್ರಾರಂಭಿಸಲು ಮೊದಲು ಮದ್ರಾಸ್ ವಿವಿ ಒಪ್ಪಿರಲಿಲ್ಲ. ನಂತರ ಇದರ ಅವಶ್ಯಕತೆಯನ್ನು ವಿವರಿಸಿದಾಗ ಅವಕಾಶ ಲಭಿಸಿತು. ಹೀಗಾಗಿ ಶತಮಾನದ ಇತಿಹಾಸವಿರುವ ಮೈಸೂರು ವಿವಿಗೆ ತನ್ನದೆ ಇತಿಹಾಸವಿದ್ದು, ಇದರ ಘನತೆಯನ್ನು ಉಳಿಸಿ-ಬೆಳೆಸಬೇಕಾದ ಜವಾಬ್ದಾರಿ ನೂತನ ಕುಲಪತಿಗಳ ಮೇಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾರಾಜ ಎಜುಕೇಷನ್ ಟ್ರಸ್ಟ್‌ನಿಂದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೊ›.ಜಿ.ಹೇಮಂತ್‌ಕುಮಾರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ತಮಗೆ ಉಡುಗೊರೆಯಾಗಿ ನೀಡಲಾದ ತಾಯಿಯ ಪ್ರತಿಮೆ ಕಂಡು ಭಾವುಕರಾದ ಹೇಮಂತ್‌ಕುಮಾರ್, ತಾಯಿಯೊಂದಿಗೆ ಕಳೆದ ದಿನಗಳನ್ನು ಸ್ಮರಿಸಿದರು.
ಸಮಾರಂಭದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಡಾ. ಶಾಂತಿವ್ರತಾನಂದಜೀ ಮಹಾರಾಜ್, ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಗೋಪಾಲಸ್ವಾಮಿ ಶಿಶು ವಿಹಾರ ಸಂಸ್ಥೆ ಡಾ.ಎ.ಎಸ್.ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.