Advertisement

ಏಕತೆ, ಐಕ್ಯತೆ ಪ್ರತಿಬಿಂಬಿಸಿದ 68ನೇ ಗಣರಾಜ್ಯೋತ್ಸವ

11:15 AM Jan 27, 2017 | Team Udayavani |

ಬೆಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಕಲೆ-ಸಂಸ್ಕೃತಿಯನ್ನು ಅನಾವರಣಗೊಳಿಸಿದವು. ವಿವಿಧ ಸಂಸ್ಕೃತಿ, ಕಲೆಯನ್ನು ಬಿಂಬಿಸಿದ ಕಾರ್ಯಕ್ರಮಗಳು ದೇಶದ ಏಕತೆ, ಐಕತ್ಯೆಯನ್ನು ಸಾರಿ ಹೇಳುತ್ತಿದ್ದವು.  

Advertisement

ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ನೃತ್ಯ-ಗಾಯನ ಕಾರ್ಯಕ್ರಮಗಳು ಕಲೆ, ಸಾಹಿತ್ಯ,ಪರಂಪರೆಯನ್ನು ಪ್ರತಿಬಿಂಬಿಸಿತು. ಜತೆಗೆ  ಗಣತಂತ್ರದ ಮಹತ್ವವನ್ನು ಸಾರಿದವು.ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗದರ್ಶನದಲ್ಲಿ ನಾಲ್ಕು ಶಾಲಾ ತಂಡದ 2,500 ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮನಸೂರೆಗೊಳಿಸಿತು.

ಹೆಗ್ಗನಹಳ್ಳಿಯ ಸರ್ಕಾರಿ ಪ್ರೌಢ ಶಾಲೆ ಮತ್ತು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ 650 ಮಕ್ಕಳು ನಡೆಸಿಕೊಟ್ಟ “ನಾವು ಭಾರತೀಯರು’ ನೃತ್ಯ ರೂಪಕ ದೇಶದ ಶ್ರೀಮಂತ ಸಂಸ್ಕೃತಿ-ಏಕತೆಯನ್ನು ಬಿಂಬಿಸಿತು. 

ಕರ್ನಾಟಕ ನೆಲದ ಸಾಂಸ್ಕೃತಿಕ ಕಲೆಗಳಲ್ಲದೇ ಕಥಕ್‌, ಮೋಹಿನಿ ಆಟ್ಟಂ, ಯಕ್ಷಗಾನ, ರಾಜಸ್ಥಾನಿ, ಮರಾಠಿ. ಡೊಳ್ಳು ಕುಣಿತ ಮತ್ತು ಸಮಕಾಲೀನ ನೃತ್ಯಗಳನ್ನೂ ಉತ್ಸವದಲ್ಲಿ ಪ್ರದರ್ಶಿಸಲಾಯಿತು. ಜತೆಗೆ ದೇಶಕ್ಕಾಗಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸೈನಿಕರಿಗೆ ನಮನ ಸಲ್ಲಿಸಲಾಯಿತು. 

ಗಿರಿನಗರದ ನಾಗೇಂದ್ರ ಬ್ಲಾಕ್‌ನ ಮಾರ್ಟಿನ್‌ ಲೂಥರ್‌ ಆಂಗ್ಲ ಶಾಲೆಯ 600 ಮಕ್ಕಳು ನಡೆಸಿಕೊಟ್ಟ “ಯುವಶಕ್ತಿ ವೈಭವ-ವಂದೇ ಮಾತರಂ’ ನೃತ್ಯ ಭಾರತವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ರಾಷ್ಟ್ರ. ಶಾಂತಿ-ಸಹಬಾಳ್ವೆಯಲ್ಲಿ ವಿಶ್ವಾಸವಿಟ್ಟ ಭೂಮಿ. ವಿವಿಧತೆಯಲ್ಲಿ ಐಕ್ಯತೆಯನ್ನು ಕಂಡುಕೊಂಡ ದೇಶ ಎಂಬ ಸಂದೇಶ ಸಾರುತ್ತಿತ್ತು. 

Advertisement

ಉತ್ತರ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ 650 ಮಕ್ಕಳು ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಅವರ “ಒಂದೇ ತಾಯಿಯ ಮಕ್ಕಳು ನಾವೆಲ್ಲರೂ ಒಂದೆ’ ಗೀತೆಗೆ ಹೆಜ್ಜೆ ಹಾಕಿದರು. ವಿದ್ಯಾರಣ್ಯಪುರಂ ಮುಖ್ಯ ರಸ್ತೆಯ ದೊಡ್ಡಬೊಮ್ಮಸಂದ್ರದ ಸೇಂಟ್‌ ಫಿಲೋಮಿನಾ ಆಂಗ್ಲ ಪ್ರೌಢ ಶಾಲೆಯ 600 ಮಕ್ಕಳು “ಗಣರಾಜ್ಯೋತ್ಸವ ಸಂಭ್ರಮ’ ಹೆಸರಲ್ಲಿ ಭಾವೈಕ್ಯತೆಯ ಆಶಯ ತೋರುವ ನೃತ್ಯ ಗೀತೆ ಸಾದರಪಡಿಸಿದರು. 

ಮೃತ್ಯಂಜಯ ದೊಡ್ಡವಾಡಿ ಹಾಗೂ ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ನಡೆಯಿತು. ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷ ಪ್ರದರ್ಶನ ನೀಡಿದ ವಿಜೇತ ತಂಡಗಳಿಗೆ ರಾಜ್ಯಪಾಲರು ಬಹುಮಾನ ನೀಡಿ ಗೌರವಿಸಿದರು. 

ಪರೇಡ್‌ನ‌ಲ್ಲಿ ಪುದಚೇರಿಯ ತಂಡ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್, ಸಿಎಆರ್‌, ರಾಜ್ಯ ಪೊಲೀಸ್‌, ಬಿಎಸ್‌ಎಫ್, ಹೋಂಗಾರ್ಡ್‌, ಅಬಕಾರಿ, ಎನ್‌ಎಸ್‌ಎಸ್‌, ಎನ್‌ಸಿಸಿ, ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಸೇವಾದಳ, ಸಮರ್ಥನಂ, ರಮಣಮಹರ್ಷಿ ಅಂಧ ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳ ತಂಡಗಳಿಂದ ಕವಾಯತು ನಡೆಯಿತು.

ಅರಣ್ಯ ಇಲಾಖೆಯ ತಂಡ ಇದೇ ಮೊದಲ ಬಾರಿಗೆ ಪಥಸಂಚಲನದಲ್ಲಿ ಪಾಲ್ಗೊಂಡಿತ್ತು. ಜೊತೆಗೆ ಪುದಚೇರಿಯ ತಂಡ ರಾಜ್ಯದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಧ್ವಜಾರೋಹಣದ ಬಳಿಕ ತೆರದ ಜೀಪಿನಲ್ಲಿ ಪರೇಡ್‌ ಪರಿವೀಕ್ಷಣೆ ನಡೆಸಿದ ರಾಜ್ಯಪಾಲರು ಬಳಿಕ ಗೌರವ ರಕ್ಷೆ ಸ್ವೀಕರಿಸಿದರು. 

ಮಳೆ ಹನಿ-ತಿಳಿ ಬಿಸಿಲು
ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ತುಂತುರು ಮಳೆ ಹನಿ ಹಾಗೂ ತಿಳಿ ಬಿಸಿಲಿನ ಸ್ಪರ್ಷವಾಯಿತು. ರಾಜ್ಯಪಾಲರು ಪಥಸಂಚಲನ ತುಕಡಿಗಳಿಂದ ಗೌರವ ರಕ್ಷೆ ಸ್ವೀಕಾರ ಮಾಡುತ್ತಿದ್ದಾಗ ತುಂತುರು ಮಳೆ ಹನಿಗಳು ಜಿನುಗಸಲಾರಂಭಿಸಿದವು. ರಾಜ್ಯಪಾಲರ ಆಪ್ತ ಸಿಬ್ಬಂದಿ ಕೊಡೆ ತಂದಾಗ, ಗೌರವ ರಕ್ಷೆ ಸ್ವೀಕಾರಕ್ಕೆ ಅಡ್ಡಿಪಡಿಸುವುದು ಬೇಡ ಎಂಬಂತೆ ಅವರ ವಿಷೇಶ ಕರ್ತವ್ಯಾಧಿಕಾರಿ ಅದನ್ನು ತಡೆದರು. ಮಳೆ ಹನಿಗಳಲ್ಲೇ ರಾಜ್ಯಪಾಲರು ಗೌರವ ರಕ್ಷೆ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next