Advertisement

‘ಸ್ಪಷ್ಟ  ಗುರಿಯೊಂದಿಗೆ ಏಕತೆಯ ಶ್ರಮ’

10:09 AM Nov 06, 2017 | Team Udayavani |

ಪುತ್ತೂರು: ರಾಜ್ಯದ ಬಿಜೆಪಿ ನಾಯಕರ ನಡುವೆ ಈಗ ಯಾವುದೇ ರೀತಿಯ ಅಭಿಪ್ರಾಯ ಭೇದಗಳಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿಯ ಬಳಿಕ ಎಲ್ಲ ನಾಯಕರು ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳ ಸ್ಪಷ್ಟ ಗುರಿಯೊಂದಿಗೆ ನಿರಂತರ ಶ್ರಮವಹಿಸುತ್ತಿದ್ದಾರೆ ಎಂದು ಕೇಂದ್ರ ಅನುಷ್ಠಾನ ಮತ್ತು ಸಾಂಖ್ಯಿಕ ಇಲಾಖಾ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

ರವಿವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಅವರು ಮಾತನಾಡಿದರು. ರಾಜ್ಯದಲ್ಲಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಒಡೆದು ಆಳುವ ನೀತಿಯಿಂದ ರೋಸಿ ಹೋಗಿರುವ ಜನರು ಮುಂದಿನ ಬಾರಿ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ಎಲ್ಲ 224 ಕ್ಷೇತ್ರಗಳಲ್ಲೂ ನೇರ ಸ್ಪರ್ಧೆ ನಡೆಯಲಿದೆ ಎಂದರು.

ಸಮಗ್ರ ತನಿಖೆಯಾಗಲಿ
ಅವಳಿ ವೀರ ಪುರುಷರಾದ ಕೋಟಿ -ಚೆನ್ನಯರ ತಾಯಿ ಮಹಾಮಾತೆ ದೇಯಿ ಬೈದ್ಯೇತಿಯ ಪ್ರತಿಮೆಗೆ ಅವಮಾನ ಮಾಡಿದ ಘಟನೆಯ ಪಾರದರ್ಶಕ ಸಮಗ್ರ ತನಿಖೆಯಿಂದ ಸತ್ಯ ಹೊರಬರಬೇಕು. ಈ ಮೂಲಕ ಅವಳಿ ವೀರ ಪುರುಷರು ಹಾಗೂ ತಾಯಿಯ ಮೇಲಿನ ನಂಬಿಕೆಗೆ ಆದ ಅಪಚಾರಕ್ಕೆ ಉತ್ತರ ಸಿಗಬೇಕು. ಕೇವಲ ತುಷ್ಟೀಕರಣದ ಕಾರಣಕ್ಕಾಗಿ ಇಂತಹ ಧಾರ್ಮಿಕ ನಂಬಿಕೆಯ ಪ್ರಕರಣಗಳನ್ನು ಮುಚ್ಚಿ ಹಾಕುವುದು ಸರಿಯಲ್ಲ ಎಂದರು.

ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಎಸ್‌. ಅಶೋಕ್‌ ಕುಮಾರ್‌ ರೈ, ಮುಖಂಡ ಎಸ್‌. ಅಪ್ಪಯ್ಯ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.

ಯಾತ್ರೆಯ ಯಶಸ್ಸು 
ಚುನಾವಣಾ ಪೂರ್ವಭಾವಿಯಾಗಿ 75 ದಿನಗಳ ಕಾಲ ಹಮ್ಮಿಕೊಂಡಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಯಶಸ್ಸು ಮುಂದಿನ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ. ರಾಜ್ಯ ಬಿಜೆಪಿ ನಿಶ್ಚಿತವಾಗಿ 150 ಸ್ಥಾನಗಳ ಗುರಿ ತಲುಪಲಿದೆ ಎಂದು ಅವರು ಅಭಿಪ್ರಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next