ಧಾರವಾಡ: ಧಾರ್ಮಿಕ ತತ್ವ-ಸಿದ್ಧಾಂತದಡಿ ಜನಮನಕ್ಕೆ ಉತ್ತಮ ಸಂದೇಶ ನೀಡುವ ಸಂಘ-ಸಂಸ್ಥೆಗಳು ಹಾಗೂ ಚಿಂತನ ಮಂಥನದ ಮಂಟಪಗಳು ನಾಡಿನಾದ್ಯಂತ ನಿರ್ಮಾಣವಾದರೆ ಈ ನಾಡು ಕಲ್ಯಾಣ ರಾಜ್ಯ ಆಗುತ್ತದೆ ಎಂದು ಬಸವಧರ್ಮ ಪೀಠದ ಶ್ರೀ ಗಂಗಾಮಾತಾಜಿ ಹೇಳಿದರು.
ಗುಲಗಂಜಿಕೊಪ್ಪದ ಸೋನಾಪುರದಲ್ಲಿ ಬಸವಧರ್ಮ ಅಭಿವೃದ್ದಿ ಸಂಸ್ಥೆ ವತಿಯಿಂದ ನಿರ್ಮಿಸಿದ ಬಸವ ಮಂಟಪದ ಉದ್ಘಾಟನೆ ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಬಸವ ಮಂಟಪ ರಚನೆಯಾಗಿದ್ದು, ಇಲ್ಲಿ ಆಧ್ಯಾತ್ಮಿಕ ಚಿಂತನೆಗಳು ನಿರಂತರವಾಗಿ ನಡೆಯಬೇಕಿದೆ ಎಂದರು.
ಜನರು ಸತ್ಯ ಶುದ್ಧ ಕಾಯಕ ಮಾಡಿ ಸಮಾಜ ಸೇವೆ ಮಾಡುವುದನ್ನು ರೂಢಿಸಿಕೊಂಡಾಗ ಇಂತಹ ಚಿಂತನೆಗಳು ಹೊರ ಬಂದು ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ. ಸದ್ವಿಚಾರ ಚಿಂತನೆಗಳು, ಉಪನ್ಯಾಸಗಳು ಮಂದಿರ, ಮಠ, ಮಂಟಪಗಳಲ್ಲಿ ನಡೆಯುವುದರಿಂದ ಮಕ್ಕಳು ಮುಂದಿನ ಸತ್ಪಜೆಗಳಾಗಲು ಸಾಧ್ಯ ಎಂದರು.
ಬಸವಾದಿ ಶರಣರ ವಚನ ಚಿಂತನೆ, ಸಂಗೀತ ಕಾರ್ಯಕ್ರಮ ಹಾಗೂ ವಚನ ನೃತ್ಯ ಸೇರಿದಂತೆ ಹಲವಾರು ಧಾರ್ಮಿಕ ಸಮಾರಂಭ ನೆರವೇರಿಸುವ ಉದ್ದೇಶದಿಂದ ಮಂಟಪ ರಚನೆ ಮಾಡಲಾಗಿದೆ. ಜನಮನದಲ್ಲಿ ಆಳವಾದ ಅಧ್ಯಯನ ಮತ್ತು ಮೌಲ್ವಿಕ ತತ್ವಗಳು ಬೇರೂರಬೇಕಿದ್ದು ಸಮಯಾವಕಾಶ ಮಾಡಿಕೊಂಡು ಪ್ರಾರ್ಥನೆ ಹಾಗೂ ಚಿಂತನಾ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು ಎಂದರು.
ಕುಂಬಳಗೋಡಿನ ಬಸವ ಗಂಗೋತ್ರಿಯ ಶ್ರೀ ಚನ್ನಬಸವಾನಂದ ಸ್ವಾಮೀಜಿ ಅವರು ವಚನ ತಾಂಬೂಲ ನೆನಪಿನ ಕಾಣಿಕೆ ಬಿಡುಗಡೆಗೊಳಿಸಿದರು. ಅಕ್ಕಮಹಾದೇವಿ ಅನುಭಾವ ಪೀಠದ ಶ್ರೀ ಸತ್ಯಾದೇವಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ನೀಲಾಂಬಿಕೆ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಶೀಲವಂತ ಷಟಸ್ಥಳ ಧ್ವಜಾರೋಹಣ ನೆರವೇರಿಸಿದರು.
ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ಕೆ. ಬಸವರಾಜಪ್ಪ, ಕಗ್ಗೊàಡ ರಾಷ್ಟ್ರೀಯ ಬಸವದಳ ಅಧ್ಯಕ್ಷ ಬಸವರಾಜ ಕೊಂಡಗೋಳಿ, ಅಶೋಕ ಶೀಲವಂತ, ಶಿವಾನಂದ ಲೋಲೆನವರ, ಮಂಜುನಾಥ ಚೋಳಪ್ಪನವರ ಇದ್ದರು. ದೇವೆಂದ್ರಪ್ಪ ಇಂಗಳಹಳ್ಳಿ ನಿರೂಪಿಸಿದರು. ಮಂಜುನಾಥ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ನ್ಯಾಮತಿ ಸ್ವಾಗತಿಸಿದರು. ಶಿವಾನಂದ ಅಬಲೂರ ವಂದಿಸಿದರು.