Advertisement

Unity in diversity: ಭಾರತೀಯತೆಯ ಅಂತಃಸತ್ವ …

11:12 AM Jun 01, 2024 | Team Udayavani |

“ಭಾರತ” ವಿವಿಧತೆಯಲ್ಲಿ ಏಕತೆಯುಳ್ಳ ಅಗಣಿತ ಸುಂದರತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಅದ್ಭುತವಾದ ದೇಶ. ‘ಭ’ ಎಂದರೆ ಬೆಳಕು. ಬೆಳಕನ್ನು ಅರಸುತ್ತಾ, ಬೆಳಕಲ್ಲೇ ತಾ ಸೇರಿ ತಾನೇ ಬೆಳಕಾಗುವವ ಭಾರತೀಯ. ಬೆಳಕು ಜ್ಞಾನದ ಸಂಕೇತ. ಇಲ್ಲಿನ ಮಣ್ಣಿನ ಪ್ರತೀ ಕಣ ಕಣದಲ್ಲೂ ಶ್ರೇಷ್ಠ ಭಾವಗಳ ಸಮ್ಮಿಳಿತವಿದೆ.

Advertisement

ಒಂದೆಡೆ, ಇಡೀ ವಿಶ್ವಕ್ಕೆ ನಮ್ಮ ದೇಶದ ಸಂಸ್ಕೃತಿಯನ್ನು ಸಾರಿ ತಿಳಿಸಿದ ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಒಳಿತು ಎನ್ನುವಂತಹ ವಿಚಾರಧಾರೆ ಸಿಕ್ಕರೆ, ನಿಸ್ಸಂದೇಹವಾಗಿ ಅದು ಭಾರತದಿಂದ ಹೋಗಿದೆ ಎಂದು. ಮನುಕುಲದ ಒಳಿತಿಗಾಗಿ ಮತ್ತು ಉದ್ಧಾರಕ್ಕಾಗಿ ಅವಶ್ಯವಿರುವ ಎಲ್ಲ ಸಂಗತಿಗಳನ್ನು ತಿಳಿಸುವ ಸಲುವಾಗಿ ಅನೇಕ ರೀತಿಯ ಆಚರಣೆಗಳ ಮೂಲಕ ಮಾಹಿತಿ/ ಪರಿಹಾರೋಪಾಯಗಳನ್ನು ನಮ್ಮ ಸಂಸ್ಕೃತಿಯ ಭಾಗವನ್ನಾಗಿಸಿದ್ದಾರೆ.

ನಾವು ಯೋಚಿಸುವ ಅಥವಾ ನಡೆಯುವ, ನುಡಿಯುವ ಪ್ರತೀ ಕಾರ್ಯಕ್ಕೂ ಹೇಗೆ ಕರ್ಮಗಳ ಲೆಕ್ಕಾಚಾರವಿದೆ ಎನ್ನುವುದನ್ನು ಕರ್ಮ ಯೋಗ ಅಥವಾ ಕಾಯಕವೇ ಕೈಲಾಸ ಎನ್ನುವ ಸೂತ್ರಗಳ ಮೂಲಕ ನಡೆಯುವ ದಾರಿಯಲ್ಲಿ ಅನುಸರಿಸಬೇಕಾದ ಎಚ್ಚರಿಕೆ, ಮತ್ತು ಹೇಗೆ ನಡೆಯಬೇಕೆಂಬ ನೀತಿ ನಿಯತಿಗಳನ್ನು ನೀಡಿದ್ದಾರೆ.

ಆಧುನಿಕ ಜಗತ್ತಿನಲ್ಲಿ ಮನುಜ ತನ್ನ ಅನುಕೂಲಗಳಿಗಾಗಿ ಅನೇಕ ಆವಿಷ್ಕಾರಗಳನ್ನು ಮಾಡಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುತ್ತಿದ್ದಾನೆ. ಮತ್ತು ಪ್ರತೀ ಕ್ಷಣ ಹೊಸ ಹೊಸ ಸಂಶೋಧನೆಗಳು ಸೃಷ್ಟಿಯ ರಹಸ್ಯ ಭೇಧಿಸಲು ನಡೆಯುತ್ತಲೇ ಇವೆ. ಆದರೆ ಈ ಎಲ್ಲ ವಿದ್ಯಾಮಾನಗಳನ್ನು ಮೀರಿದ, ಇಡೀ ಬ್ರಹ್ಮಾಂಡವನ್ನು ನಡೆಸುತ್ತಿರುವ ಅನೂಹ್ಯ ಶಕ್ತಿಯೊಂದಿದೆ, ಎಂಬುದರ ಅರಿವಿನ ಹರಿವಿನೊಳು ಹರಿದು ಹೋದಾಗ ಹುಟ್ಟುವ ಭಕ್ತಿಯೋಗ ಮತ್ತು ಜ್ಞಾನಯೋಗದ ಅದ್ಭುತ ಕೊಡುಗೆಯಿದೆ ಇಲ್ಲಿ.

“ಲೋಕಾಃ ಸಮಸ್ತಃ ಸುಖೀನೋ ಭವಂತು’ ಎನ್ನುವುದು ಈ ದೇಶದ, ಈ ಮಣ್ಣಿನ, ಇಲ್ಲಿನ ಸಂಸ್ಕೃತಿಯ ಮೂಲ ಮಂತ್ರ. ಸಮಸ್ತ ಸೃಷ್ಟಿಯ ಹಿತವ ಬಯಸುವ ವಿಶ್ವ ದೃಷ್ಟಿ ನಮ್ಮ ಸಂಸ್ಕೃತಿಯ ವಿಶಾಲ ಮತ್ತು ವಿಸ್ತಾರದ ಆಳವನ್ನು ತೋರಿಸುತ್ತದೆ. ವಸುಧೈವ ಕುಟುಂಬಕಂ ಎಂಬುದು ನಮ್ಮ ಒಂದು ಉಪನಿಷತ್‌ನಲ್ಲಿ ಕಂಡುಬರುವ ವಾಕ್ಯ. “ಜಗತ್ತು ಒಂದು ಕುಟುಂಬ” ಎಂಬುದು ಇದರರ್ಥ. ಯಾವುದೊ ಒಂದು ವಿಷಯ, ವ್ಯಕ್ತಿ, ಸ್ಥಳ, ವಸ್ತು ಮತ್ತು ವಿಚಾರಗಳಿಗೆ ಸೀಮಿತವಾಗದೆ, ಸಂಕುಚಿತ ಭಾವಗಳಿಗೆ ಒಳಗಾಗದೆ ವಿಶಾಲ ಮನೋಭಾವ ಬೆಳೆಸುವ ಸಮೃದ್ಧ ಮೌಲ್ಯಧಾರೆಗಳ ಸಾಗರ ನಮ್ಮ ಸಂಸ್ಕೃತಿ. ಇಲ್ಲಿ ನಾವು ಆಚರಿಸುವ ಪ್ರತೀ ಆಚರಣೆಗಳ ಹಿಂದಿನ ಸತ್ಯ ಪ್ರಶ್ನಿಸುವ ಹಕ್ಕಿದೆ. ಉತ್ತರ ಹುಡುಕಿ ಹೊರಡುವ ಸ್ವಾತಂತ್ರ್ಯವಿದೆ. ಕೆಲವು ಮತಗಳ ಸಾರ ತಿಳಿಸುವಂತೆ, ನೀನಿದನ್ನು ಪಾಲಿಸಲೇ ಬೇಕು ಎಂಬ ಯಾವ ಅಂಧ ಒತ್ತಡದ ಹೇರಿಕೆಗಳಿಲ್ಲ..!

Advertisement

ಹಿರಿಯರು ಅಥವಾ ನಮ್ಮ ಪೂರ್ವಜರು ಆಚರಿಸಿ ಕಂಡುಕೊಂಡ ಬದುಕಿನ ಅನುಭವದ ಸಾರಗಳು ಗಾದೆಗಳಾಗಿ, ನುಡಿಗಟ್ಟುಗಳಾಗಿ ಸುಲಭದಲ್ಲಿ ಮುಂದಿನ ತಲೆಮಾರುಗಳಿಗೆ ಜೀವನದ ಗತಿಮತಿ ತಿಳಿಸುವ ದಾರಿದೀಪಗಳಾಗಿವೆ. ನಮ್ಮ ಹಿಂದಿನವರು ಹಾಕಿಕೊಟ್ಟು ಹೋದ ಎಲ್ಲೆ ಮೀರದ ಪ್ರತೀ ಆಚರಣೆಗಳಲ್ಲೂ ಘನ ಆದರ್ಷದ ಸೌಂದರ್ಯವಿದೆ. ಇದು ನಾವೆಲ್ಲರೂ ನಮ್ಮ ಸಂಸ್ಕೃತಿ ಎಂಬ ವೃಕ್ಷದ ಬಗ್ಗೆ ತಿಳಿದುಕೊಳ್ಳುತ್ತಾ ಬೇರಿನ ಆಳಕ್ಕೆ ಧುಮುಕುವ ಸಮಯ. ಇಲ್ಲಿನ ಸತ್ವದ ಸತ್ಯ ಅರಿತು, ಅದರೊಳಗೆ ಬೆರೆತು, ಅದೇ ಹಳೆ ಬೇರಿಗೆ ಹೊಸ ಚಿಗುರಾಗಿ ನಳನಳಿಸುವ ಸಮಯವಾಗಿದೆ.

-ಪಲ್ಲವಿ ಚೆನ್ನಬಸಪ್ಪ

ಗಡಿಹಳ್ಳಿ ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next