ವಾಷಿಂಗ್ಟನ್: ಜಿಎಸ್‌ಪಿ ವ್ಯಾಪ್ತಿಯಲ್ಲಿ ಭಾರತಕ್ಕೆ ಆದ್ಯತೆಯ ವ್ಯಾಪಾರ ಸ್ಥಾನಮಾನವನ್ನು ಪುನಃ ನೀಡಲು ಅಮೆರಿಕ ಚಿಂತಿಸುತ್ತಿದೆ ಎಂದು ಟ್ರಂಪ್ ಆಡಳಿತದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಎಸ್ಪಿ ಅಥವಾ ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ, ಅಮೆರಿಕದ ಒಂದು ಆದ್ಯತೆಯ ಸುಂಕ ವ್ಯವಸ್ಥೆಯಾಗಿದೆ.
ಈ ಸ್ಥಾನಮಾನ ಪಡೆದ ದೇಶಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಸುಂಕ ಕಡಿತ ಮಾಡುವ ಸೌಲಭ್ಯವನ್ನು ಇದು ಕಲ್ಪಿಸುತ್ತದೆ.
ಅಮೆರಿಕ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲೈಟ್‌ಲೈಸರ್ ಈ ಬಗ್ಗೆ ಪ್ರತಿ ಕ್ರಿಯೆ ನೀಡಿ, ಈ ಕುರಿತು ಭಾರತದ ಜತೆ ಮಾತುಕತೆ ನಡೆಸುತ್ತಿದ್ದೇವೆ.
ಭಾರತವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಈ ಸ್ಥಾನಮಾನವನ್ನು ಮರುಸ್ಥಾಪಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸೇಬುಗಳ ಮೇಲೆ ಭಾರತ ಶೇ.70ರಷ್ಟು ಸುಂಕ ವಿಧಿಸುತ್ತಿದೆ. ದ್ವಿದಳ ಧಾನ್ಯಗಳ ಮೇಲೂ ಹೆಚ್ಚಿನ ಸುಂಕ ವಿಧಿಸಲಾಗುತ್ತಿದೆ.
ಈ ರೀತಿ ಅಧಿಕ ಸುಂಕ ವಿಧಿಸುವ ಕ್ರಮ, ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ – ವ್ಯವಹಾರಗಳ ವೃದ್ಧಿಗೆ ಸಹಕಾರಿಯಾಗಲಾರದು ಎಂದು ಅವರು ತಿಳಿಸಿದರು.