Advertisement

ಯೋಗಕ್ಕಿದ್ದ ನಿಷೇಧ ತೆರವು ; ಕೊನೆಗೂ ಅಮೆರಿಕದ ಅಲಬಾಮಾದಲ್ಲಿ ಹಸುರುನಿಶಾನೆ

10:19 AM Mar 17, 2020 | Hari Prasad |

ವಾಷಿಂಗ್ಟನ್‌: ವಿಶ್ವವೇ ಒಪ್ಪಿಕೊಂಡ ಯೋಗವನ್ನು ಕೊನೆಗೂ ಅಮೆರಿಕದ ಅಲಬಾಮಾ ಪ್ರಾಂತೀಯ ಸರಕಾರ ಒಪ್ಪಿಕೊಂಡಿದೆ. ಆದರೆ ಭಾರತದ ‘ನಮಸ್ತೆ’ಗೆ ಮಾತ್ರ ಅದು ಅನುಮತಿ ಸೂಚಿಸಿಲ್ಲ. ಕಳೆದ ಮಂಗಳವಾರ ನಡೆದ ಬಿರುಸಿನ ಚರ್ಚೆ ಬಳಿಕ ಯೋಗವನ್ನು ಅಲಬಾಮಾ ಪ್ರಾಂತೀಯ ಶಾಲೆಗಳಲ್ಲಿ ಅನುಷ್ಠಾನಗೊಳಿಸುವುದರ ಬಗ್ಗೆ 84-17 ಮತಗಳ ಅಂತರದಿಂದ ಸಮ್ಮತಿ ಸೂಚಿಸಲಾಯಿತು.

Advertisement

ವಿಶ್ವಾದ್ಯಂತ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ಜಾಗತಿಕ ನಾಯಕರು ಕೂಡ ‘ನಮಸ್ತೆ’ ಮೂಲಕ ಗಣ್ಯರನ್ನು ಗೌರವಿಸುತ್ತಿದ್ದರು ಕೂಡ ಪ್ರಾಂತೀಯ ಸರಕಾರ ಅದಕ್ಕೆ ಅನುಮತಿ ನೀಡಿಲ್ಲ. ಡೆಮಾಕ್ರಾಟಿಕ್‌ ಪಾರ್ಟಿಯ ಜೆರ್ಮಿ ಗ್ರೇ ಅವರು ಶಾಲೆಗಳಲ್ಲಿ ಯೋಗಕ್ಕೆ ಹೇರಲಾಗಿದ್ದ ನಿಷೇಧ ಹಿಂಪಡೆವ ವಿಧೇಯಕ ಮಂಡಿಸಿದರು.

ಪ್ರಾಂತೀಯ ಸರಕಾರದ ಕೆಳಮನೆಯಲ್ಲಿ ಅಂಗೀಕಾರ ಪಡೆದ ಯೋಗ ವಿಧೇಯಕ ಇನ್ನು ಅಲ್ಲಿನ ಮೇಲ್ಮನೆಯಲ್ಲಿ ಚರ್ಚೆಗೊಂಡು ಅಂಗೀಕಾರ ಪಡೆದರೆ ಶಾಲೆಗಳಲ್ಲಿ ಅದನ್ನು ಬೋಧಿಸುವ ಬಗ್ಗೆ ಸರಕಾರಿ ಆದೇಶ ಹೊರಬೀಳಲಿದೆ.

ಬಳಿಕ ಗವರ್ನರ್‌ ಕೆ ಐವಿ ಸಹಿ ಹಾಕಲಿದ್ದಾರೆ. ಆ ವಿಧೇಯಕದ ಪ್ರಕಾರ, ಸ್ಥಳೀಯ ಶಾಲಾ ಶಿಕ್ಷಣ ಮಂಡಳಿಗಳು ಯೋಗವನ್ನು ಪಠ್ಯಕ್ರಮದಲ್ಲಿ ಸೇರಿಸುವ ಅವಕಾಶ ಕಲ್ಪಿಸಿಕೊಡುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ಕೂಡ ಅದನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ. ಪ್ರಾಂತೀಯ ಸರಕಾರದ ಕೆಳಮನೆಯಲ್ಲಿನ ನಿರ್ಧಾರದಿಂದಾಗಿ 27 ವರ್ಷಗಳಿಂದ ಯೋಗಕ್ಕೆ ಇರುವ ನಿಷೇಧ ಕೊನೆಗೂ ಮುಕ್ತಾಯವಾಗುವ ಹಂತದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next