Advertisement

ಚೀನ ವಿರುದ್ಧ ದಿಗ್ಬಂಧನ ಸಾಧ್ಯತೆ ; ಅಮೆರಿಕ ಸಂಸತ್‌ನಲ್ಲಿ ಮಸೂದೆ ಮಂಡನೆ

08:57 AM May 15, 2020 | Hari Prasad |

ವಾಷಿಂಗ್ಟನ್‌: ಕೋವಿಡ್ ವೈರಸ್ ಉಗಮ ಕಾರಣದ ಅಮೆರಿಕ – ಚೀನ ಜಟಾಪಟಿ ಹೊಸತೊಂದು ಬಿಕ್ಕಟ್ಟಿಗೆ ಕಾರಣವಾಗಲಿದೆಯೇ ಎಂಬ ಭೀತಿ ವ್ಯಕ್ತವಾಗಿದೆ.

Advertisement

ಏಷ್ಯಾದ ಬಲಾಡ್ಯ ರಾಷ್ಟ್ರವಾಗಿರುವ ಚೀನ ವಿರುದ್ಧ ದಿಗ್ಬಂಧನ ಹೇರುವ ಬಗೆಗಿನ ಮಸೂದೆಯನ್ನು ಅಮೆರಿಕದ ಸಂಸತ್‌ನಲ್ಲಿ ಮಂಡಿಸಲಾಗಿದೆ.

ಅಮೆರಿಕ ಸಂಸತ್‌ನ ಪ್ರಭಾವಶಾಲಿ ಸಂಸದ ಲಿಂಡ್ಸೆ ಗ್ರಹಾಂ ಮತ್ತು ಇತರ ಎಂಟು ಮಂದಿ ಸಂಸದರು ‘ಕೋವಿಡ್‌-19 ಉತ್ತರದಾಯಿತ್ವ ಕಾಯ್ದೆ’ ಕುರಿತಾದ ಮಸೂದೆಯನ್ನು ಮಂಡಿಸಿದ್ದಾರೆ. ಅದರ ಪ್ರಕಾರ ತನಿಖೆಗೆ ಚೀನ ಸಹಕಾರ ನೀಡದಿದ್ದರೆ, ಚೀನ ವಿರುದ್ಧ ನಿರ್ಬಂಧ ಹೇರಲು ಅಧ್ಯಕ್ಷ ಟ್ರಂಪ್‌ಗೆ ಅಧಿಕಾರ ಬರುತ್ತದೆ.

ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳ ನೇತೃತ್ವದ, ಇಲ್ಲವೇ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದ ತನಿಖಾ ತಂಡಕ್ಕೆ ಕೋವಿಡ್ ವೈರಸ್ ಕುರಿತಾಗಿ ಚೀನ ಸಂಪೂರ್ಣ ಮಾಹಿತಿ ನೀಡಬೇಕು. ಜತೆಗೆ, ಮಾನವನ ಆರೋಗ್ಯಕ್ಕೆ ತೊಂದರೆ ನೀಡಬಹುದಾದ ಮಾರುಕಟ್ಟೆಗಳನ್ನು ಮುಚ್ಚಬೇಕು.

ಈ ಬಗ್ಗೆ ಚೀನ ಸಹಕಾರ ನೀಡಿದೆ ಎಂದು 60 ದಿನಗಳೊಳಗಾಗಿ ಸಂಸತ್‌ಗೆ ಅಧ್ಯಕ್ಷರು ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ, ಚೀನದ ವಿರುದ್ಧ ಆರ್ಥಿಕ ಹಾಗೂ ಇನ್ನಿತರ ಆಡಳಿತಾತ್ಮಕ ನಿರ್ಬಂಧಗಳನ್ನು ಹೇರಲು ಈ ಮಸೂದೆ ಟ್ರಂಪ್‌ಗೆ ಅಧಿಕಾರ ನೀಡುತ್ತದೆ.

Advertisement

ಇದರ ಹೊರತಾಗಿಯೂ ಚೀನ ವಿರುದ್ಧ ವೀಸಾ ನಿಷೇಧ, ಅಲ್ಲಿಗೆ ಪ್ರಯಾಣ ಮಾಡದಂತೆ ತಡೆ, ಚೀನ ಸಂಸ್ಥೆಗಳಲ್ಲಿ ಹೂಡಿಕೆ ಮಾಡದಂತೆ ಅಮೆರಿಕದ ವಿತ್ತ ಸಂಸ್ಥೆಗಳಿಗೆ ಕಟ್ಟಪ್ಪಣೆ, ಅಲ್ಲಿನ ಕಂಪೆನಿಗಳು ಅಮೆರಿಕದ ಸ್ಟಾಕ್ ‌ಎಕ್ಸ್‌ಚೇಂಜ್‌ಗಳಲ್ಲಿ ಲಿಸ್ಟ್‌ ಆಗದಂತೆ ನೋಡಿಕೊಳ್ಳುವ ಬಗ್ಗೆ ಆದೇಶ ಹೊರಡಿಸಲೂ ಅಮೆರಿಕ ಅಧ್ಯಕ್ಷರಿಗೆ ಅಧಿಕಾರವಿದೆ.

ಡಬ್ಲ್ಯುಎಚ್‌ಒ ಮೇಲೆ ಚೀನ ಒತ್ತಡ: ಸಿಐಎ
ಆರಂಭದ ದಿನಗಳಲ್ಲಿ ಕೋವಿಡ್ ವೈರಸ್ ಬಗ್ಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡುವುದನ್ನು ವಿಳಂಬ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ (WHO) ಮೇಲೆ ಚೀನ ಒತ್ತಡ ಹೇರಿತ್ತು ಎಂಬ ಸಂಗತಿಯನ್ನು ಸಿಐಎ (ಕೇಂದ್ರೀಯ ಗುಪ್ತಚರ ಸಂಸ್ಥೆ) ವರದಿಯಲ್ಲಿ ಉಲ್ಲೇಖೀಸಲಾಗಿದೆ. ಕೋವಿಡ್ ವೈರಸ್ ಅನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದರೆ ಕೊರೊನಾ ಕುರಿತಾದ ತನಿಖೆಗೆ ಸಹಕಾರ ನೀಡುವುದಿಲ್ಲ ಎಂದು ಡಬ್ಲ್ಯು.ಎಚ್.‌ಒ.ಗೆ ಚೀನ ಬೆದರಿಕೆ ಹಾಕಿತು.

ಕೋವಿಡ್ ವೈರಸ್‌ ಇಡೀ ವಿಶ್ವಕ್ಕೆ ಹರಡುತ್ತಿರುವ ಸಂದರ್ಭದಲ್ಲಿ, ಅತ್ಯಂತ ನಿರ್ಣಾಯಕ ಸಮಯವಾದ ಜನವರಿಯಲ್ಲಿಯೇ ಚೀನ ಈ ವಿಳಂಬ ನೀತಿ ಅನುಸರಿಸಿತು. ಅಲ್ಲದೆ, ಕೋವಿಡ್ ವೈರಸ್ ವಿಶ್ವಾದ್ಯಂತ ಹರಡುತ್ತಿದ್ದರೆ, ಚೀನ ಮಾತ್ರ ಅಮೆರಿಕ, ಮತ್ತಿತರ ದೇಶಗಳಿಂದ ಅಗತ್ಯ ವಾದ ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಿಕೊಂಡು ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಯಿತು ಎಂದು ಸಿಐಎ ವರದಿಯಲ್ಲಿ ಉಲ್ಲೇಖಿ ಸಲಾಗಿದೆ ಎಂದು ‘ನ್ಯೂಸ್‌ವೀಕ್‌’ ವರದಿ ಮಾಡಿದೆ.

ಸಾರ್ಸ್‌, ಹಕ್ಕಿಜ್ವರ, ಹಂದಿ ಜ್ವರ, ಕೋವಿಡ್ ವೈರಸ್ ಸೇರಿದಂತೆ ಕಳೆದ 20 ವರ್ಷಗಳ ಅವಧಿಯಲ್ಲಿ ಚೀನದಿಂದ 5 ಪಿಡುಗುಗಳು ಹೊರಬಂದಿದೆ. ಚೀನದ ಈ ಉಪದ್ರವ ನಿಲ್ಲಲೇಬೇಕು.
– ರಾಬರ್ಟ್‌ ಒ ಬ್ರಿಯೆನ್‌, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ

Advertisement

Udayavani is now on Telegram. Click here to join our channel and stay updated with the latest news.

Next