Advertisement

ಬಾಲಕಿ ಶ್ರಾವ್ಯಗೆ ಟ್ರಂಪ್‌ ಗೌರವ

03:23 AM May 19, 2020 | Hari Prasad |

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 10 ವರ್ಷದ ಭಾರತೀಯ ಮೂಲದ ಬಾಲಕಿ ಶ್ರಾವ್ಯ ಅಣ್ಣಪ್ಪ ರೆಡ್ಡಿ ಅವರನ್ನು ಗೌರವಿಸಿದ್ದಾರೆ.

Advertisement

ಕೋವಿಡ್ ವೈರಸ್‌ನಿಂದ ತತ್ತರಿಸಿರುವ ಅಮೆರಿಕದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ವೈರಸ್‌ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯ, ನರ್ಸ್‌ ಹಾಗೂ ಅಗ್ನಿಶಾಮಕ ದಳದ ಸಿಬಂದಿಗೆ ಶ್ರಾವ್ಯ ಸಿಹಿ ತಿನಿಸುಗಳನ್ನು ಹಂಚಿದ್ದರು. ಆರೋಗ್ಯ ಕಾರ್ಯಕರ್ತರಿಗೆ ಗ್ರೀಟಿಂಗ್ ಕಾರ್ಡ್‌ಗಳನ್ನು ಕೊಡುವ ಮೂಲಕ ಅವರಲ್ಲಿ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದರು.

ಒಟ್ಟಾರೆ ತನ್ನ ಕೈಯಾರೆ ಬರೆದ 200ಕ್ಕೂ ಹೆಚ್ಚು ಗ್ರೀಟಿಂಗ್‌ ಕಾರ್ಡ್‌ಗಳನ್ನು ಶ್ರಾವ್ಯ ಹಂಚಿದ್ದರು. ಈ ಸಾಮಾಜಿಕ ಕಾರ್ಯಕ್ಕಾಗಿ ಶ್ರಾವ್ಯ ಸೇರಿದಂತೆ ಒಟ್ಟಾರೆ ಮೂರು ಮಂದಿಯನ್ನು ಸ್ಮರಣಿಕೆ ನೀಡಿ ಟ್ರಂಪ್‌ ಸನ್ಮಾನಿಸಿದರು. ವಿಶೇಷವೆಂದರೆ ಮೂವರು ಬಾಲಕಿಯರು ಕೂಡ 10 ವರ್ಷದವರೇ ಆಗಿದ್ದಾರೆ.

ಶ್ರಾವ್ಯ ಮೇರಿಲ್ಯಾಂಡ್‌ ನಲ್ಲಿರುವ ಹ್ಯಾನೋವರ್‌ ಹಿಲ್ಸ್‌ನ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಮಾತ್ರವಲ್ಲ ಆ ಶಾಲೆಯ ಗರ್ಲ್ಸ್‌ ಸ್ಕೌಟ್‌ ತಂಡದ ಸದಸ್ಯೆಯೂ ಆಗಿದ್ದಾರೆ. ಶ್ರಾವ್ಯ ತಂದೆ – ತಾಯಿ ಮೂಲತಃ ಆಂಧ್ರಪ್ರದೇಶದವರಾಗಿದ್ದಾರೆ.

ಒಬಾಮಾ ಅಸಮರ್ಥ ಅಧ್ಯಕ್ಷ: ತಿರುಗೇಟು
ಒಂದೆಡೆ ಕೋವಿಡ್ ರಣಕೇಕೆ, ಇನ್ನೊಂದೆಡೆ ಅಧ್ಯಕ್ಷ- ಮಾಜಿ ಅಧ್ಯಕ್ಷರ ನಡುವಿನ ವಾಗ್ಯುದ್ಧ! ಅಮೆರಿಕ ಪ್ರಜೆಗಳು ಇವೆರಡನ್ನೂ ಅನುಭವಿಸಬೇಕಾದ ದುಃಸ್ಥಿತಿ ಎದುರಾಗಿದೆ. ‘ಬರಾಕ್‌ ಒಬಾಮಾ ಬಗ್ಗೆ ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ. ಅವರು ಅಮೆರಿಕ ಕಂಡ ಅಸಮರ್ಥ ಅಧ್ಯಕ್ಷ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜರಿದಿದ್ದಾರೆ.

Advertisement

ಶ್ವೇತಭವನದಲ್ಲಿ ಸುದ್ದಿಗೋಷ್ಠಿ ವೇಳೆ, ಟ್ರಂಪ್‌ ಹೀಗೆ ಚಾಟಿ ಬೀಸಿದ್ದಾರೆ. ಇತ್ತೀಚೆಗಷ್ಟೇ ಬರಾಕ್‌ ಒಬಾಮಾ, ‘ಕೋವಿಡ್ ಸಾಂಕ್ರಾಮಿಕವು ಅಮೆರಿಕದ ನಾಯಕತ್ವವನ್ನೇ ಬೆತ್ತಲುಮಾಡಿದೆ. ನಾಯಕನ ವಿವೇಚನೆಯಿಲ್ಲದ ಮಾತುಗಳಿಂದ ಜಗತ್ತಿನಲ್ಲಿ ಅಮೆರಿಕ ಜಗಳಗಂಟ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ’ ಎಂದು ತಮ್ಮ ಅಭಿಮಾನಿ ಬಳಗದ ನಡುವೆ ಹೇಳಿಕೊಂಡಿದ್ದರು. ಟ್ರಂಪ್‌ ಹೆಸರು ಎತ್ತದೆ ಹೇಳಿದ್ದ ಈ ಮಾತು, ಸೋರಿಕೆಯಾಗಿ, ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next