ಕೋವಿಡ್ 19 ವೈರಸ್ ದಾಳಿಗೆ ತುತ್ತಾಗಿ 10 ಸಾವಿರಕ್ಕೂ ಅಧಿಕ ಮಂದಿಯನ್ನು ಕಳೆದುಕೊಂಡಿರುವ ಅಮೆರಿಕ ಈಗ ಪರ್ಲ್ ಹಾರ್ಬರ್ ಸ್ಥಿತಿಯನ್ನು ಎದುರಿಸುತ್ತಿದೆ. ಸಾವು ಹಾಗೂ ಸೋಂಕಿತರ ಸಂಖ್ಯೆ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ವಾರವು ಅತ್ಯಂತ ನಿರ್ಣಾಯಕ ಎಂದು ಪರಿಗಣಿಸಲ್ಪಟ್ಟಿದೆ.
ಕೂಡಲೇ ರಾಷ್ಟ್ರೀಯ ಕಾರ್ಯಯೋಜನೆಯೊಂದನ್ನು ರೂಪಿಸಿ ವೈರಸ್ ವ್ಯಾಪಿಸುವಿಕೆಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಈವರೆಗೆ ಅಮೆರಿಕವು 16 ಲಕ್ಷ ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದೆ.
ಬೇರೆ ಎಲ್ಲ ದೇಶಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಜನರನ್ನು ನಾವು ಪರೀಕ್ಷೆಗೆ ಒಳಪಡಿಸಿದ್ದೇವೆ. ದೇಶಾದ್ಯಂತ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಮನೆಯಿಂದ ಹೊರಗೆ ಕಾಲಿಡದೇ ಸಾಮಾಜಿಕ ಅಂತರ ಕಾಪಾಡಿಕೊಂಡರೆ ವೈರಸ್ ನಿಯಂತ್ರಣ ಸಾಧ್ಯ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ದಿನೇ ದಿನೆ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ವಾರದಲ್ಲಿ ಇದು ಇನ್ನಷ್ಟು ಏರಿಕೆ ಕಾಣುವ ಭೀತಿಯಿದೆ. ಹೀಗಾಗಿ ಮುಂದಿನ 10 ದಿನಗಳ ಮಟ್ಟಿಗಾದರೂ ದಯವಿಟ್ಟು ಯಾರೂ ಮನೆಯಿಂದ ಹೊರಬರಬೇಡಿ. ಎಲ್ಲರೂ ನಿಯಮ ಪಾಲಿಸಿದರೆ, ಸುರಂಗದ ಕೊನೆಗೊಂದು ಬೆಳಕಿಂಡಿ ಕಾಣಲು ಸಾಧ್ಯ ಎಂದು ಸರಕಾರ ಹೇಳಿದೆ. ನ್ಯೂಯಾರ್ಕ್‌ನಲ್ಲಿ ರವಿವಾರ 3,565ರಷ್ಟಿದ್ದ ಸಾವಿನ ಸಂಖ್ಯೆ ಸೋಮವಾರ 4,159ಕ್ಕೇರಿಕೆಯಾಗಿದೆ.
ಏನಿದು ಪರ್ಲ್ ಹಾರ್ಬರ್ ಸ್ಥಿತಿ?
1941ರ ಡಿ.7ರಂದು ಅಮೆರಿಕದ ನೌಕಾನೆಲೆಯಾದ ಪರ್ಲ್ ಹಾರ್ಬರ ಮೇಲೆ ಜಪಾನ್ ನೌಕಾಪಡೆಯು ಹಠಾತ್ ದಾಳಿ ನಡೆಸಿತ್ತು. ಶತ್ರುಗಳು ಈ ಪ್ರದೇಶಕ್ಕೆ ದಾಳಿ ಮಾಡಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ಅಮೆರಿಕಕ್ಕೆ ಇದು ಅನಿರೀಕ್ಷಿತ ಆಘಾತ ನೀಡಿತ್ತು. 1,100 ಯೋಧರು ಹಾಗೂ ಅನೇಕ ನೌಕೆಗಳು ಕ್ಷಣಮಾತ್ರದಲ್ಲಿ ನಾಶವಾಗಿದ್ದವು. ಅಂದಿನ ಅನಿರೀಕ್ಷಿತ ದಾಳಿಯನ್ನು ನೆನಪಿಸುವಂತೆ ಈಗ ಕೋವಿಡ್ 19 ವೈರಸ್ ಎಂಬ ಅಗೋಚರ ಜೀವಿಯು ಅಮೆರಿಕವನ್ನು ತತ್ತರಿಸುವಂತೆ ಮಾಡಿದೆ.