ವಾಷಿಂಗ್ಟನ್ : ವಿಶ್ವಸಂಸ್ಥೆ ಪ್ರಕಟಿಸಿರುವ ಸಮಗ್ರ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಪಾಕಿಸ್ಥಾನದ 139 ಭಯೋತ್ಪಾದಕ ಸಂಘಟನೆಗಳು ಕಾಣಿಸಿಕೊಂಡಿದ್ದು ವಿಶ್ವದ ದೃಷ್ಟಿಯಲ್ಲಿ ಪಾಕಿಸ್ಥಾನ ಈಗ ವಸ್ತುತಃ ಉಗ್ರ ಪ್ರವರ್ತಕ ದೇಶವೇ ಆಗಿ ತೋರಿ ಬಂದಿದೆ.
ವಿಶ್ವ ಸಂಸ್ಥೆ ನಿನ್ನೆ ಮಂಗಳವಾರ ಜಾಗತಿಕ ಉಗ್ರ ಸಂಘಟನೆಗಳ ಸಮಗ್ರ ಪಟ್ಟಿಯನ್ನು ಬಹಿರಂಗಪಡಿಸಿದೆ. ಇದರಲ್ಲಿ ಪಾಕ್ ನೆಲದಲ್ಲಿ ಕಾರ್ಯಾಚರಿಸುತ್ತಿರುವ, ಹೊರ ದೇಶಗಳಲ್ಲಿ ತನ್ನ ಕಾರಸ್ಥಾನವನ್ನು ಹೊಂದಿರುವ, ವಿದೇಶಗಳ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ, ಪಾಕಿಸ್ಥಾನದಲ್ಲಿ ಮತ್ತು ನೆರೆ ಹೊರೆಯ ದೇಶಗಳಲ್ಲಿ ಭಯೋತ್ಪಾದನೆಯನ್ನು ಕೈಗೊಳ್ಳುವ ಒಟ್ಟು 139 ಉಗ್ರ ಸಂಘಟನೆಗಳನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ವಿಶ್ವಸಂಸ್ಥೆಯ ಉಗ್ರ ಪಟ್ಟಿಯ ಅಗ್ರಸ್ಥಾನವನ್ನು ಇಮಾನ್ ಅಲ್ ಝವಾಹಿರಿ ನೇತೃತ್ವದ ಅಲ್ ಕಾಯಿದಾ ಸಂಘಟನೆ ಪಡೆದುಕೊಂಡಿದೆ.
ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಉಗ್ರ ವ್ಯಕ್ತಿಗಳ ಪೈಕಿ ಎದ್ದು ಕಾಣುವ ಹೆಸರೆಂದರೆ ದಾವೂದ್ ಇಬ್ರಾಹಿಂ, ಹಾಫೀಜ್ ಸಯೀದ್, ಆತನ ಸಹಾಯಕ ಅಬ್ದುಲ್ ಸಲಾಂ ಮತ್ತು ಝಫರ್ ಇಕ್ಬಾಲ್.
ಪಾಕ್ ಉಗ್ರ ಸಂಘಟನೆಗಳ ಪೈಕಿ ಪ್ರಮುಖವಾಗಿ ಕಾಣಿಸಿಕೊಂಡಿರುವುಗಳು ಇಂತಿವೆ : ಅಲ್ ರಶೀದ್ ಟ್ರಸ್ಟ್, ಹರ್ಕತುಲ್ ಮುಜಾಹಿದೀನ್, ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಉಜ್‌ಬೆಕಿಸ್ಥಾನ್, ವಫಾ ಹ್ಯುಮ್ಯಾನಿಟೇರಿಯನ್ ಆರ್ಗನೈಸೇಶನ್, ಜೆಇಎಂ, ರಬಿತಾ ಟ್ರಸ್ಟ್, ಉಮಾಹ್ ತಮೀರ್ ಇ ನಾವ್, ಅಫ್ಘಾನ್ ಸಪೋರ್ಟ್ ಕಮಿಟಿ, ರಿವೈವಲ್ ಆಫ್ ಇಸ್ಲಾಮಿಕ್ ಹೆರಿಟೇಜ್ ಸೊಸೈಟಿ, ಲಷ್ಕರ್ ಎ ಜಾಂಗ್ವಿ, ಅಲ್ ಹುಮೇನ್ ಫೌಂಡೇಶನ್, ಇಸ್ಲಾಮಿಕ್ ಜಿಹಾದ್ ಗ್ರೂಪ್, ಅಲ್ ಅಖ್‌ತರ್ ಟ್ರಸ್ಟ್ ಇಂಟರ್‌ನ್ಯಾಶನಲ್, ಹರ್ಕತುಲ್ ಜಿಹಾದ್ ಇಸ್ಲಾಮಿ, ತೆಹರೀಕ್ ಎ ತಾಲಿಬಾನ್ ಪಾಕಿಸ್ಥಾನ್, ಜಮಾತುಲ್ ಅಹರಾರ್ ಮತ್ತು ಖತೀಬಾ ಇಮಾಮ್ ಅಲ್ ಬುಖಾರಿ.