ವಿಶ್ವಸಂಸ್ಥೆ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಅಮಾನತುಗೊಂಡ ಬಳಿಕ ಚಡಪಡಿಸುತ್ತಿರುವ ನೆರೆರಾಷ್ಟ್ರ ಪಾಕಿಸ್ಥಾನ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ದುಂಬಾಲು ಬಿದ್ದು ಮುಖಭಂಗ ಅನುಭವಿಸಿರುವ ಪಾಕಿಸ್ಥಾನ ಇದೀಗ ತನ್ನ ಆಪ್ತಮಿತ್ರ ಚೀನಾ ದೇಶದ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಈ ಕುರಿತಾಗಿ ಪತ್ರ ಬರೆಯಿಸಿದೆ.
ಪಾಕಿಸ್ಥಾನ ತನ್ನ ಮಿತ್ರ ರಾಷ್ಟ್ರ ಚೀನಾಗೆ ಬರೆದಿರುವ ಪತ್ರವನ್ನು ಆಧರಿಸಿ, ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತಾಗಿ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಮುಚ್ಚಿದ ಬಾಗಿಲ ಸಭೆಯಲ್ಲಿ ಚರ್ಚೆ ನಡೆಸಬೇಕು ಎಂದು ಚೀನಾ ವಿಶ್ವಸಂಸ್ಥೆಗೆ ತಾಕೀತು ಮಾಡಿತ್ತು. ಅದರ ಪ್ರಕಾರ ಮುಚ್ಚಿದ ಬಾಗಿಲ ಸಭೆ ಇದೀಗ ನ್ಯೂಯಾರ್ಕ್ ನಲ್ಲಿ ಪ್ರಾರಂಭಗೊಂಡಿದೆ. ಆದರೆ ಇದರಲ್ಲಿ ದೂರುದಾರ ದೇಶವಾಗಿರುವ ಪಾಕಿಸ್ಥಾನದ ಪಾಲ್ಗೊಳ್ಳುವಿಕೆಗೆ ಅನುಮತಿ ಸಿಕ್ಕಿಲ್ಲ. ಈ ಮೂಲಕ ಪಾಕಿಸ್ಥಾನಕ್ಕೆ ಪ್ರಾರಂಭದಲ್ಲೇ ಮುಖಭಂಗವಾದಂತಾಗಿದೆ.
ಮುಚ್ಚಿದ ಬಾಗಿಲ ಕೋಣೆಯಲ್ಲಿನ ಚರ್ಚೆಯು ಭಾರತೀಯ ಕಾಲಮಾನ ಸಾಯಂಕಾಲ 7.30ಕ್ಕೆ ಪ್ರಾರಂಭಗೊಂಡಿದೆ. ಈ ಸಭೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಭಾಗವಹಿಸುತ್ತಿವೆ.
ಸಭೆಯಲ್ಲಿ ರಷ್ಯಾ ಭಾರತದ ಪರವಾಗಿ ಮಾತನಾಡಿದೆ. ಈ ವಿಷಯದಲ್ಲಿ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳ ಯಾವುದೇ ಪಾತ್ರವಿಲ್ಲ ಇದು ಸಂಪೂರ್ಣವಾಗಿ ಭಾರತ ಮತ್ತು ಪಾಕಿಸ್ಥಾನ ನಡುವಿನ ದ್ವಿಪಕ್ಷೀಯ ವಿಚಾರ ಎಂದು ರಷ್ಯಾ ಸಭೆಯಲ್ಲಿ ಪ್ರತಿಪಾದಿಸಿದೆ. ಆದರೆ ಭಾರತದ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೀನಾ, ಭಾರತದ ಈ ನಡೆ ಆಕ್ಷೇಪಾರ್ಹ ಎಂದು ವಾದಿಸಿದೆ.
ಇತ್ತ ವಿಶ್ವಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಪಾಕಿಸ್ಥಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಗುಪ್ತ ಸಭೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಮ್ರಾನ್ ಖಾನ್ ಮತ್ತು ಟ್ರಂಪ್ ಅವರು ಸುಮಾರು ಹನ್ನೆರಡು ನಿಮಿಷಗಳ ಕಾಲ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ.