Advertisement

United Nations ವರದಿ: 2060ಕ್ಕೆ ಭಾರತದ ಜನಸಂಖ್ಯೆ 170 ಕೋಟಿ

12:23 AM Jul 13, 2024 | Team Udayavani |

ವಿಶ್ವಸಂಸ್ಥೆ: ಜಗತ್ತಿನ ಜನಸಂಖ್ಯೆ ನಾಗಾಲೋಟದಿಂದ ಏರುತ್ತಿದ್ದು, ಪ್ರಸ್ತುತ 820 ಕೋಟಿ ಇರುವ ಜನಸಂಖ್ಯೆ 2080ರ ಹೊತ್ತಿಗೆ 1,000 ಕೋಟಿ ದಾಟಲಿದೆ ಎಂದು ಗುರುವಾರ ಬಿಡುಗಡೆಯಾದ ವಿಶ್ವಸಂಸ್ಥೆಯ “ದಿ ವರ್ಲ್ಡ್ ಪಾಪ್ಯುಲೇಶನ್‌ ಪ್ರಾಸ್ಪೆಕ್ಟ್ 2024′ ವರದಿ ಹೇಳಿದೆ. 2060ರ ಹೊತ್ತಿಗೆ ಭಾರತದ ಜನಸಂಖ್ಯೆ 170 ಕೋಟಿಗೆ ಮುಟ್ಟಲಿದ್ದು, ಅನಂತರ ಅದು ಶೇ.12ರಷ್ಟು ಇಳಿಯುವ ನಿರೀಕ್ಷೆಯಿದೆ. ಆದರೆ ಈ ಶತಮಾನದುದ್ದಕ್ಕೂ ಅಂದರೆ 2100ರ ವರೆಗೆ ಭಾರತವು ವಿಶ್ವದ ಅತೀ ಹೆಚ್ಚು ಜನಸಂಖ್ಯೆಯಿರುವ ದೇಶವಾಗಿ ಉಳಿಯಲಿದೆ ಎಂದೂ ವರದಿ ಹೇಳಿದೆ. 2100ರ ಹೊತ್ತಿಗೆ ವಿಶ್ವದ ಜನಸಂಖ್ಯೆ ಕುಸಿಯಲಿದೆ ಎನ್ನಲಾಗಿದೆ.

Advertisement

ಪ್ರಸ್ತುತ (2024ರಲ್ಲಿ) ಭಾರತದ ಜನಸಂಖ್ಯೆ 145 ಕೋಟಿಗೇರಿದೆ. ಕಳೆದ ವರ್ಷವೇ ಭಾರತ ಚೀನವನ್ನು (141 ಕೋಟಿ) ಮೀರಿ ವಿಶ್ವದಲ್ಲೇ ಗರಿಷ್ಠ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಏರಿಕೆ ಹೀಗೆಯೇ ಮುಂದುವರಿದರೆ 2060ರ ಹೊತ್ತಿಗೆ 169 ಕೋಟಿಗೆ ಮುಟ್ಟಲಿದೆ. ಬಳಿಕ ಶೇ.12ರಷ್ಟು ಜನಸಂಖ್ಯೆ ಕುಸಿದು 150 ಕೋಟಿ ಆಗಲಿದೆ ಎಂದು ವರದಿ ತಿಳಿಸಿದೆ.

ಚೀನ ಜನಸಂಖ್ಯೆ ಇನ್ನಷ್ಟು ಕುಸಿತ: ಒಂದು ಕಾಲದಲ್ಲಿ ವಿಶ್ವದಲ್ಲೇ ಗರಿಷ್ಠ ಜನಸಂಖ್ಯೆ ಹೊಂದಿದ್ದ ಚೀನ ಪ್ರಸ್ತುತ ಇಳಿದಿದೆ. 2054ರ ಹೊತ್ತಿಗೆ ಆ ಪ್ರಮಾಣ 121 ಕೋಟಿಗೆ ಇಳಿಯಬಹುದು. 2100ರ ಹೊತ್ತಿಗೆ ಇದು 63.30 ಕೋಟಿಗೆ ಇಳಿಯಬಹುದು. ಅಂದರೆ ಚೀನದ ಜನಸಂಖ್ಯೆಯ ಗಾತ್ರ 1950ರ ದಶಕದಲ್ಲಿ ಎಷ್ಟಿತ್ತೋ ಅಷ್ಟಕ್ಕೆ ಇಳಿಯುವ ಸಾಧ್ಯತೆಯಿದೆ.

ಫ‌ಲವತ್ತತೆ ಇಳಿಕೆ
ಜಗತ್ತಿನಾದ್ಯಂತ ಫ‌ಲವತ್ತತೆ ಪ್ರಮಾಣವು ನಿರೀಕ್ಷೆಗೂ ಕ್ಷಿಪ್ರವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ಈ ಶತಮಾನದ ಅಂತ್ಯದೊಳಗೆಯೇ ವಿಶ್ವಾದ್ಯಂತ ಜನಸಂಖ್ಯೆ ಪ್ರಮಾಣ ಕುಸಿತವಾಗಲಿದೆ ಎಂದು ವರದಿ ಅಂದಾಜಿಸಿದೆ. ಇಟಲಿ, ಜಪಾನ್‌, ರಷ್ಯಾ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಜನಸಂಖ್ಯೆ ಉಚ್ಛಾ†ಯ ಸ್ಥಿತಿಗೆ ತಲುಪಿದೆ ಎಂದು ವರದಿ ಹೇಳಿದೆ. ಜಾಗತಿಕ ಫ‌ಲವತ್ತತೆ ಪ್ರಮಾಣ ಈಗ ಒಬ್ಬ ಮಹಿಳೆಗೆ 2.25 ಮಕ್ಕಳು.

ವರದಿಯಲ್ಲೇನಿದೆ?
63ಕ್ಕೂ ಹೆಚ್ಚು ದೇಶಗಳಲ್ಲಿ ಜನಸಂಖ್ಯೆಯ ಗಾತ್ರ ಉಚ್ಛಾ†ಯ ಸ್ಥಿತಿ ತಲುಪಿಯಾಗಿದೆ
1990ರಲ್ಲಿ ಒಬ್ಬ ಮಹಿಳೆ 3.3 ಮಕ್ಕಳಿಗೆ ಜನ್ಮ ನೀಡುತ್ತಿದ್ದಳು. ಈಗ ಜಾಗತಿಕ ಫ‌ಲ ವತ್ತತೆ ಪ್ರಮಾಣ 2.3ಗೆ ಇಳಿಕೆಯಾಗಿದೆ
2024ರಲ್ಲಿ 18 ವರ್ಷ ತುಂಬದ ಯುವತಿ ಯರಿಂದ 47 ಲಕ್ಷ ಶಿಶುಗಳಿಗೆ ಜನ್ಮ
15 ವರ್ಷ ತುಂಬದೇ ಇರುವ ಹೆಣ್ಣುಮಕ್ಕಳು 3.40 ಲಕ್ಷ ಶಿಶುಗಳಿಗೆ
ಜನ್ಮ ನೀಡಿದ್ದಾರೆ
ಕೊರೊನಾ ಸೋಂಕಿನ ಬಳಿಕ ಜಾಗತಿಕ ಜೀವಿತಾವಧಿ ಮತ್ತೆ ಏರಿಕೆಯಾಗುತ್ತಿದೆ
2080ರ ವೇಳೆಗೆ 65 ವರ್ಷ ದಾಟಿದ ಹಿರಿಯರ ಸಂಖ್ಯೆ 18 ವರ್ಷದೊಳಗಿನ ಮಕ್ಕಳಿಗಿಂತಲೂ ಹೆಚ್ಚಾಗಲಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next