ವಾಷಿಂಗ್ಟನ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಮತ್ತು 35ಎ ಅನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬೆನ್ನಲ್ಲೇ ಜಮ್ಮು-ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಪಾಕಿಸ್ತಾನ ವಿಶ್ವಸಂಸ್ಥೆಯ ಕದ ಬಡಿದಿದೆ. ಆದರೆ ಪಾಕ್ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ.
ವಿಶ್ವಸಂಸ್ಥೆ ಹೇಳಿದ್ದೇನು?
ಜಮ್ಮು-ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ 1972ರ ಶಿಮ್ಲಾ ಒಪ್ಪಂದದಂತೆ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ. ಅಲ್ಲದೇ ಎರಡೂ ದೇಶಗಳು ಗರಿಷ್ಠ ಪ್ರಮಾಣದಲ್ಲಿ ಸಂಯಮದಿಂದ ಇರಬೇಕಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗ್ಯುಟೆರಸ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತ, ಪಾಕಿಸ್ತಾನ ವಿಶ್ವಸಂಸ್ಥೆಯ ಸನ್ನದು ಪ್ರಕಾರ ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿರುವುದಾಗಿ ರಾಯಟರ್ಸ್ ವರದಿ ವಿವರಿಸಿದೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ವಕ್ತಾರ ನೀಡಿರುವ ಪ್ರಕಟಣೆಯಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ 1972ರ ಒಪ್ಪಂದದ ಮೇರೆಗೆ ದ್ವಿಪಕ್ಷೀಯ ಸಂಬಂಧವಿದೆ. ಇದನ್ನೇ ಶಿಮ್ಲಾ ಒಪ್ಪಂದ ಎಂದು ಕರೆಯುತ್ತೇವೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಶಾಂತಿಯುತವಾಗಿಯೇ ವಿಶ್ವಸಂಸ್ಥೆ ಸನ್ನದು ಪ್ರಕಾರವೇ ಇತ್ಯರ್ಥಗೊಳ್ಳಬೇಕಿದೆ ಎಂದು ತಿಳಿಸಿದೆ.
ಏನಿದು ಶಿಮ್ಲಾ ಒಪ್ಪಂದ?
1972ರ ಜುಲೈ 2ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಶಿಮ್ಲಾ ಒಪ್ಪಂದ ನಡೆದಿತ್ತು. ಅಂದು ಭಾರತದ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಝುಲ್ಫಿಕರ್ ಅಲಿ ಭುಟ್ಟೋ ಶಿಮ್ಲಾ ಒಪ್ಪಂದಕ್ಕೆ ಸಹಿಹಾಕಿದ್ದರು.
1971ರಲ್ಲಿ ಸ್ವತಂತ್ರ ಬಾಂಗ್ಲಾಕ್ಕಾಗಿ ನಡೆದ ಯುದ್ಧದಲ್ಲಿ ಭಾರತ ಕೂಡಾ ನೆರವು ನೀಡಿದ್ದು, ಇದರ ಪರಿಣಾಮ ಬಾಂಗ್ಲಾ ಸ್ವತಂತ್ರಗೊಂಡಿತ್ತು. ಈ ಯುದ್ಧ ಇಂಡೋ-ಪಾಕ್ ಯುದ್ಧಕ್ಕೂ ನಾಂದಿ ಹಾಡಿತ್ತು. ಇದಕ್ಕೂ ಮುನ್ನ ಬಾಂಗ್ಲಾವನ್ನು ಪೂರ್ವ ಪಾಕಿಸ್ತಾನ ಎಂದೇ ಪರಿಗಣಿಸಲಾಗಿತ್ತು. ತರುವಾಯ 1972ರಲ್ಲಿ ವಿಶ್ವಸಂಸ್ಥೆಯಲ್ಲಿ ಶಿಮ್ಲಾ ಒಪ್ಪಂದ ನಡೆದಿತ್ತು.
ಈ ಒಪ್ಪಂದದ ಪ್ರಕಾರ, ಬಾಂಗ್ಲಾದೇಶಕ್ಕೆ ಮಾನ್ಯತೆ, ಜಮ್ಮು-ಕಾಶ್ಮೀರದ ವಿಚಾರದಲ್ಲಿ ವಿಶ್ವಸಂಸ್ಥೆ(ಮೂರನೇಯವರು) ಮಧ್ಯಪ್ರವೇಶಿಸುವಂತಿಲ್ಲ ಮತ್ತು ಕದನ ವಿರಾಮದ ಗಡಿರೇಖೆಯನ್ನು ಎಲ್ ಒಸಿಯಾಗಿ ಪರಿವರ್ತಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಈ ಒಪ್ಪಂದವನ್ನು ಇಂದಿರಾಗಾಂಧಿ, ಭುಟ್ಟೋ ಒಪ್ಪಿಕೊಂಡಿದ್ದರು.
ಶಿಮ್ಲಾ ಒಪ್ಪಂದದ ಪ್ರಕಾರ ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ 1972ರ ಶಿಮ್ಲಾ ಒಪ್ಪಂದದ ಪ್ರಕಾರವೇ ಭಾರತ ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಲು ಹಲವು ಬಾರಿ ಪ್ರಯತ್ನಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.