Advertisement

ಸಿರುಗುಪ್ಪದ ರಾರಾವಿಯಲ್ಲಿ ವಿಶಿಷ್ಟ ಹೋಳಿ ಆಚರಣೆ

07:19 PM Mar 28, 2021 | Team Udayavani |

ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಹೋಳಿ ಹುಣ್ಣಿಮೆ ಅಂಗವಾಗಿ ಕಾಮನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

Advertisement

ಹೋಳಿ ಹುಣ್ಣಿಮೆಗೆ ಒಂದು ದಿನ ಮುಂಚಿತವಾಗಿ ಕಬ್ಬಿನ ಜಲ್ಲೆ ಹಿಡಿದ ಯುವಕರು ಗ್ರಾಮದ ತುಂಬೆಲ್ಲ ಸುತ್ತಾಡಿ ಕಾಮನ ಹಬ್ಬದ ಆಗಮನದ ಸಂಕೇತ ನೀಡುತ್ತಾರೆ. ನಂತರ ಗ್ರಾಮದ ಹಿರಿಯರೆಲ್ಲರೂ ಸೇರಿ ಗ್ರಾಮದಲ್ಲಿರುವ ಉರವಕೊಂಡ ಮಠದಲ್ಲಿ ರತಿ ಮನ್ಮಥ ವಿಗ್ರಹವನ್ನು ಕೂಡಿಸಿ ಪೂಜೆ ಸಲ್ಲಿಸಿದರು.

ಗ್ರಾಮದ ಅಗಸೆಯಲ್ಲಿರುವ ಉದ್ಭವ ಲಿಂಗವಿರುವ ಸ್ಥಳದಲ್ಲಿ ಪೂಜೆ ಸಲ್ಲಿಸಿ ಮಣ್ಣನ್ನು ತೆಗೆದು ಉದ್ಭವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಗ್ರಾಮದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಗ್ರಾಮದ ಯುವಕರು ಕೊಡೆಗಳನ್ನು ಹಿಡಿದು ಕಾಲಿಗೆ ಗೆಜ್ಜೆಕಟ್ಟಿಕೊಂಡು ವಿವಿಧ ಜನಪದ ಗೀತೆಗಳನ್ನು ಹಾಡುತ್ತ ಸಾಗುವ ಹೆಜ್ಜೆಕುಣಿತ ನೋಡಲು ವಿಶೇಷವಾಗಿರುತ್ತದೆ.

ವಿವಿಧ ಜಾನಪದ ಸಂಪ್ರದಾಯಗಳಲ್ಲಿ ಕಂಡುಬರುವ ಅಲೆಮಾರಿ ಭಿûಾಟನೆ ನಡೆಸುವ ಜನರ ಮಾದರಿಯಲ್ಲಿ ಯುವಕರು ಬುಡಬುಡಕೆ, ವೇಷಗಾರರು, ಕಳ್ಳ ಪೊಲೀಸ್‌ ವೇಷ, ದಾಸರ ವೇಷ, ಮುಳ್ಳಾವಿಗೆ ಅಯ್ಯನವರ ವೇಷ, ಜೊಗಮ್ಮನವರ ವೇಷ, ಕಾಡುಪಾಪರ ವೇಷ, ಮೊಂಡರ ವೇಷ, ಬುಡ್ಗ ಜಂಗಮರ ವೇಷ, ಕೊಡೆಕಲ್ಲು ಬಸವಣ್ಣನವರ ವೇಷ ಸೇರಿದಂತೆ ವಿವಿಧ ವೇಷಗಳನ್ನು ತೊಟ್ಟು ಮನೆ ಮನೆಗೆ ತೆರಳಿ ದವಸ ಧಾನ್ಯ, ಕಾಣಿಕೆಗಳನ್ನು ಸಂಗ್ರಹಿಸುತ್ತಾರೆ. ಕಾಮಣ್ಣನನ್ನು ದಹಿಸಿದ ಮೂರನೇ ದಿನ ಪ್ರಸಾದ ಮಾಡಿ ಗ್ರಾಮಸ್ಥರಿಗೆ ಹಂಚುತ್ತಾರೆ.

ಗ್ರಾಮದ ಯುವಕರು ಮದ್ಯಾಹ್ನ ಸಮೀಪಿಸುತ್ತಿದ್ದಂತೆ ಮಹಿಳೆಯರ ವೇಷತೊಟ್ಟು ಹೆಂಗಳೆಯರನ್ನು ನಾಚಿಸುವಂತೆ ರಸ್ತೆಯಲ್ಲಿ ತಿರುಗಾಡುತ್ತ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಕಾಮಣ್ಣನ ಮಕ್ಕಳು ಕಳ್ಳಸುಳ್ಳ ಮಕ್ಕಳು ಎನ್ನುತ್ತ ಅವಾಚ್ಯ ಶಬ್ದಗಳಿಂದ ಬೈಯುತ್ತ ಮಠದಲ್ಲಿನ ರತಿ ಮನ್ಮಥರ ದರ್ಶನ ಮಾಡಿಕೊಂಡು ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ.

Advertisement

ರಾತ್ರಿ ಕಾಮನ ದಹನ ಸಮೀಪಿಸುವ ವೇಳೆಗೆ ರತಿ ವೇಷ ತೊಟ್ಟ ಯುವಕನನ್ನು ಮನ್ಮಥನ ಮೂರ್ತಿಯೊಂದಿಗೆ ಕೂಡಿಸಿ ಗ್ರಾಮಸ್ಥರು ಎರಡು ಗುಂಪುಗಳಾಗಿ ಮೇಲ್ಗಡೆಯವರು ಹಾಗೂ ಕೆಳಗಿನ ಭಾಗದವರು ಎಂದು ವಿಭಾಗಿಸಿಕೊಂಡು ರತಿ ವೇಷವನ್ನು ತೊಟ್ಟ ಯುವಕ ಮನ್ಮಥನ ಅಗಲಿಕೆಯನ್ನು ಸಹಿಸದೇ ವಿರಹದಿಂದ ದುಃಖಭರಿತರಾಗಿ ಎದೆ ಬಿರಿಯುವಂತೆ ಶೋಕದ ಹಾಡುಗಳನ್ನು ಹಾಡುತ್ತಾ ಹೋಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

-ಆರ್‌. ಬಸವರೆಡ್ಡಿ ಕರೂರು

 

Advertisement

Udayavani is now on Telegram. Click here to join our channel and stay updated with the latest news.

Next