Advertisement
ನಡುಮನೆ ಯಕ್ಷ ಗಾಯನ ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಈ ನಡುಮನೆ ಯಕ್ಷಗಾನ ತಂಡದ ಸಾರಥಿ. ಅವರು ಕಳೆದ 7 ವರ್ಷಗಳಿಂದ ನಗರ ಯಕ್ಷ ಬಳಗದ ಮೂಲಕ ಯಕ್ಷಗಾನ ಕಲೆಯನ್ನು ಪಸರಿಸುತ್ತ ಇದೀಗ 755 ಪ್ರಯೋಗಗಳನ್ನು ಪ್ರದರ್ಶಿಸಿದ್ದಾರೆ. ಪ್ರಪ್ರಥಮವಾಗಿ ಮಂದಾರ್ತಿ ದೇಗುಲದಲ್ಲಿ ಚಾಲನೆಗೊಂಡು ಆರಂಭದ ವರ್ಷದಲ್ಲಿ “ನಡುಮನೆ ಯಕ್ಷ ಗಾಯನ’ ಹೆಸರಿನಡಿ ದಿನವೊಂದಕ್ಕೆ ಹಲವಾರು ಮನೆಗಳಿಗೆ ತೆರಳಿ ದೇವರ ಕೋಣೆಯಲ್ಲಿ ಪ್ರಾರ್ಥನೆ ಮಾಡಿ ಅನಂತರ ರಾಮಾಯಣ, ಮಹಾಭಾರತದ ಆಯ್ದ ಪದ್ಯಗಳನ್ನು ಹಾಡಿ ರಂಜಿಸುತ್ತಿದ್ದರು.ಇದು ಕೇವಲ ಒಂದು ವಾರ ಮಾತ್ರ ನಡೆಯಿತು. ಛಲ ಬಿಡದ ಅವರು ದಿನಕ್ಕೊಂದು ಕಾರ್ಯಕ್ರಮದಂತೆ 3 ವರ್ಷಗಳ ಕಾಲ ಮಳೆಗಾಲದಲ್ಲಿ 350 ಪ್ರಯೋಗಗಳನ್ನು ನಡೆಸಿದರು.
351ನೇ ಪ್ರಯೋಗದಲ್ಲಿ ನಾಟ್ಯವನ್ನು ಸೇರ್ಪಡೆಗೊಳಿಸಿ “ಯಕ್ಷ ನಾಟ್ಯ ಗಾಯನ’ವಾಗಿ ಮಾರ್ಪಟ್ಟಿತು. 2 ವರ್ಷಗಳ ಕಾಲ ಯಕ್ಷಗಾನ ನಾಟ್ಯ ನಾಡಿನೆಲ್ಲೆಡೆ ಪ್ರದರ್ಶಿಸಿಸಲ್ಪಟ್ಟು, ಯಶಸ್ಸಿನತ್ತ ಸಾಗಿತು. ಅನಂತರ 6ನೇ ವರ್ಷದಲ್ಲಿ ಪ್ರೇಕ್ಷಕರ ಬೇಡಿಕೆಗನುಸಾರ ಯಕ್ಷ ನಾಟ್ಯ, ಗಾಯನದೊಂದಿಗೆ ಹಾಸ್ಯವನ್ನು ಅಳವಡಿಸಿಕೊಂಡು ಇದೀಗ “ಕಾಲಮಿತಿ ಹಾಸ್ಯ ಪ್ರಧಾನ ನಡುಮನೆ ಯಕ್ಷಗಾನ’ವಾಗಿ ಏಳನೇ ವರ್ಷದಲ್ಲಿ ಮುಂದುವರೆಯುತ್ತಿದೆ. ಪ್ರಸಿದ್ಧ ಕಲಾವಿದರ ಸಮ್ಮಿಲನ ಭಾಗವತಿಕೆಯಲ್ಲಿ ತಂಡದ ಮುಖಂಡ ಸುಬ್ರಹ್ಮಣ್ಯ ಆಚಾರ್ ಸೇರಿದಂತೆ ಇನ್ನಿತರ ಪ್ರಸಿದ್ಧ ಭಾಗವತರು, ಮದ್ದಳೆಯಲ್ಲಿ ಕೆ.ಜೆ. ಸುಧೀಂದ್ರ, ಕೆ.ಜೆ. ಕೃಷ್ಣ, ಚಂಡೆಯಲ್ಲಿ ರಾಮಕೃಷ್ಣ ಮಂದಾರ್ತಿ, ಎನ್.ಜಿ. ಹೆಗಡೆ ಸೇರಿದಂತೆ ಪ್ರಸಿದ್ಧ ಹಿಮ್ಮೇಳ ವಾದಕರು ಸಹಕಾರ
ನೀಡುತ್ತಿದ್ದಾರೆ. ಮುಮ್ಮೇಳದಲ್ಲಿ ನಾಟ್ಯ ವಿಭಾಗದ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ಸಂತೋಷ್ ಕುಲಶೇಖರ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುರುಷ ವೇಷಧಾರಿಯಾಗಿ ಆರಂಭದಲ್ಲಿ ತೀರ್ಥಹಳ್ಳಿ ಗೋಪಾಲ್ ಆಚಾರ್, ಅನಂತರ ಬಾಲಕೃಷ್ಣ ನಾಯಕ್ ಪೇತ್ರಿ ಹೀಗೆ ಹೆಸರಾಂತ ಕಲಾವಿದರು, ಹಾಸ್ಯಗಾರರಾಗಿ ಕಡಬ ಪೂವಪ್ಪ ಭಾಗವಹಿಸುತ್ತಿದ್ದಾರೆ.
Related Articles
Advertisement
ಮಳೆಗಾಲದಲ್ಲಿ ಸಂಚಾರ ಕಾರ್ಯಕ್ರಮದ ಆರಂಭದಲ್ಲಿ ಅರ್ಧ ಗಂಟೆ ಗಾಯನ ಭಾಗವಾದರೆ, ಇನ್ನುಳಿದ ಎರಡೂವರೆ ಗಂಟೆಯಲ್ಲಿ ಅರ್ಥ ಸಹಿತ ಪ್ರಬುದ್ಧ ಯಕ್ಷಗಾನ ನಡೆಯುತ್ತದೆ. ತಂಡದಲ್ಲಿ ಒಟ್ಟು 9 ಮಂದಿ ಇದ್ದು, ಪ್ರದರ್ಶನಕ್ಕೆ ಬೇಕಾದ ಧ್ವನಿವರ್ಧಕ, ವೇಷಭೂಷಣ, ಜನರೇಟರ್, ಕುರ್ಚಿಯನ್ನು ತಂಡವೇ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೊಂಡೊಯ್ದು ಪ್ರದರ್ಶನ ನೀಡುತ್ತದೆ. ಸಂಜೆ 6ಕ್ಕೆ ಸರಿಯಾಗಿ ಚಂಡೆಯ ಅಬ್ಬರ ಹಾಕಿ ಯಕ್ಷಗಾನ ಆರಂಭವಾಗುತ್ತದೆ ಎನ್ನುವ ಸೂಚನೆ ನೀಡಲಾಗುತ್ತದೆ. ಅನಂತರ ಚೌಕಿ ಪೂಜೆ ನೆರವೇರಿಸಿ, ಯಕ್ಷಗಾನ ಪ್ರಾರಂಭಿಸಲಾಗುತ್ತದೆ.