Advertisement
ಸೇನೆಗೆ ಆಯ್ಕೆಉಪ್ಪುಂದದ ದಿ| ಪುಟ್ಟಯ್ಯ ಖಾರ್ವಿ- ಮರ್ಲಿ ಅವರ ಏಳು ಮಕ್ಕಳ ಪೈಕಿ ಗಣಪತಿ ಐದನೆಯವರು. ಮಡಿಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿ 8ನೆಯಿಂದ ದ್ವಿತೀಯ ಪಿಯುವರೆಗೆ ಉಪ್ಪುಂದ ಪಿಯು ಕಾಲೇಜಿನಲ್ಲಿ ಓದಿದರು. ಉದ್ಯೋಗಕ್ಕೆ ಸೇರುವ ತವಕದಲ್ಲಿದ್ದರೂ ಸೇನೆ ಮೊದಲ ಆದ್ಯತೆ ಯಾಗಿತ್ತು. ಹಾಗಾಗಿ ಮೀಸಲು ಪೊಲೀಸ್ ಪಡೆಗೆ ಆಯ್ಕೆ ಪತ್ರ ಬಂದಾಗಲೂ ನಿರಾಕರಿಸಿ ಸೇನೆಗೆ ಸೇರುವತ್ತಲೇ ಪರಿಶ್ರಮ ಪಡುತ್ತಿದ್ದರು. ದೇಹದಂಡನೆ ಮೂಲಕ ಕಠಿನ ಶ್ರಮಪಟ್ಟ ಕಾರಣ ಕಾರವಾರದಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಮೊದಲ ಸುತ್ತಿನಲ್ಲೇ ಆಯ್ಕೆಯಾದರು. ಮೂರು ತಿಂಗಳ ಅನಂತರ ಮಂಗಳೂರಿನಲ್ಲಿ ಲಿಖೀತ ಪರೀಕ್ಷೆ ಬರೆದರು. ಗಣಪತ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ದವರು ಪ್ರಾಂಶುಪಾಲ ಯು. ಸೀತಾರಾಮ ಮಯ್ಯ ಅವರು.
ಮರೆಯಲಾಗದ ಅನುಭವ
ಸೇನಾ ಕರ್ತವ್ಯ ನಿರ್ವಹಣೆಯ ಕೆಲವು ಮರೆಯಲಾಗದ ಅನುಭವಗಳನ್ನು ಗಣಪತಿ ಸ್ಮರಿಸಿಕೊಳ್ಳುತ್ತಾರೆ: ನಾವು ಅಮರನಾಥ ಯಾತ್ರಿಗಳ ರಕ್ಷಣೆಯ ಕರ್ತವ್ಯದಲ್ಲಿದ್ದೆವು. ಅಲ್ಲಿ ಹಗಲೂ ರಾತ್ರಿಯೂ ಚಳಿಯೇ. ಅದೊಂದು ದಿನ ಮುಂಜಾನೆ 5.30ರ ಹೊತ್ತಿಗೆ ರಾಮಬನ್‌ನಿಂದ ಬನಿಯಾಲ್ ನಡುವಿನ ಕಡಿದಾದ ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಸಣ್ಣ ಬೆಳಕೊಂದು ಕಾಣಿಸಿತು. ಕಾರ್ಗತ್ತಲಿನಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಸರಿಸುಮಾರು 350 ಅಡಿ ಆಳದ ಪ್ರಪಾತದಲ್ಲಿ ವಾಹನ ಬಿದ್ದಿರುವುದು ಕಾಣಿಸಿತು. ಅಡ್ವೆಂಚರ್ ಕೋರ್ಸ್‌ನಲ್ಲಿ ಕಲಿತಿದ್ದಂತೆ ಹಗ್ಗ ಇಳಿಬಿಟ್ಟು ಕಡಿದಾದ ಕಣಿವೆಯಲ್ಲಿ ಒಬ್ಬೊಬ್ಬರಾಗಿ ಇಳಿದೆವು. ತುಸು ಜಾರಿದರೆ ನಾವೂ ಕೆಳಬಿದ್ದು ಮಟಾಮಾಯವಾಗಬಹುದಾದ ಅಪಾಯವಿತ್ತು. ಇಳಿದು ನೋಡಿದಾಗ ಯಾತ್ರಿಗಳ ಟಾಟಾ ಸುಮೋ ವಾಹನ ಅಲ್ಲಿ ಬಿದ್ದಿತ್ತು. ಏಳು ಮಂದಿ ಪ್ರಯಾಣಿಕರಿದ್ದರು. ನಾಲ್ವರು ಅದಾಗಲೇ ಮೃತಪಟ್ಟಿದ್ದರು. ಮೂವರನ್ನು ಸುರಕ್ಷಿತವಾಗಿ ಮೇಲೆತ್ತಿ ತಂದೆವು. ಕಮಾಂಡರ್ ನಮ್ಮ ಈ ಕಾರ್ಯಾಚರಣೆಯನ್ನು ಮೆಚ್ಚಿ ಪ್ರಶಸ್ತಿ ನೀಡಿದರು. ಸೇನಾ ಸಮವಸ್ತ್ರ ಧರಿಸಿ ರಕ್ಷಣಾ ಕಾರ್ಯದಲ್ಲಿಯೂ ಭಾಗಿಯಾಗಬೇಕಾದುದರ ಮಹತ್ವ ಅಂದು ಅಕ್ಷರಃ ಅರಿವಾಗಿತ್ತು ಎನ್ನುತ್ತಾರೆ ಗಣಪತಿ ಕೆ. ಉಪ್ಪುಂದ. ಅವರೀಗ ಭಾರತೀಯ ಭೂಸೇನೆಯಲ್ಲಿ ನಾಯಕ್ ದರ್ಜೆಯಲ್ಲಿದ್ದಾರೆ.
ಗಣಪತಿ 2008ರಿಂದ ನಾಲ್ಕು ವರ್ಷ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಲಾಲ್‌ಚೌಕ್ ಕಾರ್ಯಾಚರಣೆ ಯಲ್ಲಿ ಇಬ್ಬರು ಉಗ್ರರನ್ನು ಜೀವಂತ ಸೆರೆ ಹಿಡಿದ ತಂಡ ದಲ್ಲಿದ್ದರು. ಆಗ ನಮ್ಮವರಿಬ್ಬರು ಹತರಾಗಿದ್ದರು ಎಂದು ನೆನಪಿಸಿ ಕೊಳ್ಳುತ್ತಾರೆ. ಅಲ್ಲಿನ ಅನಂತನಾಗ್, ಪೆಂಟಾಚೌಕ್, ಪಂಪೋರ್, ರಮ್ಯಾಗ್ರೌಂಡ್ ಮೊದಲಾದೆಡೆ ನಡೆದ ಉಗ್ರರ ಜತೆಗಿನ ನೇರ ಹಣಾಹಣಿಗಳಲ್ಲಿ ಅವರು ಕಾಶ್ಮೀರದಲ್ಲಿ -15 ಡಿಗ್ರಿ ಸೆಲ್ಸಿಯಸ್‌ನಲ್ಲೂ ನಮ್ಮನ್ನು ಎಚ್ಚರದಲ್ಲಿ ಇರಿಸುವುದು ಉಗ್ರದಾಳಿಯ ಸಂಭವನೀಯತೆ. ಅಲ್ಲಿ ಒಂದು ದಿನ ಕಳೆಯುವುದು ಒಂದು ವರ್ಷ ಕಳೆದುದಕ್ಕೆ ಸಮ. ಆಗಾಗ ಮನೆ ನೆನಪು ಕಾಡುತ್ತದೆ. ರಜೆಯಲ್ಲಿ ಊರಿಗೆ ಬಂದು ಮರಳುವಾಗ ಅತ್ತದ್ದಿದೆ. ಕಾಶ್ಮೀರದಲ್ಲಿ ನಡೆದ ಹಿಮಕುಸಿತ ದಲ್ಲಿ ಕಾಲಿಗೆ ಏಟು ಮಾಡಿಕೊಂಡದ್ದಿದೆ. ಆದರೆ ಎಲ್ಲ ನೋವುಗಳನ್ನೂ ಸೇನಾ ಸಮವಸ್ತ್ರ ಮರೆಯಿಸಿ ಬಿಡುತ್ತದೆ ಎನ್ನುತ್ತಾರೆ ಗಣಪತಿ.
2003ರಲ್ಲಿ ಸೇನೆಗೆ ಸೇರ್ಪಡೆ
ನಾಸಿಕ್‌ನಲ್ಲಿ ತರಬೇತಿ. ಅನಂತರ ಪಂಜಾಬ್‌ನ ಪಠಾಣ್‌ಕೋಟ್, ಜಾಮ್‌ನಗರ, 2008ರಿಂದ ಕಾಶ್ಮೀರ, ಈಗ ಒಂದೂವರೆ ವರ್ಷದಿಂದ ಪಂಜಾಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಶಾಂತಾ ಗೃಹಿಣಿ, ಪುತ್ರಿ ಪುಟಾಣಿ ರಿಧಿಶ್ರೀ. ಒಂದೇ ತಟ್ಟೆಯಲ್ಲಿ 10 ಮಂದಿ ಊಟ ಮಾಡುವ ನಮಗೆ ರಾಜ್ಯ, ಭಾಷೆ, ಜಾತಿಯ ಹಂಗಿಲ್ಲ. ನಾವೆಲ್ಲ ಭಾರತೀಯರು. ಎಲ್ಲರಲ್ಲಿ ಹರಿಯುವುದೂ ಭಾರತೀಯ ರಕ್ತ. ಆದರೆ ಶತ್ರುವನ್ನು ಶತ್ರುವಾಗಿಯೇ ನೋಡುತ್ತೇವೆ. ನಮ್ಮವರನ್ನು ಪ್ರಾಣ ಕೊಟ್ಟಾದರೂ ರಕ್ಷಿಸುತ್ತೇವೆ. ಅಂತಹ ದೇಶಭಕ್ತಿಯನ್ನು ತರಬೇತಿ ವೇಳೆ ತುಂಬುತ್ತಾರೆ. ಸಾಕಷ್ಟು ಯುವಕರು ಸೇನೆಗೆ ಸೇರಬೇಕೆಂಬುದು ನನ್ನ ಆಸೆಯಾಗಿದೆ.
– ಗಣಪತಿ ಕೆ. ಉಪ್ಪುಂದ
Related Articles
Advertisement