ಜಮ್ಮು:ಅಕ್ಟೋಬರ್ 31ರಿಂದ ಜಮ್ಮು -ಕಾಶ್ಮೀರ ಮತ್ತು ಲಡಾಖ್ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಗಳಾಗಿ ರೂಪುಗೊಳ್ಳಲಿದ್ದು, ಈ ಎರಡಕ್ಕೂ ಒಂದೇ ಹೈಕೋರ್ಟ್ ಇರಲಿದೆ ಎಂದು ರಾಜ್ಯ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕ ರಾಜೀವ್ ಗುಪ್ತಾ ತಿಳಿಸಿದ್ದಾರೆ. ಅಲ್ಲದೆ, 108 ಕೇಂದ್ರ ಕಾನೂನುಗಳು ಈ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿವೆ. 164 ರಾಜ್ಯ ಕಾನೂನುಗಳನ್ನು ರದ್ದು ಮಾಡಲಾಗುತ್ತದೆ ಮತ್ತು ರಾಜ್ಯದ 166 ಕಾನೂನುಗಳು ಈಗಿರುವಂತೆಯೇ ಮುಂದುವರಿಯಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಂದೇ ಹೈಕೋರ್ಟ್ ಇರಲಿದ್ದು, ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಲು ಈಗಿರುವ ಕಾನೂನು ಮತ್ತು ಪ್ರಕ್ರಿಯೆಗಳೇ ಮುಂದುವರಿಯಲಿದೆ ಎಂದೂ ರಾಜೀವ್ ಗುಪ್ತಾ ಹೇಳಿದ್ದಾರೆ. ಕೇಂದ್ರ ಸರಕಾರವು ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿತ್ತು. ಆ.9ರಂದು ರಾಷ್ಟ್ರಪತಿ ಕೋವಿಂದ್ ಅವರು ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಕಾಯ್ದೆ 2019ಕ್ಕೆ ಅಂಕಿತ ಹಾಕಿದ್ದರು.