ಪಣಂಬೂರು: ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ(ಕೆಐಒಸಿಎಲ್)ಗೆ ಒಡಿಶಾ ಮತ್ತು ವಿದೇಶದಿಂದ ಆಮದಾಗುವ ಅದಿರು ಒದಗಿಸಿ ಉತ್ಪಾದನೆ ಮುಂದುವರಿಸ ಲಾಗುವುದು. ಜತೆಗೆ ಹೊಸ ಪರ್ಯಾಯ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರದ ಉಕ್ಕು ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಹೇಳಿದರು.
ಕೆಐಒಸಿಎಲ್‌ನ ನೂತನ ಯೋಜನೆಯಾದ ಕಲ್ಲಿದ್ದಲು ಸ್ಥಾವರ ಘಟಕವು ಕೂಳೂರಿನ ಬ್ಲಾಸ್ಟ್ ಫರ್ನೇಸ್ ಘಟಕದ ಬಳಿ ನಿರ್ಮಾಣ ವಾಗಲಿದ್ದು, ರವಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕುದುರೆಮುಖದಲ್ಲಿ ಅದಿರು ತೆಗೆಯುವ ಕಾರ್ಯ ಸ್ಥಗಿತವಾದ ಕೂಡಲೇ ಕಂಪೆನಿಯ ಅಸ್ತಿತ್ವಕ್ಕೆ ಆತಂಕವಿಲ್ಲ. ಅದಿರು ಒದಗಿಸಲು ಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಜತೆಗೆ ಪರ್ಯಾಯ ಅವಕಾಶಗಳನ್ನು ಬಳಸಿಕೊಂಡು ಕಂಪೆನಿ ಮುಂದುವರಿಯಲಿದೆ. ನೂತನ ಕಲ್ಲಿದ್ದಲು ಸ್ಥಾವರ ನಿರ್ಮಾಣವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ದೇಶದ ಪ್ರಧಾನಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ನಿರ್ಮಾಣದ ಗುರಿಯನ್ನು ನೀಡಿದ್ದು, ಕೆಐಒಸಿಎಲ್‌ನಂತಹ ಉನ್ನತ ಕಂಪೆನಿಗಳು ಶತ ಪ್ರತಿಶತ ಪರಿಶ್ರಮದ ಮೂಲಕ ಈ ಗುರಿಯನ್ನು ಸಾಧಿಸಲು ಕೈಜೋಡಿಸಬೇಕು ಎಂದರು. ಕೆಐಒಸಿಎಲ್‌ನ ಬದ್ಧತೆ ಮತ್ತು ಅಭಿವೃದ್ಧಿಯ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಐರನ್ ಸ್ಪನ್ ಪೈಪ್ ಪ್ಲಾಂಟ್ ಮತ್ತು ಕಲ್ಲಿದ್ದಲು ಸ್ಥಾವರವನ್ನು ಹಿಂದುಳಿದ ಏಕೀಕರಣ ಯೋಜನೆಗಳ ಅಡಿಯಲ್ಲಿ 836.90 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಉಕ್ಕು ಸಚಿವಾಲಯದ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ ಕಂಪೆನಿಯು ಉದ್ಯಮದಲ್ಲಿ ತನ್ನ ಪ್ರಮುಖ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ತನ್ನ ಹಿಂದಿನ ಹೊಳಪು ಮತ್ತು ವೈಭವವನ್ನು ಮರಳಿ ಪಡೆಯಲು ಸಿದ್ಧವಾಗಿದೆ ಎಂದು ಕೆಐಒಸಿಎಲ್ ಆಡಳಿತ ನಿರ್ದೇಶಕ ಟಿ. ಸಾಮಿನಾಥನ್ ಹೇಳಿದರು.
ಕೇಂದ್ರ ಉಕ್ಕು ಸಚಿವಾಲಯದ ಜತೆ ಕಾರ್ಯದರ್ಶಿ ಟಿ. ಶ್ರೀನಿವಾಸ್, ಹಣಕಾಸು ವಿಭಾಗದ ನಿರ್ದೇಶಕ ಎಸ್.ಕೆ. ಗೊರೈ, ಉತ್ಪಾದನೆ ಮತ್ತು ಯೋಜನ ವಿಭಾಗದ ನಿರ್ದೇಶಕ ಕೆ.ವಿ. ಭಾಸ್ಕರ ರೆಡ್ಡಿ, ಕೆಐಒಸಿಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಂಇಐಎಲ್‌ಗೆ ಸಿವಿಲ್
ನಿರ್ಮಾಣ ಹೊಣೆ
ಕೆಐಒಸಿಎಲ್‌ನ ಈ ನೂತನ ಸ್ಥಾವರದ ಸಿವಿಲ್ ಎಂಜಿನಿಯರಿಂಗ್ ನಿರ್ಮಾಣ ಯೋಜನೆಯನ್ನು ಮಣಿಪಾಲ್ ಎನರ್ಜಿ ಆ್ಯಂಡ್ ಇನ್‌ಫ್ರಾಟೆಕ್ ಲಿ. (ಎಂಇಐಎಲ್) ಕೈಗೆತ್ತಿಕೊಳ್ಳಲಿದ್ದು, ಎಂಜಿನಿಯರಿಂಗ್, ಪ್ರೊಕ್ಯೂರ್‌ವೆುಂಟ್ ಮತ್ತು ಕನ್‌ಸ್ಟ್ರಕ್ಷನ್ (ಇಪಿಸಿ) ಗುತ್ತಿಗೆದಾರನಾದ ತೌಮಾನ್ ಎಂಜಿನಿಯರಿಂಗ್ ಲಿ. ಈ ಉಪ ಗುತ್ತಿಗೆಯನ್ನು ಎಂಇಐಎಲ್‌ಗೆ ನೀಡಿದೆ. ಕಾರ್ಯಕ್ರಮದ ವೇಳೆ ಎಂಇಐಎಲ್ ಸಂಸ್ಥೆಯ ಹಿರಿಯ ಎಂಜಿನಿಯರ್‌ಗಳ ತಂಡ ಭಾಗವಹಿಸಿತ್ತು.