ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್)ಯಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ವಸೂಲಿ ಮಾಡಲು ಶೀಘ್ರವೇ ಕ್ರಮ ವಹಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಂಪೆನಿ 192 ಕೋಟಿ ರೂ. ಕೊಟ್ಟಿದೆಯಾದರೂ ಗಣಿ ಚಟುವಟಿಕೆಗೆ ರಾಜ್ಯ ಸರಕಾರ ಅಡ್ಡಿಪಡಿಸುತ್ತಿದ್ದು 300 ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಆದರೆ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಗಣಿ ಚಟುವಟಿಕೆ ನಡೆಸಿರುವ ಈ ಸಂಸ್ಥೆ, ಅನುಮತಿ ಇಲ್ಲದೆ ಲಕ್ಯಾ ಜಲಾಶಯ ನಿರ್ಮಿಸಿದ್ದೂ ಅಲ್ಲದೆ ಎತ್ತರಿಸುವ ಮೂಲಕ 150 ದಶಲಕ್ಷ ಟನ್ (ಶೇ.72) ಹೂಳು ತುಂಬಿಕೊಂಡಿದೆ. ಅದಿರು ಸಾಗಣೆಗೆ ದಾರಿ ಮಾಡಿಕೊಂಡಿದ್ದಾರೆ.
ಎಲ್ಲ ಸೇರಿ ಒಟ್ಟು 350 ಹಕ್ಟೇರ್ ಅರಣ್ಯ ನಾಶ ಮಾಡಿದ್ದಾರೆ. ಇದಕ್ಕೆ ಪರಿಹಾರ ಹಾಗೂ ದಂಡದ ರೂಪದಲ್ಲಿ ಅವರೇ ನಮಗೆ 1,349 ಕೋಟಿ ರೂ.ಗಳನ್ನು ಕೊಡಬೇಕಿದೆ ಎಂದು ಹೇಳಿದರು.
ಅರಣ್ಯ ನಾಶ ಸಂಬಂಧ ನೋಟಿಸ್ ಕೊಟ್ಟರೆ, ಸದ್ಯಕ್ಕೆ ನಷ್ಟದಲ್ಲಿದ್ದೇವೆ, ಗಣಿ ಚಟುವಟಿಕೆ ನಡೆಸಲು ಅನುಮತಿಸಿದರೆ ಅದರಿಂದ ಬರುವ ಆದಾಯದಲ್ಲಿ ಬಾಕಿ ಕೊಡುವುದಾಗಿ ರಾಜಿ-ಸಂಧಾನಕ್ಕೆ ಆಹ್ವಾನಿಸುತ್ತಾರೆ ಎಂದು ಹೇಳಿದರು.
ಶರಾವತಿಯಿಂದ ನೀರು ತರುವ ಯೋಜನೆ ಇರಬಹುದು, ಎತ್ತಿನಹೊಳೆ ಕಾಮಗಾರಿ ಸಂಬಂಧ ಎನ್‌ಜಿಟಿ ಕೊಟ್ಟಿರುವ ನೋಟಿಸ್‌ನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪಶ್ಚಿಮಘಟ್ಟ ಪರಿಸರ ಸೂಕ್ಷ್ಮಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿ ಸಂಬಂಧ ಅಧ್ಯಯನ ವರದಿಯನ್ನೂ ಪಡೆದುಕೊಳ್ಳುತ್ತೇವೆ.
– ಈಶ್ವರ್ ಖಂಡ್ರೆ, ಅರಣ್ಯ ಸಚಿವ