Advertisement

ರಾಜ್ಯಕ್ಕೆ ಬಂಪರ್‌: ಬಜೆಟ್‌ನಲ್ಲಿ ನೈಋತ್ಯ ರೈಲ್ವೇಗೆ 9,200 ಕೋ.ರೂ. ಅನುದಾನ

12:56 AM Feb 04, 2023 | Team Udayavani |

ಹುಬ್ಬಳ್ಳಿ/ಬೆಂಗಳೂರು: ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ರೈಲ್ವೇ ಬಜೆಟ್‌ನಲ್ಲಿ ಬಂಪರ್‌ ಅನುದಾನ ಸಿಕ್ಕಿದೆ.

Advertisement

ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2023-24ನೇ ಸಾಲಿನ ರೈಲ್ವೇ ಬಜೆಟ್‌ನಲ್ಲಿ ನೈಋತ್ಯ ರೈಲ್ವೇ ವಲಯಕ್ಕೆ 9,200 ಕೋಟಿ ರೂ. ನಿಗದಿ ಪಡಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 33.3 ಹೆಚ್ಚಳವಾಗಿದೆ. ಇದರಲ್ಲಿ ಕರ್ನಾಟಕಕ್ಕೆ 7,561 ಕೋಟಿ ರೂ. ಘೋಷಣೆ ಆಗಿದೆ.

ಶುಕ್ರವಾರ ಸಚಿವರು ಹಾಗೂ ನೈಋತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪ್ರಯಾಣಿಕರ ಅನುಕೂಲಕ್ಕೆ ಹಾಗೂ ಸೌಲಭ್ಯ ಕಲ್ಪಿಸಲು 316.9 ಕೋಟಿ ರೂ. ಮೀಸಲಿಟ್ಟಿದ್ದು, ಇದು ಶೇ. 130ರಷ್ಟು ಹೆಚ್ಚು. ಹೊಸ ಮಾರ್ಗಗಳಿಗಾಗಿ 2,423 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಜೋಡಿ ಮಾರ್ಗಕ್ಕೆ 1,529 ಕೋಟಿ ರೂ., ವಿದ್ಯುದೀಕರಣಕ್ಕೆ 793 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.

ಶ್ರೀ ವಿಶ್ವೇಶ್ವರಯ್ಯ ಟರ್ಮಿನಲ್‌ ನಿರ್ಮಾಣದ ನೀಲನಕ್ಷೆ ಸಿದ್ಧಗೊಂಡಿದ್ದು, ಇದು ಇನ್ನುಳಿದ ನಿಲ್ದಾಣಗಳಿಗೆ ಮಾದರಿಯಾಗಲಿದೆ. ಕರ್ನಾಟಕದಲ್ಲಿ ರೈಲ್ವೇ ಜೋಡು ಮಾರ್ಗ, ವಿದ್ಯುದೀಕರಣ ಕಾಮಗಾರಿ ಸೇರಿದಂತೆ ರೈಲ್ವೇ ನಿಲ್ದಾಣಗಳ ಸೌಕರ್ಯ ಉತ್ತಮ ಪ್ರಗತಿಯಲ್ಲಿದೆ. ಯೋಜನೆಗಳ ಸಾಕಾರಕ್ಕೆ ಸರಕಾರವು ಒಳ್ಳೆಯ ಸಹಕಾರ ನೀಡುತ್ತಿದೆ. ಇದರಿಂದಾಗಿ ಕಳೆದ ಏಳು ವರ್ಷಗಳಲ್ಲಿ 7-8 ಪಟ್ಟು ಅಭಿವೃದ್ಧಿಯಾಗಿದೆ. ಮುಂದಿನ 8-10 ತಿಂಗಳಲ್ಲಿ ರೈಲ್ವೇ ಮತ್ತು ನಿಲ್ದಾಣಗಳಲ್ಲಿ ಸ್ಥಳೀಯ ಆಹಾರ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು. ಹೈಡ್ರೋಜನ್‌ ರೈಲಿಗೆ ಒತ್ತು ನೀಡಲಾಗುತ್ತಿದ್ದು, 2023ರ ಡಿಸೆಂಬರ್‌ ಅಂತ್ಯಕ್ಕೆ ಮೊದಲ ಹೈಡ್ರೋಜನ್‌ ರೈಲು ತಯಾರಿಸಲಾಗುವುದು ಎಂದರು.

15 ನಿಲ್ದಾಣಗಳ ಉನ್ನತೀಕರಣ
ಅಮೃತ ಭಾರತ ನಿಲ್ದಾಣಗಳ ಯೋಜನೆಯಡಿ 49,536 ಕೋಟಿ ರೂ. ವೆಚ್ಚದಲ್ಲಿ ಒಟ್ಟು 55 ರೈಲು ನಿಲ್ದಾಣಗಳನ್ನು ಉನ್ನತೀಕರಿಸಲಾಗುತ್ತಿದ್ದು, ಇದರಲ್ಲಿ ಹುಬ್ಬಳ್ಳಿ ವಿಭಾಗದ 15 ನಿಲ್ದಾಣಗಳು ಸೇರಿವೆ ಎಂದರು.

Advertisement

ಹುಬ್ಬಳ್ಳಿ, ಮೈಸೂರು ಮತ್ತು ವಾಸ್ಕೋ ಡಿ ಗಾಮಾ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದೆ. ಇವುಗಳ ಕಾಮಗಾರಿಗಳನ್ನು ಈ ವರ್ಷವೇ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಪ್ರತೀ ನಿಲ್ದಾಣಗಳ ಉನ್ನತೀಕರಣಕ್ಕೆ 300 ಕೋಟಿ ರೂ. ಹಾಗೂ ಸೌಲಭ್ಯ ಕಲ್ಪಿಸಲು 20 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ.

ಹುಬ್ಬಳ್ಳಿ-ಬೆಂಗಳೂರು ಜೋಡು ಮಾರ್ಗ ಫೆಬ್ರವರಿ ಅಂತ್ಯದೊಳಗೆ ಹಾಗೂ ವಿದ್ಯುದೀ ಕರಣವನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣ ಗೊಳಿಸುವ ಗುರಿ ಇದೆ ಎಂದರು. ಹಾಸನ – ಮಂಗಳೂರು ನಡುವೆ 134 ಕಿ.ಮೀ. ಮಾರ್ಗವನ್ನು ವಿದ್ಯುದೀಕರಣ ಮಾಡಲಾಗುವುದು ಎಂದರು.

ಶೀಘ್ರ ವಂದೇ ಭಾರತ ರೈಲು ಆರಂಭ
ಗತಿಶಕ್ತಿ ಯೋಜನೆಯಡಿ ವಂದೇ ಭಾರತ ರೈಲನ್ನು ಬೆಂಗಳೂರು-ಹುಬ್ಬಳ್ಳಿ ನಡುವೆ ಓಡಿಸಲಾಗುವುದು. ಅದಕ್ಕಾಗಿ ಮಾ. 31ರ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಹುಬ್ಬಳ್ಳಿ-ಅಂಕೋಲಾ ಕುರಿತು ಚರ್ಚೆ
ಹುಬ್ಬಳ್ಳಿ-ಅಂಕೋಲಾ ನಡುವೆ ಹೊಸ ಮಾರ್ಗದ ತಾಂತ್ರಿಕ ಸಮಸ್ಯೆ ಬಗೆಹರಿದ ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಆರು ಹೊಸ ಮಾರ್ಗ
ಆರು ಹೊಸ ಮಾರ್ಗಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಗಳಿಗೆ ತಗಲುವ ಒಟ್ಟು  1,408 ಕೋಟಿ ರೂ.ವೆಚ್ಚದಲ್ಲಿ ಹುಬ್ಬಳ್ಳಿ ವಿಭಾಗಕ್ಕೆ 1,083 ಕೋಟಿ ರೂ. ಹಂಚಿಕೆಯಾಗಿದೆ. 50 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆಯುಳ್ಳ  ನಗರ, ಪಟ್ಟಣಗಳ ನಡುವೆ ರೈಲು ಸಂಪರ್ಕಕ್ಕಾಗಿ ಈ ವರ್ಷ ನೈಋತ್ಯ ರೈಲ್ವೇ ವಲಯಕ್ಕೆ 60 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next