ನವದೆಹಲಿ: ಪೌರತ್ವ ತಿದ್ದುಪಡಿ ವಿರೋಧಿಸಿ ನಡೆಸುವ ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಗೆಡಹುವ ಕಿಡಿಗೇಡಿಗಳನ್ನು ‘ನಾಯಿಗೆ ಹೊಡೆಯುವಂತೆ ಶೂಟ್ ಮಾಡಿ ಸಾಯಿಸಿ’ ಎಂಬ ವಿವಾದಾತ್ಮ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಲದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿರುದ್ಧ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಕಿಡಿಕಾರಿದ್ದಾರೆ.
ದಿಲೀಪ್ ದಾದಾ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ ಮತ್ತು ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುಪ್ರಿಯೋ ಅವರು ಹೇಳಿದ್ದಾರೆ.
‘ಅವರ ಈ ಹೇಳಿಕೆ ಸಂಪೂರ್ಣವಾಗಿ ಅವರದ್ದೇ ಕಲ್ಪನೆಯದ್ದಾಗಿದೆ ಮತ್ತು ಉತ್ತರಪ್ರದೇಶ ಅಥವಾ ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಾರತೀಯ ಜನತಾ ಪಕ್ಷದ ಸರಕಾರಗಳು ಯಾವುದೇ ಕಾರಣಕ್ಕೂ ಜನರ ಮೆಲೆ ಗುಂಡಿನ ದಾಳಿ ನಡೆಸಲು ಎಂದೂ ಹೇಳಿಲ್ಲ’ ಎಂದು ಸುಪ್ರಿಯೋ ಅವರು ಸ್ಪಷ್ಟನೆ ನೀಡಿದ್ದಾರೆ.
ಪೌರತ್ವ ವಿರೋಧಿ ಪ್ರತಿಭಟನೆಗಳ ನೆಪದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವವರನ್ನು ಉತ್ತರಪ್ರದೇಶದಲ್ಲಿ ಮಾಡಿದಂತೆ ಶೂಟ್ ಮಾಡಿ ಬಿಸಾಡಬೇಕು ಎಂಬರ್ಥದಲ್ಲಿ ದಿಲೀಪ್ ಘೋಷ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಡಿಸೆಂಬರ್ ತಿಂಗಳಿನಲ್ಲಿ ಉತ್ತರಪ್ರದೇಶದಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟದಲ್ಲಿ 19 ಜನರು ಮೃತಪಟ್ಟಿದ್ದರು.