ಮೇಲುಕೋಟೆ: ಬೆಂಗಳೂರು- ಮೈಸೂರು ದಶಪಥ ರಸ್ತೆ ಕಾಮಗಾರಿಯಡಿ ಪಾಂಡವಪುರ ತಾಲೂಕಿನ ತೂಬಿನಕೆರೆ ಗೇಟ್ ಬಳಿ ತಾಲೂಕಿನ ರಸ್ತೆ ಸಂಪರ್ಕಿಸಲು ಬೈಪಾಸ್ ರಸ್ತೆ ನೀಡುವುದಾಗಿ ಕೇಂದ್ರ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ ಎಂದು ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೊಂದಿಗೆ ಕೇಂದ್ರದ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿಯಾಗಿ ಬೈಪಾಸ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದರು.
ಬೆಂಗಳೂರು- ಮೈಸೂರು ಹೆದ್ದಾರಿ ಯೋಜನೆಯಲ್ಲಿ ತೂಬಿನಕೆರೆ ಗ್ರಾಮದ ಬಳಿ ಈ ಹಿಂದೆ ಇದ್ದಂತಹ ಬೈಪಾಸ್ ಯೋಜನೆಯನ್ನು ಸ್ಥಗಿತಗೊಳಿಸಿ ಗಣಂಗೂರು ಗ್ರಾಮದ ಬಳಿ ಪಾಂಡವಪುರಕ್ಕೆ ಬೈಪಾಸ್ ನೀಡಲು ಯೋಜನೆ ರೂಪಿಸಿಕೊಂಡಿದ್ದರು. ಇದರಿಂದ ಮಂಡ್ಯದಿಂದ ಪಾಂಡವಪುರಕ್ಕೆ ಸಂಪರ್ಕಿಸುವವರು ಹಾಗೂ ಪಾಂಡವಪುರದಿಂದ ಮಂಡ್ಯಕ್ಕೆ ಹೋಗುವ ಪ್ರಯಾಣಿಕರು ಸುಮಾರು ಒಂದರಿಂದ ಎರಡುಕಿಮೀ ನಷ್ಟು ಬಳಸಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ತೂಬಿನಕೆರೆ ಗ್ರಾಮದ ಬಳಿ ಬೈಪಾಸ್ ನೀಡುತ್ತಿಲ್ಲ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಶಾಸಕ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಪಾಂಡವಪುರ ತಾಲ್ಲೂಕಿನ ಜನತೆ ಹೆದ್ದಾರೆ ತಡೆದು ಪ್ರತಿಭಟನೆ ನಡೆಸಿದ್ದರು. ಜತೆಗೆ ರಸ್ತೆ ಅಭಿವೃದ್ಧಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮನವಿಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರದ ಲೋಕೋಪಯೋಗಿ ಸಚಿವರಿಗೆ ಮನವಿಸಲ್ಲಿಸಿ ತೂಬಿನಕೆರೆ ಬಳಿ ಪಾಂಡವಪುರ ತಾಲ್ಲೂಕಿಗೆ ಸಂಪರ್ಕಿಸುವ ಬೈಪಾಸ್ ಯೋಜನೆ ನಿರ್ಮಿಸುವಂತೆ ಮನವಿ ಸಲ್ಲಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ನಿಯೋಗದ ಮನವಿಗೆ ಸ್ಪಂಧಿಸಿ ಬೈಪಾಸ್ ರಸ್ತೆ ನೀಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಅವರು ತಿಳಿಸಿದ್ದಾರೆ.