Advertisement

ಗಲಭೆಗೆ ವರದಿ ಕೊಡಿ; ದೀದಿ ಸರ್ಕಾರಕ್ಕೆ ಕೇಂದ್ರ ಸರ್ಕಾರ ಫ‌ರ್ಮಾನು

08:22 PM Apr 04, 2023 | Team Udayavani |

ಕೋಲ್ಕತಾ/ಪಾಟ್ನಾ:”ರಾಮ ನವಮಿ ಸಂದರ್ಭದಲ್ಲಿ ಯಾವ ಜಿಲ್ಲೆಗಳಲ್ಲಿ ಏನು ಅಹಿತಕರ ಘಟನೆಗಳು ನಡೆದಿವೆ. ಅದಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ನಮಗೆ ಸಲ್ಲಿಸಿ’- ಹೀಗೆಂದು ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮಂಗಳವಾರ ಸೂಚನೆ ನೀಡಿದೆ.

Advertisement

ಹೂಗ್ಲಿ ಮತ್ತು ಶಿವಪುರಗಳಲ್ಲಿ ರಾಮ ನವಮಿ ಉತ್ಸವದಂದು ಅಹಿತಕರ ಘಟನೆಗಳು ನಡೆದಿದ್ದವು. ಈ ಬಗ್ಗೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದ ಬಳಿಕ ಈ ಸೂಚನೆ ರವಾನೆಯಾಗಿದೆ.

ಬಿಜೆಪಿ ಮುಖಂಡರನ್ನು ಮತ್ತು ಸಂಸದರನ್ನು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲು ರಾಜ್ಯ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಮಜುಂದಾರ್‌ ದೂರಿದ್ದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಜತೆಗೆ ಫೋನ್‌ನಲ್ಲಿ ಮಾತನಾಡಿ, ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದರು.

ರಾಜ್ಯಪಾಲರ ದೌಡು:
ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ಹಿಂಸೆಯಿಂದ ತತ್ತರಿಸಿರುವ ಹೂಗ್ಲಿ ಜಿಲ್ಲೆಯ ರಿಶ್ರಾ ಎಂಬಲ್ಲಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೂಂಡಾಗಳು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಜ್ಯದ ಜನರು ಶಾಂತಿಯುತವಾಗಿರುವ ವಾತಾವರಣದಲ್ಲಿ ಜೀವಿಸಲು ಇಚ್ಛಿಸುತ್ತಿದ್ದಾರೆ. ಅವರ ಹಕ್ಕುಗಳಿಗೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದರು.

Advertisement

ಬಿಜೆಪಿಯೇ ಕಾರಣ:
ರಾಮ ನವಮಿಯ ದಿನ ನಡೆದ ಹಿಂಸಾಕೃತ್ಯಗಳಿಗೆ ಬಿಜೆಪಿಯೇ ಕಾರಣ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಗಲಭೆಗೆ ಕಾರಣನಾದ ಯಾವುದೇ ವ್ಯಕ್ತಿಯನ್ನು ಸುಮ್ಮನೆ ಬಿಡುವುದಿಲ್ಲ, ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮಿತ್‌ ಶಾ ಹೆಸರು ಉಲ್ಲೇಖಿಸದೆ ಟೀಕಿಸಿದ ದೀದಿ “ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗಲಭೆಕೋರರನ್ನು ತಲೆಕೆಳಗಾಗಿ ನೇತು ಹಾಕುವ ಶಿಕ್ಷೆ ವಿಧಿಸುವುದಾಗಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಹಾಗಿದ್ದರೆ ಅವರ ಪಕ್ಷದ ಗೂಂಡಾಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

ಜತೆಗೆ ಮುಸ್ಲಿಂ ಸಹೋದರರನ್ನು ಹಿಂದೂಗಳು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ. ಎಡಪಕ್ಷಗಳು (ವಾಮರು) ಮತ್ತು ರಾಮರು (ಬಿಜೆಪಿ) ಈಗ ಟಿಎಂಸಿ ವಿರುದ್ಧ ಸಿಡಿದು ನಿಂತಿದ್ದಾರೆ ಎಂದು ದೂರಿದರು ದೀದಿ.

50ಕ್ಕೂ ಅಧಿಕ ಸೆರೆ:
ಹೂಗ್ಲಿ ಜಿಲ್ಲೆಯಲ್ಲಿ ನಡೆದ ಗಲಾಟೆಗಳಿಗೆ ಸಂಬಂಧಿಸಿದಂತೆ ಪೊಲೀಸರು 50ಕ್ಕೂ ಅಧಿಕ ಮಂದಿಯನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ. ಜತೆಗೆ ತನಿಖೆಯನ್ನೂ ಮುಂದುವರಿಸಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ ಬಂಗಾಳ ಪೊಲೀಸರು ಬಿಹಾರದ ಮುಂಗೇರ್‌ನಿಂದ ಯುವಕನನ್ನು ಬಂಧಿಸಿದ್ದಾರೆ. ಆತ ಹೌರಾದಲ್ಲಿ ಗಲಭೆ ನಡೆದಿದ್ದ ವೇಳೆ ಗನ್‌ ಹಿಡಿದುಕೊಂಡು ನಿಂತಿದ್ದ ವಿಡಿಯೋ ವೈರಲ್‌ ಆಗಿತ್ತು. ವಿಚಾರಣೆ ವೇಳೆ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನಿತೀಶ್‌ ಕ್ರಮಕ್ಕೆ ಬಿಜೆಪಿ ಕಟು ಟೀಕೆ
ಬಿಹಾರದ ನಲಂದಾ ಮತ್ತು ರೋಹ್‌ತಾಸ್‌ ಜಿಲ್ಲೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದರೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡದ್ದು ಸರಿಯಲ್ಲ. ಇದೇನಿದ್ದರೂ ತುಷ್ಟೀಕರಣ ರಾಜಕೀಯ ಎಂದು ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಆಕ್ಷೇಪಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಫ್ತಾರ್‌ ಕೂಟದಲ್ಲಿ ಭಾಗವಹಿಸುವ ಮೂಲಕ ಮತ ಗಳಿಕೆಗಾಗಿ ಬಿಹಾರವನ್ನು ಇಸ್ಲಾಮಿಕ್‌ ರಾಜ್ಯವನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ರೋಮ್‌ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬ ಗಾದೆ ಮಾತಿನಂತೆ 2 ಜಿಲ್ಲೆಗಳಲ್ಲಿ ಜನರು ನೊಂದಿರುವಾಗ ಸಿಎಂ ಸಂತೋಷಕೂಟದಲ್ಲಿ ಪಾಲ್ಗೊಂಡದ್ದು ಸರಿಯಲ್ಲ ಎಂದರು.

ಬಿಹಾರ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಕೇವಲ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಮತಗಳಿಕೆಯೇ ಪ್ರಧಾನವಾಗಿ ಇರುವ ಅವರ ನಿಲುವಿನಿಂದ ಅನುಕೂಲಕ್ಕಿಂತ ಹಾನಿಯೇ ಹೆಚ್ಚು. ಜತೆಗೆ ಸವಾಲುಗಳನ್ನೂ ತಂದೊಡ್ಡುತ್ತದೆ.
-ಅನುರಾಗ್‌ ಠಾಕೂರ್‌, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next