ನವದೆಹಲಿ: ಮಧ್ಯಪ್ರದೇಶದ ಭೋಪಾಲದಲ್ಲಿ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ದೇಶದಲ್ಲಿ ನಿಷೇಧಕ್ಕೆ ಒಳಗಾದ ಬಳಿಕವೂ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
1987ರಲ್ಲಿ ವೀಸಾ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಅದು ಮುಂಬೈನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಹದಿನಾಲ್ಕು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು ಎಂದು ಅಲ್-ಜಜೀರಾ ಸುದ್ದಿ ವಾಹಿನಿಗಾಗಿ “ದ ರಿಪೋರ್ಟರ್ಸ್ ಕಲೆಕ್ಟಿವ್’ (ಟಿಆರ್‌ಸಿ) ನಡೆಸಿದ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.
ಟಿಆರ್‌ಸಿಯ ದಾಖಲೆಗಳ ಪ್ರಕಾರ ಭೋಪಾಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್‌ನ ವಿರುದ್ಧ ಕ್ರಮ ಕೈಗೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗ ನಡೆಸುತ್ತಿದ್ದರೆ, ಅದು ಸಿಂಗಾಪುರ, ಅಮೆರಿಕ, ಭಾರತದಲ್ಲಿ ನಕಲಿ ಹೆಸರಿನಲ್ಲಿ ಕಂಪನಿಗಳನ್ನು ತೆರೆದಿತ್ತು ಎಂದು ಗೊತ್ತಾಗಿದೆ.
ಭೋಪಾಲದಲ್ಲಿನ ಕೋರ್ಟ್ ಆ ಸಂದರ್ಭದಲ್ಲಿ ಯುಸಿಸಿಯ ಉತ್ಪನ್ನಗಳನ್ನು ಕಾನೂನು ಬಾಹಿರ ಎಂದು ಘೋಷಿಸಿರಲಿಲ್ಲ. ಆದರೆ, ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಹಿಂದಿನ ಸಂದರ್ಭದಲ್ಲಿ ಇದ್ದ ಸರ್ಕಾರಗಳಿಗೆ ಯುಸಿಸಿ ಕಳ್ಳತನದಿಂದ ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಾ ಇದ್ದದ್ದೂ ಅರಿವಿಗೆ ಬಂದಿತ್ತು. ಜತೆಗೆ ಟೆಂಡರ್‌ನಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಖಾಸಗಿಯಾಗಿ ಮಾಹಿತಿಯನ್ನೂ ನೀಡಲಾಗಿತ್ತು ಎಂದು ಬೆಳಕಿಗೆ ಬಂದಿದೆ. ಕಂಪನಿಯದ್ದೇ ದಾಖಲೆಗಳ ಪ್ರಕಾರ 1995ರಿಂದ 2 ಸಾವಿರನೇ ಇಸ್ವಿಯ ವರೆಗೆ 55, 800 ಟನ್ ವೈರ್‌ಗಳನ್ನು ಕೇಬಲ್‌ಗಳನ್ನು ಮಾರಾಟ ಮಾಡಿತ್ತು.