ನವದೆಹಲಿ: ಪುದುಚೇರಿಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾದ ಬೆನ್ನಲ್ಲೇ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸಚಿವ ಸಂಪುಟ ಬುಧವಾರ(ಫೆ.24, 2021) ಅಂಕಿತ ಹಾಕಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ ಸ್ಪೋಟ ಪ್ರಕರಣ: ಗುಡಿಬಂಡೆ ಇನ್ಸ್ ಪೆಕ್ಟರ್ ಮತ್ತು ಪಿಎಸ್ಐ ಅಮಾನತ್ತು
ಕಾಂಗ್ರೆಸ್ ಪಕ್ಷದ ಐವರು ಶಾಸಕರು ಹಾಗೂ ಮೈತ್ರಿಪಕ್ಷವಾದ ಡಿಎಂಕೆ ಶಾಸಕರು ರಾಜೀನಾಮೆ ನೀಡಿದ ನಂತರ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತವಿಲ್ಲದೆ ಪತನಗೊಂಡಿತ್ತು. 26 ಸದಸ್ಯ ಬಲ ಹೊಂದಿದ್ದ ಪುದುಚೇರಿ ವಿಧಾನಸಭೆಯಲ್ಲಿ ಜನವರಿ ತಿಂಗಳಿನಲ್ಲಿ ಶಾಸಕರು ರಾಜೀನಾಮೆ ನೀಡುವ ಮೂಲಕ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕತೊಡಗಿತ್ತು.
ಕಾಂಗ್ರೆಸ್, ಡಿಎಂಕೆ ಮೈತ್ರಿಕೂಟದಲ್ಲಿ ಸ್ಪೀಕರ್ ಸೇರಿದಂತೆ 12 ಮಂದಿ ಶಾಸಕರಿದ್ದು, ವಿಪಕ್ಷವಾದ ಮಾಜಿ ಮುಖ್ಯಮಂತ್ರಿ ಎನ್,ರಂಗಸ್ವಾಮಿ ನೇತೃತ್ವದ ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ 14 ಸ್ಥಾನ ಹೊಂದಿತ್ತು.
ಫೆ,22ರಂದು ನಾರಾಯಣಸ್ವಾಮಿ ಸರ್ಕಾರ ಪುದುಚೇರಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನಾರಾಯಣ ಸ್ವಾಮಿ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು.
ಯಾವುದೇ ಪಕ್ಷ ಸರ್ಕಾರ ರಚಿಸಲು ಮುಂದಾಗದ ಹಿನ್ನೆಲೆಯಲ್ಲಿ ರಾಜ್ಯಪಾಲರ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಅಂಕಿತ ಹಾಕಿದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.