Advertisement
ಕೇಂದ್ರದ ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ಎಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಸಚಿವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ, ರೈಲ್ವೆ ಇಲಾಖೆಗೂ ಏನನ್ನೂ ಕೊಡಲಿಲ್ಲ. ಬಜೆಟ್ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ. ಒಟ್ಟಾರೆಯಾಗಿ ಇದು ನಿರಾಸದಾಯಕ, ಜನವಿರೋಧಿ ಬಜೆಟ್. ರೈತರು, ಬಡವರು, ಮಹಿಳೆಯರಿಗೆ ಬಹಳ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಿರ್ಮಲಾರಿಂದ ರಾಜ್ಯಕ್ಕೆ ಅನ್ಯಾಯ:
ಮೋದಿ ಪ್ರಧಾನಿಯಾಗಿ ಉಳಿಯಬೇಕಾದರೆ ಆಂಧ್ರ ಮತ್ತು ಬಿಹಾರದ ಬೆಂಬಲ ಬೇಕು. ಹೀಗಾಗಿ ಅವರಿಗೆ ವಿಶೇಷ ಅನುದಾನ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆದ್ದರಿಂದ ಕರ್ನಾಟಕದ ಪರ ಇರುತ್ತಾರೆ, ನ್ಯಾಯ ಒದಗಿಸುತ್ತಾರೆಂಬ ನಿರೀಕ್ಷೆ ಇತ್ತು. ಅದೆಲ್ಲ ನಿರಾಸೆ ಮಾಡಿ ಅನ್ಯಾಯ ಮಾಡಿದ್ದಾರೆ. ಫೆರಿಫರಲ್ ರಿಂಗ್ ರಸ್ತೆಗೆ 6 ಸಾವಿರ ಕೋಟಿ ಕೊಡ್ತೀವಿ ಅಂದಿದ್ರು ಕೊಟ್ಟಿಲ್ಲ. ಅಪ್ಪರ್ ಭದ್ರಕ್ಕೆ 5,300 ಕೋಟಿ ಕೊಡಲಿಲ್ಲ, ಕೊಡ್ತೀವಿ ಅಂದಿದ್ರು ಕೊಡಲಿಲ್ಲ. ನಗರ ವಸತಿ ಯೋಜನೆಗಳಿಗೆ 1.2 ರಿಂದ 3 ಲಕ್ಷ ಮಾಡುತ್ತೀವಿ ಅಂದ್ರು ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೋದಿ ಸರ್ಕಾರದ ಮೇಲೆ ಭರವಸೆ ಇಟ್ಟಿಕೊಳ್ಳಲು ಆಗುವುದಿಲ್ಲ. 15ನೇ ಹಣಕಾಸು ಹೇಳಿದ್ದನ್ನೇ ಕೊಟ್ಟಿಲ್ಲ. ಇವರದ್ದು ಬರೀ ನಿರೀಕ್ಷೆ ಅಷ್ಟೆ. ಭದ್ರ ಮೇಲ್ದಂಡೆ ಯೋಜನೆಗೆ ಟೆಕ್ನಿಕಲ್ ಸಮಸ್ಯೆ ಎಂಬ ಜೋಶಿ ಹೇಳಿದ್ದಾರೆ. ಹಾಗಾದ್ರೆ 5300 ಕೋಟಿ ಕೊಡ್ತೀವಿ ಅಂದೋರು ಯಾರು? ಕಾರಿಡಾರ್ ನಿಂದ ಕರ್ನಾಟಕಕ್ಕೆ ಏನೂ ಅನುಕೂಲ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.