Advertisement

ಸಂತುಲಿತ-ಜನಪ್ರಿಯ  : ಎಲ್ಲರನ್ನು ಖುಷಿಪಡಿಸಿದ ಬಜೆಟ್‌

11:00 AM Feb 02, 2018 | Karthik A |

ರೈತಾಪಿ ವರ್ಗ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಉದ್ಯಮಿಗಳು, ಬಡವರು, ಮಹಿಳೆಯರು, ಹಿರಿಯರು, ನಗರ, ಗ್ರಾಮೀಣ ಭಾಗ ಸೇರಿದಂತೆ ಎಲ್ಲರನ್ನು ಖುಷಿ ಪಡಿಸುವ ಹಾಗೂ ಇದೇ ವೇಳೆ ಅಭಿವೃದ್ಧಿಗೆ ಒತ್ತು ನೀಡುವ ಬಜೆಟ್‌ ಮಂಡಿಸುವಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಯಶಸ್ವಿಯಾಗಿದ್ದಾರೆ. ಸಂತುಲಿತ ಹಾಗೂ ತುಸು ಜನಪ್ರಿಯತೆಯತ್ತ ವಾಲಿರುವ ಮುಂಗಡಪತ್ರವಿದು. ಜಿಎಸ್‌ಟಿ ಮತ್ತು ನೋಟು ರದ್ದು ಕ್ರಮಗಳಿಂದ ಆರ್ಥಿಕತೆಯ ಮೇಲಾಗಿರುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುವ ಪ್ರಯತ್ನ ಮಾಡಲಾಗಿದೆ. ಈ ವರ್ಷ ನಡೆಯಲಿರುವ ಎಂಟು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗಾಗುವಾಗ ದೇಶದ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವುದು ಸರಕಾರದ ಪಾಲಿಗೆ ಅನಿವಾರ್ಯ. ಹಾಲಿ ಸರಕಾರ ಮಂಡಿಸುವ ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಕೂಡ ಆಗಿರುವುದರಿಂದ ಜೇಟ್ಲಿ ಮೇಲೆ ಭಾರೀ ಒತ್ತಡ ಇತ್ತು. ಈ ನಿಟ್ಟಿನಲ್ಲಿ ಕೃಷಿ ಮತ್ತು ಕಾರ್ಪೋರೇಟ್‌ ರಂಗ ಎರಡನ್ನೂ ತೃಪ್ತಿಪಡಿಸುವ ಪ್ರಯತ್ನ ಮಾಡಿದ್ದಾರೆ. 

Advertisement

ಆದಾಯ ಕರ ಸ್ಲ್ಯಾಬ್‌ ಯಥಾಸ್ಥಿತಿಯಲ್ಲಿಟ್ಟುಕೊಂಡು ಜತೆಗೆ 40,000 ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ನೀಡಿರುವುದು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರನ್ನು ಖುಷಿಪಡಿಸುವ ಜಾಣ ತಂತ್ರ. ಇದರಿಂದ ಸರಕಾರದ ಬೊಕ್ಕಸಕ್ಕೆ ಆಗಲಿರುವ 8,000 ಕೋ. ರೂ. ನಷ್ಟವನ್ನು ಭರಿಸಲು ಸರಕಾರ ತಯಾರಾಗಿದೆ. ಅಂತೆಯೇ 250 ಕೋ. ರೂ. ತನಕ ವಹಿವಾಟು ನಡೆಸುವ ಕಾರ್ಪೋರೇಟ್‌ ಕಂಪೆನಿಗಳ ಕಾರ್ಪೋರೇಟ್‌ ತೆರಿಗೆಯನ್ನು ಶೇ. 25ಕ್ಕಿಳಿಸುವ ಮೂಲಕ ಈ ವಲಯದ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ಇದರಿಂದಲೂ 7,000 ಕೋ. ರೂ. ನಷ್ಟವಾಗಲಿದೆ. ತೆರಿಗೆಯಲ್ಲಿ ಉಳಿತಾಯವಾಗುವ ಹಣವನ್ನು ಈ ಕಂಪೆನಿಗಳು ಹೊಸ ಹೂಡಿಕೆಗೆ ಬಳಸಿಕೊಂಡರೆ ಇನ್ನಷ್ಟು ಉದ್ಯೋಗಗಳು ಸೃಷ್ಟಿಯಾಗಬಹುದು ಎಂಬ ದೂರದ ನಿರೀಕ್ಷೆ ಇದರ ಹಿಂದಿದೆ. 

ಇದೇ ಮಾದರಿಯಲ್ಲಿ ಕೃಷಿ ಕ್ಷೇತ್ರಕ್ಕೂ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವ ಉಪಕ್ರಮಗಳನ್ನು ಜೇಟ್ಲಿ ಘೋಷಿಸಿದ್ದಾರೆ. 2022ಕ್ಕಾಗುವಾಗ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನಿ ಮೋದಿಯ ಆಶಯವನ್ನು ಈಡೇರಿಸುವುದು ಇದರ ಹಿಂದಿನ ಉದ್ದೇಶ ಎಂದು ಹೇಳಲಾಗಿದ್ದರೂ ಈ ಗುರಿ ಸಾಧಿಸುವುದು ಅಷ್ಟು ಸುಲಭವಲ್ಲ. ಆದರೆ ಈ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಿರತವಾಗಿದೆ ಎನ್ನುವುದು ಸಮಾಧಾನ ಕೊಡುವ ವಿಷಯ. ದೇಶದಲ್ಲಿ ರೈತರ ಸ್ಥಿತಿ ಬಹಳ ಹೀನಾಯವಾಗಿದ್ದು, ಎಲ್ಲೆಲ್ಲೂ ಅವರು ದಂಗೆಯೆದ್ದಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರ ಬದುಕನ್ನು ಹಸನುಗೊಳಿಸುವುದು ತುರ್ತಾಗಿ ಆಗಬೇಕಿರುವ ಕೆಲಸ. ಕೃಷಿ ಮಾರುಕಟ್ಟೆಗಳ ಮೇಲೆ ದೊಡ್ಡ ಪ್ರಮಾಣದ ಹೂಡಿಕೆಗೆ ಒತ್ತು ನೀಡಿರುವುದು ಹಾಗೂ ಇದೇ ವೇಳೆ ರೈತರ ಬಹುಕಾಲದ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸುವ ಆಶ್ವಾಸನೆ ನೀಡಿರುವುದು ಮುಂಗಡಪತ್ರದಲ್ಲಿರುವ ಗಮನಾರ್ಹ ಅಂಶಗಳು. ಎಪಿಎಂಸಿಯಂತಹ ಕೃಷಿ ಮಾರುಕಟ್ಟೆಗಳು ಪ್ರೋತ್ಸಾಹ ಮತ್ತು ನಿರ್ವಹಣೆಯ ಕೊರತೆಯಿಂದ ಬಳಲುತ್ತಿವೆ. ಇವುಗಳ ಸುಧಾರಣೆ ತುರ್ತಾಗಿ ಆಗಬೇಕಿರುವ ಕೆಲಸ. ಆದರೆ ಇದೇ ವೇಳೆ ಗೇರು ಬೀಜ ಆಮದು ಸುಂಕವನ್ನು ಕಡಿತಗೊಳಿಸುವಂತಹ ರೈತ ವಿರೋಧಿ ನಿರ್ಧಾರ ಕೈಗೊಂಡದ್ದು ಏಕೆ ಎನ್ನುವ ಪ್ರಶ್ನೆಯೂ ಇದೆ. ಶ್ರೀಲಂಕಾದಿಂದ ಕರಿಮೆಣಸು ಆಮದು ಮಾಡಿಕೊಳ್ಳುತ್ತಿರುವ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಅರ್ಧಕ್ಕರ್ಧ ಇಳಿದು ಕೃಷಿಕರು ಕಂಗಾಲಾಗಿದ್ದಾರೆ. ಇದೀಗ ಗೇರು ಬೀಜಕ್ಕೂ ಇದೇ ಗತಿ ಬರುವ ಸಾಧ್ಯತೆಯಿದೆ. ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ಸೇರಿ ಕೆಲವು ರಾಜ್ಯಗಳನ್ನು ಬಾಧಿಸಬಹುದಾದ ಸಮಸ್ಯೆಯಿದು. 

ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ನಿಜಕ್ಕೂ ಅಭಿನಂದನಾರ್ಹ.ಇಂದಿನ ದಿನಗಳಲ್ಲಿ ಆರೋಗ್ಯ ಸಂಬಂಧಿ ಖರ್ಚುವೆಚ್ಚಗಳು ಬಡವರ ಮಾತ್ರವಲ್ಲದೆ ಮಧ್ಯಮ ವರ್ಗದವರಿಗೂ ಬಹಳ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕುಟುಂಬವೊಂದಕ್ಕೆ ವಾರ್ಷಿಕ 5 ಲ. ರೂ. ತನಕದ ಆರೋಗ್ಯ ವಿಮೆ ನೀಡುವ ರಾಷ್ಟ್ರೀಯ ಆರೋಗ್ಯ ರಕ್ಷಣೆ ಸ್ಕೀಂ ಮುಂದಾಗಿರುವುದು ಉತ್ತಮ ಕ್ರಮ. ಇದರಿಂದ ಕನಿಷ್ಠ 50 ಕೋಟಿ ಜನರಿಗೆ ಪ್ರಯೋಜನವಾಗಲಿದೆ. ಜಗತ್ತಿನ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮ ಎಂಬ ಹಿರಿಮೆಗೆ ಇದು ಪಾತ್ರವಾಗಲಿದೆ. ಆದರೆ ಇಷ್ಟು ದೊಡ್ಡ ಯೋಜನೆಯನ್ನು ಘೋಷಿಸಿದ ಬಳಿಕ ಅದಕ್ಕೆ ನೀಡಿದ ಅನುದಾನ ಕಡಿಮೆಯಾಯಿತೇನೋ? ಆದರೂ ಸರಕಾರದ ಆದ್ಯತೆ ಬದಲಾಗಿರುವುದು ಗಮನಾರ್ಹ. ಮೊಬೈಲ್‌ ಬೆಲೆ ಏರಿಕೆಯಂತಹ ಅಪ್ರಿಯ ಅಂಶಗಳನ್ನೂ ಒಳಗೊಂಡಿದೆ. ಒಟ್ಟಾರೆ ಎಲ್ಲರಿಗೂ ಇಷ್ಟವಾಗುವ ಬಜೆಟ್‌ ಎನ್ನಲಡ್ಡಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next