ಹೊಸದಿಲ್ಲಿ: ಚುನಾವಣಾ ಆಯೋಗ ಇಂದು ಪ್ರಕಟಿಸಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿಯ ಬಗ್ಗೆ ಆಮ್ ಆದ್ಮಿ ಪಕ್ಷ ತೀವ್ರ ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸಿದೆ. ಚುನಾವಣೆಗೆ ಕೆಲವೇ ದಿನಗಳ ಮೊದಲು ಕೇಂದ್ರ ಬಜೆಟ್ ಮಂಡನೆಯಾಗಲಿರುವುದು ಚುನಾವಣಾ ನೀತಿ ಸಂಹಿತೆಯ ತತ್ವದ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಫೆ.4ರಂದು ಪಂಜಾಬ್ ಮತ್ತು ಗೋವೆಯಲ್ಲಿ ಚುನಾವಣೆ ನಡೆಯಲಿದೆ. ಈ ಎರಡೂ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಆದರೆ ಕೇಂದ್ರ ಬಜೆಟ್ ಫೆ.1ರಂದು ಮಂಡನೆಯಾಗಲಿದೆ. ಇದು ಆಮ್ ಆದ್ಮಿ ಪಕ್ಷದ ಆಕ್ಷೇಪಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗ ಐದು ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ಕೆಲವೇ ನಿಮಿಷಗಳ ತರುವಾಯ ಆಪ್ ವಕ್ತಾರ ಆಶುತೋಷ್, ತಮ್ಮ ಪಕ್ಷದ ಆಕ್ಷೇಪ, ಅಸಮಾಧಾನವನ್ನು ಟ್ವಿಟರ್‌ನಲ್ಲಿ ತೋಡಿಕೊಂಡಿದ್ದಾರೆ.
ಪಂಜಾಬ್ ಮತ್ತು ಗೋವಾ ಚುನಾವಣೆಯನ್ನು ಒಂದೇ ದಿನಾಂಕದಂದು ನಡೆಸಕೂಡದು ಎಂದು ಆಪ್ ಈ ಮೊದಲೇ ಹೇಳಿತ್ತು. ಆದರೆ ಇಂದು ಚುನಾವಣಾ ಆಯೋಗದ ವೇಳಾಪಟ್ಟಿಯ ಪ್ರಕಾರ ಈ ಎರಡೂ ರಾಜ್ಯಗಳಲ್ಲಿ ಒಂದೇ ದಿನದಂದು ಚುನಾವಣೆ ನಡೆಯಲಿದೆ. ಈ ಬಗ್ಗೆ ಮಾಧ್ಯಮದವರು ಚುನಾವಣಾ ಆಯೋಗದ ಅಧಿಕಾರಿಗಳನ್ನು ಕೇಳಿದಾಗ, “ಎಲ್ಲ ಹಿತಾಸಕ್ತಿದಾರರನ್ನು ಲಕ್ಷ್ಯದಲ್ಲಿರಿಸಿಕೊಂಡು ಚುನಾವಣಾ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ’ ಎಂದು ಉತ್ತರಿಸಿದರು.
ಹೀಗಿದ್ದರೂ ತಾನು ಗೋವಾ ಮತ್ತು ಪಂಜಾಬ್ ಎರಡೂ ರಾಜ್ಯಗಳಲ್ಲಿ ಜಯಶಾಲಿಯಾಗುವುದು ಖಚಿತ ಎಂಬ ವಿಶ್ವಾಸವನ್ನು ಆಪ್ ವ್ಯಕ್ತಪಡಿಸಿದೆ.