Advertisement

ದೀರ್ಘಾವಧಿ ಬಂಡವಾಳ ಲಾಭ ತೆರಿಗೆ ಮತ್ತೆ ಜಾರಿಗೆ

08:35 AM Feb 02, 2018 | Team Udayavani |

ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಕೊಂಚ ಗಮನಿಸಿ. 18 ವರ್ಷಗಳ ಬಳಿಕ ದೀರ್ಘಾವಧಿ ಬಂಡವಾಳ ಲಾಭ (ಎಲ್‌ಟಿಸಿಜಿ) ತೆರಿಗೆಯನ್ನು ಮರಳಿ ಜಾರಿಗೆ ತರಲಾಗಿದೆ. ಈಕ್ವಿಟಿ ಶೇರು ಹಾಗೂ ಮ್ಯೂಚುವಲ್‌ ಫ‌ಂಡ್‌ಗಳ ಮಾರಾಟದಿಂದ ವರ್ಷವೊಂದರಲ್ಲಿ ಒಟ್ಟು 1 ಲಕ್ಷ ರೂ.ಗಳನ್ನು ಮೀರಿದ ಬಂಡವಾಳಕ್ಕೆ ಲಾಭ ಬಂದಲ್ಲಿ ಅದರ ಮೇಲೆ ಶೇ. 10 ತೆರಿಗೆ ವಿಧಿಸಲಾಗುವುದು. 1 ಲಕ್ಷ ರೂ.ಗಳಿಗಿಂತ ಕಡಿಮೆ ಲಾಭಕ್ಕೆ ತೆರಿಗೆ ಇರುವುದಿಲ್ಲ. ಪ್ರಸಕ್ತ ಶೇರು ಹಾಗೂ ಮ್ಯೂಚುವಲ್‌ ಫ‌ಂಡ್‌ ಯೂನಿಟ್‌ಗಳನ್ನು ಒಂದು ವರ್ಷ ಕಾಲ ಇಟ್ಟುಕೊಂಡು ಮಾರಿದರೆ ಎಲ್‌ಟಿಸಿಜಿ ತೆರಿಗೆ ವಿಧಿಸಲಾಗುತ್ತಿಲ್ಲ. ಖರೀದಿಸಿದ 1ವರ್ಷದಲ್ಲಿ ಶೇರು  ಮಾರಾಟ ಮಾಡಿದರೆ ಶೇ. 15 ತೆರಿಗೆ ವಿಧಿಸಲಾಗುತ್ತಿದೆ. ಮ್ಯೂಚುವಲ್‌ಫ‌ಂಡ್‌ ಯೂನಿಟ್‌ ಹೊಂದಿರುವವರು ಮಾರಾಟ ವೇಳೆ ಪಾವತಿಸುವ ಶೇ. 0.001 ಸೆಕ್ಯುರಿಟಿ ವಹಿವಾಟು ತೆರಿಗೆ (ಎಸ್‌ಟಿಟಿ) ಮತ್ತು ಈಕ್ವಿಟಿ ಶೇರುಗಳ ಖರೀದಿ ಹಾಗೂ ಮಾರಾಟ ವೇಳೆ ಪಾವತಿಸಲಾಗುವ ಶೇ. 0.1 ಎಸ್‌ಟಿಟಿ ಮುಂದುವರಿಯಲಿದೆ. 

Advertisement

2004ರಲ್ಲಿ ಸರಕಾರ ಈಕ್ವಿಟಿ ಮೇಲಣ ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯನ್ನು ರದ್ದುಗೊಳಿಸಿತ್ತು ಮತ್ತು ಅದರ ಜಾಗದಲ್ಲಿ ಎಸ್‌ಟಿಟಿಯನ್ನು ಜಾರಿಗೆ ತಂದಿತ್ತು.  ಇದೀಗ ದೀರ್ಘಾವಧಿ ಬಂಡವಾಳ ತೆರಿಗೆಯನ್ನು ಮರಳಿ ಜಾರಿಗೆ ತರಲಾಗಿದೆ ಮತ್ತು ಜತೆಗೆ ಎಸ್‌ಟಿಟಿ ಮುಂದುವರಿಯಲಿದೆ. ಆದರೆ 2018 ಜ. 31ರ ತನಕ ಬಂದ ಲಾಭಗಳಿಗೆ ಎಲ್‌ಟಿಸಿಜಿ ತೆರಿಗೆ ವಿನಾಯಿತಿ ನೀಡಲಾಗಿದೆ. 2018 ಜ. 31ರ ಬಳಿಕ ಬಂದ ಲಾಭಗಳಿಗಷ್ಟೇ ತೆರಿಗೆ ಅನ್ವಯವಾಗಲಿದೆ.

ಹೂಡಿಕೆದಾರರು ಹೊಸ ಶೇ. 10 ಎಲ್‌ಟಿಸಿಜಿ ತೆರಿಗೆ ಪಾವತಿಸುವುದನ್ನು ತಪ್ಪಿಸಿಕೊಳ್ಳಲು ಡಿವಿಡೆಂಡ್‌ ಪ್ಲಾನ್‌ಗಳಿಗೆ ತಮ್ಮ ಹೂಡಿಕೆ ಮಾಡುವುದನ್ನು ತಡೆಯಲು ಬಜೆಟ್‌ನಲ್ಲಿ ಮ್ಯೂಚುವಲ್‌ ಫ‌ಂಡ್‌ಗಳ ಮೇಲೆ ಶೇ. 10 ಡಿವಿಡೆಂಡ್‌ ವಿತರಣಾ ತೆರಿಗೆ(ಡಿಟಿಟಿ)ಯನ್ನು ಪ್ರಸ್ತಾವಿಸಲಾಗಿದೆ. ಇದು ಫ‌ಂಡ್‌ಹೌಸ್‌ಗಳು ಮಿಗತೆಯನ್ನು ಡಿವಿಡೆಂಡ್‌ ಆಗಿ ಪಾವತಿಸುವುದಕ್ಕೆ ಮುನ್ನ ನೀಡುವ  ತೆರಿಗೆಯಾಗಿದೆ. ವಿಶೇಷವೆಂದರೆ ಶೇ. 10 ಎಲ್‌ಟಿಸಿಜಿ ತೆರಿಗೆಯನ್ನು  ವಾರ್ಷಿಕ ಒಟ್ಟು ಬಂಡವಾಳ ಲಾಭ  1 ಲಕ್ಷ ರೂ.ಗಳನ್ನು ಮೀರುವ ಹೂಡಿಕೆದಾರರಿಗೆ ವಿಧಿಸಲಾಗುವುದಿದ್ದರೆ ಡಿಟಿಟಿಯನ್ನು ಈಕ್ಟಿಟಿಯಲ್ಲಿ ಹೂಡಿಕೆ ನಡೆಸುವ ಮ್ಯೂಚುವಲ್‌ ಫ‌ಂಡ್‌ಗಳ ಎಲ್ಲ ಹೂಡಿಕೆದಾರರು ಭರಿಸಬೇಕಾಗುವುದು. ಈ ಬಜೆಟ್‌ ಪ್ರಸ್ತಾವದಿಂದ ಬೊಕ್ಕಸಕ್ಕೆ ಮೊದಲ ವರ್ಷ 20,000 ಕೋಟಿ ರೂ.ಗಳ ವರಮಾನ ಲಭಿಸಲಿದೆ. ಮುಂದಿನ ವರ್ಷಗಳಲ್ಲಿ ಈ ವರಮಾನದಲ್ಲಿ ಹೆಚ್ಚಳವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next