Advertisement

ಏಕರೂಪ ದರ ನಿಗದಿಯಾಗಲಿ

12:11 PM Jun 26, 2018 | Team Udayavani |

ಬೆಂಗಳೂರು: ಪರವಾನಗಿ ನಿಯಮ ಉಲ್ಲಂ ಸುತ್ತಿರುವ ಓಲಾ ಮತ್ತು ಊಬರ್‌ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಪಡಿಸಬೇಕು ಎಂದು ನಗರ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘಟನೆಗಳು ಒತ್ತಾಯಿಸಿವೆ. 

Advertisement

ಶಾಂತಿನಗರದ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ಸೋಮವಾರ ಆಯುಕ್ತ ನವೀನ್‌ರಾಜ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿರುವ ಸಂಘಟನೆಯ ಮುಖಂಡರು, ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳಾದ ಓಲಾ ಮತ್ತು ಊಬರ್‌ ಸಂಸ್ಥೆಗಳು ನಿರಂತರವಾಗಿ ಪರವಾನಗಿ ನಿಯಮಗಳನ್ನು ಉಲ್ಲಂ ಸುತ್ತಿವೆ. ಹೀಗಾಗಿ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು.  

ಆ್ಯಪ್‌ ಆಧಾರಿತ ಟ್ಯಾಕ್ಸಿ ಪ್ರಯಾಣಕ್ಕೆ ರಾಜ್ಯ ಸರ್ಕಾರ ಕಾರುಗಳ ಮೌಲ್ಯ ಆಧರಿಸಿ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಪಡಿಸಿದೆ. ಆದರೆ, ಓಲಾ ಹಾಗೂ ಊಬರ್‌ ಕಂಪೆನಿಗಳು ಕಾರುಗಳಿಗೆ ಬೇಡಿಕೆ ಹೆಚ್ಚಿದ್ದಾಗ ಗರಿಷ್ಠ ದರದಲ್ಲಿ ಸೇವೆ ನೀಡುತ್ತಿದ್ದು, ಬೇಡಿಕೆ ಕಡಿಮೆಯಿರುವ ಸಮಯದಲ್ಲಿ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿವೆ.

ಇದರಿಂದ ಕಂಪೆನಿಗಳಿಗೆ ಲಾಭವಾಗುತ್ತಿದೆಯೇ ಹೊರತು, ಗ್ರಾಹಕರಿಗಾಗಲಿ ಅಥವಾ ಚಾಲಕರಿಗಾಗಲಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಪಡಿಸಬೇಕು ಎಂದು ಮುಖಂಡರು ಆಯುಕ್ತರಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ನಗರದಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಚಾಲಕನೊಬ್ಬ ತನ್ನ ಕಾರಿನಲ್ಲಿ ಪ್ರಯಾಣಿಸಿದ್ದ ಯುವತಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ.

ಕಂಪೆನಿಗಳು ಚಾಲಕರನ್ನು ನೇಮಿಸಿಕೊಳ್ಳುವ ವೇಳೆ ಅವರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕೆಂದು ಪರವಾನಗಿ ನಿಯಮ ಹೇಳುತ್ತದೆ. ಆದರೆ, ಈ ಕಂಪೆನಿಗಳು ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಜತೆಗೆ ಜಿಪಿಎಸ್‌, ಪ್ಯಾನಿಕ್‌ ಬಟನ್‌, ಎಸ್‌ಒಎಸ್‌ ಬಟನ್‌ ನಂತಹ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. 

Advertisement

ಗುಜರಿಗೆ ಹಾಕೋದಿಲ್ಲ: ಸಭೆಯಲ್ಲಿ ಆಟೋ ಚಾಲಕರ ಸಂಘಟನೆಗಳ ಮುಖಂಡರು, 2 ಸ್ಟ್ರೋಕ್‌ ಆಟೋ ಗುಜರಿಗೆ ಹಾಕುವ ವಿಚಾರ ಪ್ರಸ್ತಾಪಿಸಲಾಗಿದೆ. ಈ ವೇಳೆ 2ಸ್ಟ್ರೋಕ್‌ ಚಾಲಕರು ಯಾವುದೇ ಕಾರಣಕ್ಕೂ ಆಟೋಗಳನ್ನು ಗುಜರಿಗೆ ಹಾಕಲು ಸಾಧ್ಯವಿಲ್ಲ. ಇಲಾಖೆಯಿಂದ ನೀಡುವಂತಹ 30 ಸಾವಿರ ರೂ. ಸಬ್ಸಿಡಿ ಯಾವುದಕ್ಕೂ ಸಾಕಾಗುವುದಿಲ್ಲ.

ಆಟೋಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಅವುಗಳನ್ನು ಗುಜುರಿಗೆ ಹಾಕಿದರೆ, ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಅಳಲು ತೋಡಿಕೊಂಡಿದ್ದಾರೆ. ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಮಸ್ಯೆಗಳನ್ನು ಆಲಿಸಿದ ಆಯುಕ್ತ ನವೀನ್‌ ರಾಜ್‌ಸಿಂಗ್‌ ಅವರು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next