ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆ ಪ್ರಾರಂಭಿಸಲಿದ್ದು ರಾಜ್ಯಾದ್ಯಂತ ಏಕರೂಪ (ಬೆಂಗಳೂರಿನಲ್ಲಿ ತುಸು ವ್ಯತ್ಯಯ ಸಾಧ್ಯತೆ) ದರ ನಿಗದಿಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆ ಬಳಿಕ ಮಾತನಾಡಿ, ಕೋವಿಡ್ ಚಿಕಿತ್ಸೆಗೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರವೇ ಚಿಕಿತ್ಸಾ ದರ, ಪರೀಕ್ಷಾ ಶುಲ್ಕ ಇತರೆ ಶುಲ್ಕ ನಿಗದಿಪಡಿಸಲಿದೆ. ಬೆಂಗಳೂರಿನಲ್ಲಿ ತುಸು ವ್ಯತ್ಯಯ ಹೊರತುಪಡಿಸಿದರೆ ರಾಜ್ಯಾದ್ಯಂತ ಏಕರೂಪದ ದರ ನಿಗದಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ಸುಲಿಗೆಗೆ ಅವಕಾಶ ನೀಡಲ್ಲ. ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರತಿ ಖಾಸಗಿ, ಕಾರ್ಪೋರೇಟ್ ಆಸ್ಪತ್ರೆಗಳಲ್ಲೂ ಐಸೋಲೇಷನ್ ವಾರ್ಡ್ ಸಿದ್ಧಪಡಿಸಿ ಚಿಕಿತ್ಸೆ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಎಬಿಎಆರ್‌ಕೆ (ಆಯುಷ್ಮಾನ್ ಭಾರತ್) ಯೋಜನೆಯಡಿಯೂ ಅನುದಾನ ಪಡೆಯುವ ರೀತಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಿಲ್ಲ. ಹೀಗಾಗಿ ಬಡವರು ಕೇಂದ್ರ-ರಾಜ್ಯ ಸರ್ಕಾರದಿಂದ ವಿಮೆ ಶುಲ್ಕ ಕೊಡಬೇಕಾಗುತ್ತದೆ.
ಎಬಿಎಆರ್‌ಕೆ ಯೋಜನೆಯನ್ನೂ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಲಾಗುವುದೆಂದರು. ಪಿಪಿಇ ಕಿಟ್ ಇತರೆ ಉಪಕರಣ ಖರೀದಿ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಎಂಡಿಎ ಹಾಗೂ ಸಿಇ ಅನುಮೋದನೆ ದೊರಕಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಕಿಟ್‌ಗಳನ್ನೇ ಖರೀದಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಎಲ್ಲ ಜಿಲ್ಲೆಗಳಿಗೆ ಖುದ್ದಾಗಿ ತಾನೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ.
ರಾಜ್ಯಾದ್ಯಂತ ಪ್ರತಿ ವಾರ್ಡ್‌ನ ಬೂತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ. ಮೊದಲು ವಾರ್ಡ್ ಹಂತದಲ್ಲಿ, ನಂತರ ಬೂತ್ ಮಟ್ಟದಲ್ಲಿ ಕಾರ್ಯಪಡೆ ರಚನೆಯಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಹಳ್ಳಿಯಲ್ಲಿ 3 ಮಂದಿಯ ಕಾರ್ಯಪಡೆ ರಚಿಸಲಾಗುವುದೆಂದರು. ಜನಪ್ರತಿನಿಧಿಗಳು ಸಾಮಾಜಿಕ ಅಂತರ ಮರೆತು ಸಭೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ವೈರಾಣುವಿಗೆ ಸಾಮಾನ್ಯ ಜನ, ಬಡವರು, ಶ್ರೀಮಂತರು ಎಂಬ ಭೇದಭಾವ ಇರುವುದಿಲ್ಲ.
ಎಲ್ಲರ ಮೇಲೂ ಸರ್ಕಾರವೇ ನಿಗಾ ಇಡಲು ಸಾಧ್ಯವಿಲ್ಲ ಮಾಸ್ಕ್ ನಮಗೆ ರಾಮಬಾಣ. ಬಳಸದವರು ಮುಂದೆ ಪರಿತಪಿಸುತ್ತಾರೆ. ಮದುವೆ ಸಮಾರಂಭಕ್ಕೆ ಅವಕಾಶವಿದ್ದು, ಪಾಲ್ಗೊಳ್ಳುವವರ ಸಂಖ್ಯೆಗೆ ಮಿತಿ ಇದೆ. ಸಮಾರಂಭ ಮಾಡಲು ಮಾರ್ಗಸೂಚಿ ಪಾಲನೆ ಅಗತ್ಯ. ಉಲ್ಲಂ ಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಕೋವಿಡ್-19 ವೈರಸ್ ಸಾರ್ಸ್‌ಗಿಂತ ಅಪಾಯ ತರುವ ವೈರಾಣುವಲ್ಲ.
ಆದರೂ ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರದಿಂದ ಜನ ಭಯಭೀತರಾಗಿದ್ದಾರೆ. ನಾನು ಟಿ.ವಿಗಳನ್ನು ವೀಕ್ಷಿಸುವುದನ್ನೇ ನಿಲ್ಲಿಸಿದ್ದೇನೆ ಎಂದು ವಿಷಾದದಿಂದ ಹೇಳುತ್ತೇನೆ. ನಾವು ಹಿಂದೆಲ್ಲಾ ಮಾರಣಾಂತಿಕ ರೋಗಗಳ ಮಧ್ಯೆ ಬದುಕಿದ್ದೇವೆ. ಮಳೆಗಾಲದಲ್ಲಿ ಲಕ್ಷಾಂತರ ಮಂದಿ ಡೆಂಘೀ, ಚಿಕೂನ್ ಗುನ್ಯಾಗೆ ತುತ್ತಾಗುತ್ತಾರೆ. ಅದೇ ರೀತಿ ಇದೂ ಒಂದು ವೈರಾಣು ಅಷ್ಟೇ. ಆದರೆ, ಮಾಧ್ಯಮಗಳಿಂದಾಗಿ ಹಳ್ಳಿಗಳಲ್ಲಿ ಜನ ಭಯಭೀತರಾಗಿದ್ದಾರೆ. ಸಣ್ಣ ಬದಲಾವಣೆ ಮಾಡಿಕೊಂಡರೂ ನಿಯಂತ್ರಿಸ ಬಹುದಾಗಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಪತ್ತೆಗೆ ದುಬಾರಿ ಶುಲ್ಕ ಸಂಗ್ರಹಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರಿಂದ ದುಬಾರಿ ಹಣ ಪಡೆದು ಸುಲಿಗೆ ಮಾಡಲು ಅವಕಾಶ ನೀಡದಂತೆ ಮನವಿ ಮಾಡಲಾಗುವುದು.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತಿ