ಬೆಂಗಳೂರು: ಉಡುಪಿ ಸಹಿತ ರಾಜ್ಯಾದ್ಯಂತ ನಗರಾಭಿ ವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಬರುವ 10 ಸೆಂಟ್ಸ್ ವರೆಗಿನ ಸ್ಥಳವನ್ನು ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿ ಜಾರಿಗೆ ತರಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಟಾರ್ ತಿಳಿಸಿದ್ದಾರೆ.
ಉಡುಪಿಯ ಶಾಸಕ ರಘುಪತಿ ಭಟ್ ಅವರು ವಿಧಾನಸಭೆಯಲ್ಲಿ ಶುಕ್ರ ವಾರ ಪ್ರಶ್ನೋತ್ತರ ವೇಳೆ ಕೇಳಿದ ಪ್ರಶ್ನೆಗೆ ನಗರಾಭಿ ವೃದ್ಧಿ ಸಚಿವರ ಪರವಾಗಿ ಕಾರ್ಮಿಕ ಸಚಿವ ಹೆಬ್ಟಾರ್ ಉತ್ತರಿಸಿದರು. ಈಗಾಗಲೇ ಹೆಚ್ಚುವರಿ ಕಾರ್ಯದರ್ಶಿ ಮತ್ತು ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಉಡುಪಿಯಲ್ಲಿ ಈ ಸಮಸ್ಯೆ ಇದ್ದರೆ ತತ್‌ಕ್ಷಣ ಪರಿಹರಿಸಲಾಗುವುದು. ರಾಜ್ಯದ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲೆಲ್ಲ ಕಾಲಮಿತಿಯೊಳಗೆ ಪರಿಹರಿಸುತ್ತೇವೆ. ಮುಂದಿನ ಮಂಗಳವಾರ ಅಧಿಕಾರಿಗಳ ಸಭೆ ಕರೆದು ಏಕರೂಪ ನೀತಿ ಜಾರಿ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಭೂಪರಿವರ್ತನೆ ಮಾಡಲು ಒಂದೊಂದು ನಗರದಲ್ಲಿ ಒಂದೊಂದು ನೀತಿ ಅನುಸರಿಸಲಾಗುತ್ತಿದೆ. ಅಧಿಕಾರಿಗಳು ಸರಿ ಯಾಗಿ ಸ್ಪಂದಿಸದೆ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ಪಕ್ಷ ಭೇದ ಮರೆತು ಆರೋಪಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ಉಡುಪಿ, ಮಂಗಳೂರು, ಶಿವಮೊಗ್ಗಕ್ಕೆ ಮಾತ್ರ ಅನ್ವಯವಾಗದಂತೆ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿಯನ್ನು ಜಾರಿ ಮಾಡಲು ಸಚಿವರಿಗೆ ನಿರ್ದೇಶನ ನೀಡಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸ್ಪೀಕರ್, ಈ ಸಮಸ್ಯೆ ರಾಜ್ಯಾದ್ಯಂತ ಇದೆ ಎಂಬುದು ಗಮನಕ್ಕೆ ಬಂದಿದೆ. ತಾರತಮ್ಯ ಬೇಡ. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ಅಧಿಕಾರ ವಿಕೇಂದ್ರೀಕರಣದ ಉದ್ದೇಶ. ಹೀಗಾಗಿ ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳ ಬೇಕೆಂದು ಸೂಚಿಸಿದರು. ಸಚಿವರು, ಶಾಸಕರ ಕಳಕಳಿ ತನಗೆ ಅರ್ಥವಾಗಿದೆ ಎಂದರು.