ಬೆಳಗಾವಿ: ಸರಕಾರವು ಶಾಲಾ ಮಕ್ಕಳಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಮಕ್ಕಳಿಗೆ ಶೂ, ಪುಸ್ತಕಗಳು ಮತ್ತು ಸಮವಸ್ತ್ರ ನೀಡುವುದು ಮುಂತಾದವೆಲ್ಲ ರಾಜಕಾರಣಿಗಳಿಗೆ ಕಮಿಷನ್ ಹೊಡೆಯಲು ರೂಪಿಸಿರುವ ಯೋಜನೆಗಳು ಎಂದು ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದಾರೆ.
ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ನಡೆದ ಶಾಲೆಯ ವಾರ್ಷಿಕೋತ್ಸವ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೇವೆ. ಮಕ್ಕಳು ದೇಶದ ಭವಿಷ್ಯ ಎನ್ನುತ್ತೇವೆ. ಆದರೆ ಮಕ್ಕಳಿಗೆ ಬಿಸಿಯೂಟ, ಸೈಕಲ್, ಶೂ, ಸಮವಸ್ತ್ರ ಹಾಗೂ ಪಠ್ಯಪುಸ್ತಕ ಕೊಡಿ ಎಂದು ಯಾರು ಹೇಳಿದ್ದರು? ಅದಕ್ಕೆ ಯಾರು ಅರ್ಜಿ ಹಾಕಿದ್ದರು? ಅದೆಲ್ಲ ಕೊಡುತ್ತಿರುವುದು ನಮ್ಮ ಕಮಿಷನ್‌ಗಾಗಿ ಎಂದು ಹೇಳಿದರು.
ರಾಜಕಾರಣ ಮತ್ತು ರಾಜಕಾರಣಿ ಗಳು ಬಹಳ ಕೆಟ್ಟುಹೋಗಿದ್ದಾರೆ. ರಾಜಕಾರಣಿಗಳು ಪವಿತ್ರರಲ್ಲ. ಜಗತ್ತಿನಲ್ಲಿ ಇವತ್ತು ಲೂಟಿಕೋರರು- ದರೋಡೆಕೋರರು ಅಥವಾ ಕಳ್ಳರು ಇದ್ದರೆ ಅದು ರಾಜಕಾರಣಿಗಳು. ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಹೇಳಿದರು.
ರಾಜಕಾರಣಿಗಳನ್ನು ಶ್ರೀಗಳ ಜತೆಗೆ ಗೌರವದಿಂದ ಕರೆದುಕೊಂಡು ಬರಬೇಡಿ. ನಮ್ಮನ್ನು ಹಿತ್ತಿಲ ಬಾಗಿಲಿನಿಂದ ಕರೆದುಕೊಂಡು ಬನ್ನಿ. ಶ್ರೀಗಳ ಜತೆಗೆ ಬರುವಷ್ಟು ನಾವು ಪರಿಶುದ್ಧರಿಲ್ಲ ಎಂದರು.
ಮಠಾಧೀಶರು ಮತ್ತು ಖಾಸಗಿ ಸಂಸ್ಥೆಯವರು ಬಾರದೆ ಹೋಗಿದ್ದರೆ ದೇಶದ ಶಿಕ್ಷಣದ ಸ್ಥಿತಿ ಏನಾಗಿರುತ್ತಿತ್ತು ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.