ಬೆಂಗಳೂರು: ರಾಜ್ಯ ಸರಕಾರದ ಶುಲ್ಕ ನಿಯಂತ್ರಣ ಸಮಿತಿಯು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಬೇರೆ ಬೇರ ಕೋರ್ಸ್‌ಗಳಿಗೆ ಏಕರೂಪದ ಶುಲ್ಕ ನಿಗದಿ ಮಾಡಿರುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.
ಶುಲ್ಕ ನಿಗದಿ ಸಮಿತಿಯ ಆದೇಶವನ್ನು ಪ್ರಶ್ನಿಸಿ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನ ಅಕಾಡೆಮಿ, ನಿಟ್ಟೆ ವಿಶ್ವವಿದ್ಯಾಲಯ ಸಹಿತ ಹಲವು ಖಾಸಗಿ ವಿಶ್ವವಿದ್ಯಾನಿಲಯಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾ ರಣೆ ನಡೆಸಿದ ನಾಯಮೂರ್ತಿ ಆಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಪಿ.ಎ.ಇನಾಂದಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟವಾಗಿ, ಶಿಕ್ಷಣದ ವೆಚ್ಚ ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತದೆ ಮತ್ತು ಅದು ಗುಣಮಟ್ಟದ ಶಿಕ್ಷಣ ಸಹಿತ ಹಲವು ಮಾನದಂಡ ಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ.
ಅಲ್ಲದೆ, ಶಿಕ್ಷಣ ಸಂಸ್ಥೆಗಳು ತಾವು ಭರಿಸುವ ವೆಚ್ಚವನ್ನು ಮತ್ತು ಭವಿಷ್ಯದಲ್ಲಿ ಶಿಕ್ಷಣದ ವಿಸ್ತರಣೆಗೆ ತಗುಲುವ ವೆಚ್ಚ ಭರಿಸಿ ಶುಲ್ಕ ನಿಗದಿಪಡಿಸಬಹುದು. ಜತೆಗೆ ಶುಲ್ಕ ನಿಗದಿಗೆ ಲಭ್ಯವಿರುವ ಮೂಲಸೌಕರ್ಯ, ಹೂಡಿಕೆ ಮಾಡಿರುವ ಬಂಡವಾಳ, ಬೋಧಕರಿಗೆ ನೀಡುವ ವೇತನ ಮತ್ತು ಮತ್ತಿತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದೂ ಸಹ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಕೋರ್ಟ್ ಮುಂದೆ ಅರ್ಜಿದಾರರು ಮಂಡಿಸಿರುವ ದಾಖಲೆಗಳನ್ನು ಗಮನಿಸಿದರೆ ಶುಲ್ಕ ನಿಯಂತ್ರಣ ಸಮಿತಿ 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕೋರ್ಸ್‌ಗಳ ಶುಲ್ಕ ಮತ್ತು ಪ್ರವೇಶ ನಿಯಂತ್ರಣ ಸೆಕ್ಷನ್ 7(1) ಉಲ್ಲಂಘನೆಯಾಗಿದೆ ಮತ್ತು ಶುಲ್ಕ ನಿಗದಿ ಮಾಡುವಾಗ ವಿವೇಚನಾಧಿಕಾರ ಸಮರ್ಪಕವಾಗಿ ಬಳಸಿಲ್ಲ ಎಂದು ಹೇಳಿದೆ.
ಶುಲ್ಕ ನಿಗದಿ ಸಮಿತಿ 2017-18ರಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ನಿಗದಿಪಡಿಸಿದ್ದ ಶುಲ್ಕದಲ್ಲಿ ಶೇ.8ರಷ್ಟು ಹೆಚ್ಚಳ ಮಾಡಿ ಮೊದಲನೇ ವರ್ಷದ ಎಂಬಿಬಿಎಸ್ ಗೆ 6,83,100 ರೂ. ನಿಗದಿ ಮಾಡಿದ್ದನ್ನು ಡೀಮ್ಡ್ ವಿವಿಗಳು ಪ್ರಶ್ನಿಸಿದ್ದವು. ಅದೇ ಮಾನದಂಡವನ್ನು ಎಂಜಿನಿಯರಿಂಗ್ ಕಾಲೇಜುಗಳ ಕೋರ್ಸ್‌ಗಳ ಶುಲ್ಕ ನಿಗದಿಗೂ ಅನುಸರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.