Advertisement

ಏಕರೂಪ ಶಿಕ್ಷಣ ಪದ್ಧತಿ ಅಪಾಯಕಾರಿ

12:46 PM Feb 26, 2017 | Team Udayavani |

ದಾವಣಗೆರೆ: ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿ ಜಾರಿ ಮಾಡುವ ಕೇಂದ್ರ ಸರ್ಕಾರ ನಿರ್ಧಾರ ಅತ್ಯಂತ ಅಪಾಯಕಾರಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

Advertisement

ಎಆರ್‌ಎಂ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್‌, ಧಾರವಾಡದ ಸಮಷ್ಠಿ ಫೌಂಡೇಷನ್‌ ನಿಂದ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ, ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ನಮ್ಮ ದೇಶದಲ್ಲಿ ವೈವಿಧ್ಯಮಯ ಸಂಸ್ಕೃತಿ, ಆಚಾರ, ವಿಚಾರಗಳಿವೆ.

ಆಯಾ ಭಾಗಕ್ಕೆ ಹೊಂದಿಕೊಳ್ಳುವಂತಹ ವಿಷಯ ವಸ್ತುಗಳನ್ನು ಹೊಂದಿದೆ. ಇಂತಹ ದೇಶಕ್ಕೆ ಏಕರೂಪ ಶಿಕ್ಷಣ ಜಾರಿ ಮಾಡುವುದು ಅತ್ಯಂತ ಅಪಾಯಕಾರಿ ಎಂದರು. ಸಮಕಾಲೀನ ಸಮಸ್ಯೆಗಳಲ್ಲಿ ಜಾತಿ ವ್ಯವಸ್ಥೆ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ನಮ್ಮ ದೇಶದಲ್ಲಿ ಓರ್ವ ವ್ಯಕ್ತಿಯನ್ನು ಮೊದಲು ಗುರುತಿಸುವುದೇ ಜಾತಿಯ ಆಧಾರದಲ್ಲಿ. ಒಟ್ಟು 12,792 ಜಾತಿಗಳು ನಮ್ಮ ದೇಶದಲ್ಲಿವೆ.

ಇವುಗಳ ದಮನ ಆಗಬೇಕಾದರೆ ವೈಚಾರಿಕತೆ ಬೆಳೆಯಬೇಕು. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಈ ವೈಚಾರಿಕತೆ ಬೆಳೆಸಬೇಕು. ಪ್ರತೀ ಶಿಕ್ಷಕ ತನ್ನ ಶಿಷ್ಯ ವೃಂದಕ್ಕೆ ಪಠ್ಯಕ್ರಮದಲ್ಲಿ ಇಲ್ಲದೇ ಇದ್ದರೂ ಕಲಿಸಲೇಬೇಕಾದ ವಿಷಯಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಈಗಿರುವ ಸೆಮಿಸ್ಟರ್‌ ಪದ್ಧತಿ ಸೂಕ್ತವಾಗಿಲ್ಲ.

ಪಾಠ ಮಾಡುವ ಶಿಕ್ಷಕನಿಗೆ ಮಕ್ಕಳೊಂದಿಗೆ ಅನುಸಂಧಾನ ಮಾಡಲು ಈ ಕ್ರಮದಿಂದ ಸಾಧ್ಯವಾಗುತ್ತಿಲ್ಲ. ಇದನ್ನು ತೆಗೆಯಬೇಕು. ಮೊದಲಿನಂತೆಯೇ ವಾರ್ಷಿಕ ಪದ§ತಿ ಅನುಸರಿಸಬೇಕು ಎಂದು ಅವರು ಪ್ರತಿಪಾದಿಸಿದರು. ಕನ್ನಡ ಮಾಧ್ಯಮ ಅನ್ನ ಕೊಡುವ ಮಾಧ್ಯಮ ಅಲ್ಲ ಎಂದು ಹೇಳುವುದು ಸುಳ್ಳು. ನನ್ನ ಮೂವರು ಮಕ್ಕಳು ಕನ್ನಡ ಮಾಧ್ಯಮದಲ್ಲಿಯೇ ಓದಿದವರು.

Advertisement

ಇಂದು ಇಂಗ್ಲಿಷ್‌ ಸೇರಿ 5 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ ಮಕ್ಕಳ ಪೋಷಕರು ಕಾಯಂ ವೃದ್ಧಾಶ್ರಮ ಸೇರುತ್ತಾರೆ ಎಂದು ಅವರು ಹೇಳಿದರು. ಕನ್ನಡ ಶಿಕ್ಷಕ ಎಲ್ಲ ವಿಷಯ ತಿಳಿಸಬೇಕಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಎಲ್ಲ ರೀತಿಯ ವಿಷಯಗಳಿವೆ. 

ಭೂಗೋಳ, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಖನಿಜ ಶಾಸ್ತ್ರ ಹೀಗೆ ಹಲವು ವಿಷಯಗಳನ್ನು ನಾವು ನಮ್ಮ ಕನ್ನಡ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಕನ್ನಡ ಕೇವಲ ಒಂದು ಭಾಷಾ ವಿಷಯವಲ್ಲ ಎಲ್ಲ ವಿಷಯಗಳ ಒಂದು ಆಕರವಾಗಿದೆ ಎಂದು ಅವರು ತಿಳಿಸಿದರು. ನಮ್ಮ ವಿವಿಗಳಲ್ಲಿ ಇಂದಿಗೂ ಬ್ರಿಟಿಷರ ಪಳಿಯುಳಿಕೆಗಳಿವೆ. ಅವುಗಳು ಕನ್ನಡದ ವಿಚಾರಗಳನ್ನು ಪ್ರಸ್ತಾಪಿಸಲು ಬಿಡುವುದಿಲ್ಲ.

ಕನ್ನಡ ಎಂದರೆ ಅಸಡ್ಡೆಯಿಂದ ಕಾಣುತ್ತಾರೆ. ಹಿಂದೆ ಕುವೆಂಪು, ಜಿ.ಎಸ್‌. ಶಿವರುದ್ರಪ್ಪ, ಹಾ.ಮ. ನಾಯಕ್‌ರಂತಹ ಮೇಧಾವಿಗಳಿದ್ದರು. ಆಗ ಕನ್ನಡ ಉತ್ತುಂಗದಲ್ಲಿತ್ತು. ಆದರೆ, ಇಂದು ಕನ್ನಡಕ್ಕೆ ಸ್ಥಾನಮಾನ ಇಲ್ಲವಾಗಿದೆ. ಇಂಗ್ಲಿಷ್‌ಗೆ ಸ್ಥಾನಮಾನ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ ವಿಜ್ಞಾನ ವಿಷಯಗಳನ್ನು ಬಿಟ್ಟು ಇತರೆ ವಿಷಯಗಳು ಇಂದು ಮೂಲೆಗುಂಪಾಗುತ್ತಿವೆ.

ಸಮಾಜ ಶಾಸ್ತ್ರ, ಮಾನವ ಶಾಸ್ತ್ರ ಸೇರಿದಂತೆ ಮಾನವೀಯ ಮೌಲ್ಯ ಸಾರುವಂತಹ ವಿಷಯಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಈಗೇನಿದ್ದರೂ ವಿಜ್ಞಾನ  ವಿಷಯಗಳೇ ಪ್ರಬಲವಾಗಿ ಮುನ್ನುಗ್ಗುವ ಕಾಲ ಸನ್ನಿಹಿತವಾಗಿದೆ ಎಂದು ಅವರು ತಿಳಿಸಿದರು. ವಿಚಾರ ಸಂಕಿರಣ ಸಂಯೋಜಕ ಅಧ್ಯಕ್ಷ ಡಾ| ಪ್ರಕಾಶ್‌ ಹಲಗೇರಿ, ಪ್ರಾಂಶುಪಾಲ ಪ್ರೊ| ಡಿ.ಎಚ್‌. ಪ್ಯಾಟಿ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next