Advertisement

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಹಕರಿಸಿ ಭಾಷೆ ಉಳಿಸೋಣ: ರವಿ ಎ. ಬಂಗೇರ

10:58 AM Jan 19, 2022 | Team Udayavani |

ಅಂಬರ್‌ನಾಥ್‌: ನಾವು ಅಂದು ಹಗಲಲ್ಲಿ ದುಡಿದು ರಾತ್ರಿ ಸಿಕ್ಕಿದ ಮೂರು ತಾಸಿನ ಶಿಕ್ಷಣದಲ್ಲಿ ನಿದ್ದೆ ಹಾಗೂ ವಿಶ್ರಾಂತಿಯನ್ನು ಬದಿಗೊತ್ತಿ ಶಿಕ್ಷಣದ ಕಡೆ ಗಮನ ಇಟ್ಟಿದ್ದರಿಂದ ಇಂದು ನಾವೆಲ್ಲ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಕಠಿನ ಪರಿಶ್ರಮ ವಹಿಸಿದ್ದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಎ. ಬಂಗೇರ ತಿಳಿಸಿದರು.

Advertisement

ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಜ. 8ರಂದು ಅಂಬರ್‌ನಾಥ್‌ನ ಎಸ್‌. ನಿಜಲಿಂಗಪ್ಪ ಕನ್ನಡ ಶಾಲೆಯ ಸುಮಾರು 32 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಾವು ರಾತ್ರಿ ಶಾಲೆಯಲ್ಲಿ ಕಲಿಯುತ್ತಿರುವಾಗ ನಮಗೆ ಸಹಾಯಹಸ್ತ ನೀಡಲು ಯಾರೂ ಮುಂದೆ ಬರುತ್ತಿರಲಿಲ್ಲ. ನಮ್ಮ ಸಂಘದ ವತಿಯಿಂದ ಕಳೆದ ವರ್ಷ ಸುಮಾರು  35 ವಿದ್ಯಾರ್ಥಿಗಳಿಗೆ ಪಾಠ ಪುಸ್ತಕವನ್ನು ನೀಡಿದ್ದೇವೆ ಎಂದರು.

ಶಾಲಾ ಶಿಕ್ಷಕರಾದ ಎಸ್‌. ವಿ. ಮಡಿವಾಲ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸುಭಾಷ್‌ ಆರ್‌. ಯಾಗಂಟೆ ಅವರು ಶಾಲೆ ಹಾಗೂ ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಆತ್ಮೀಯ ಸಂಬಂಧದ ಕುರಿತು ಮಾತನಾಡಿದರು.

ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಸಂತ ಎನ್‌. ಸುವರ್ಣ ಅವರು ಸಂಘವು ಬೆಳ್ಳಿಹಬ್ಬವನ್ನು ಹಾಗೂ ಸುವರ್ಣ ಮಹೋತ್ಸವನ್ನು ಆಚರಿಸಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಹಳೆ ವಿದ್ಯಾರ್ಥಿ ಸಂಘದ ಇತರ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಕನ್ನಡ ಭವನ ಶಾಲೆ ಹಾಗೂ ಜೂನಿಯರ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸುರೇಶ್‌ ಎಸ್‌. ಸುವರ್ಣ ಹಾಗೂ ಸಂಘದ ಉಪಾಧ್ಯಕ್ಷ ಶಿವರಾಮ ಎನ್‌. ಶೆಟ್ಟಿ, ಕೋಶಾಧಿಕಾರಿ ದಿವಾಕರ ಎನ್‌. ಶೆಟ್ಟಿ, ಮಾಜಿ ಅಧ್ಯಕ್ಷ ಕೃಷ್ಣ ಬಿ. ಪೂಜಾರಿ, ಮಾಜಿ ಕೋಶಾಧಿಕಾರಿ ರಮೇಶ್‌ ಜಿ. ಸುವರ್ಣ, ಸುರೇಶ್‌ ಸುವರ್ಣ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಎ. ಕೆ. ಹೊನ್ನಳ್ಳಿ ಮಾತನಾಡಿ, ಗುರುನಾರಾಯಣ ಹಳೆ ವಿದ್ಯಾರ್ಥಿ ಸಂಘ ಈ ಶಾಲೆಯ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ಇನ್ನುಳಿದ ವಿದ್ಯಾರ್ಥಿಗಳಿಗೆ ಇತರರಿಂದ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಅವರಿಗೆ ಶಾಲಾ ಶಿಕ್ಷಕ ಮತ್ತು ಶಿಕ್ಷಿಕಯರ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

Advertisement

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವೈಭವ ಸಂಸ್ಥೆಯ ಅಧ್ಯಕ್ಷ ಎಚ್‌. ಆರ್‌. ಚೆಲುವಾದಿ ವಹಿಸಿದ್ದರು.

ಕಾರ್ಯಕ್ರಮವನ್ನು ಶಾಲಾ ಶಿಕ್ಷಕ ಬಿ. ಎನ್‌. ಬಿರಾದಾರ ನಿರೂಪಿಸಿದರು. ಶಿಕ್ಷಕ ಸಿ.ಬಿ. ದೊಡ್ಡಮನೆ ವಂದಿಸಿದರು. ಇಲ್ಲಿನ ಕನ್ನಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತವನ್ನು ನೀಡುವ ಶಿಕ್ಷಣ ಪ್ರೇಮಿಗಳು ಕನ್ನಡಾಭಿಮಾನಿಗಳು ಶಾಲಾ ಸಮಿತಿಯ ಅಧ್ಯಕ್ಷ ಎಚ್‌. ಆರ್‌. ಚೆಲುವಾದಿ (8983632755) ಮತ್ತು ಮಲ್ಲಿನಾಥ ಜಲದೆ (932254366) ಅವರನ್ನು ಸಂಪರ್ಕಿಸಬಹುದು.

ಗುರುನಾರಾಯಣ ಹಳೆ ವಿದ್ಯಾರ್ಥಿ ಸಂಘವು ನಮ್ಮ ಶಾಲಾ 35 ವಿದ್ಯಾರ್ಥಿಗಳಿಗೆ ಕಳೆದ ವರ್ಷ ಪಠ್ಯ ಪುಸ್ತಕವನ್ನು ನೀಡಿ ಸಹಕರಿಸಿದ್ದಾರೆ. ಇಂದೂ 32 ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿ ಸಹಕರಿಸಿದ್ದಾರೆ. ಮುಂದೆಯೂ ಅವರಿಂದ ಸಹಾಯ, ಸಹಕಾರ ದೊರೆಯುವಂತಾಗಲಿ. ಅವರಿಗೆ ಶಾಲೆ ಹಾಗೂ ಸಂಸ್ಥೆಯ ವತಿಯಿಂದ ಕೃತಜ್ಞತೆಗಳು.ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸಂಘಟಿಸುವ ಕಾರ್ಯ  ಆರಂಭಿಸಿದ್ದೇವೆ. ಆದಷ್ಟು ಬೇಗ ಹೆಚ್ಚಿನ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ.ಎಚ್‌. ಆರ್‌. ಚೆಲುವಾದಿ,ಅಧ್ಯಕ್ಷರು, ಕರ್ನಾಟಕ ವೈಭವ ಸಂಸ್ಥೆ ಅಂಬರ್‌ನಾಥ್‌

ಶಾಲೆಯ ಬಡ ವಿದ್ಯಾರ್ಥಿಗಳಿಗೆ ಈ ಹಿಂದೆಯೂ ಸಹಕರಿಸಿದ್ದೇವೆ. ಎಸ್‌. ನಿಜಲಿಂಗಪ್ಪ ಶಾಲೆಯ ಕನ್ನಡ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಕನ್ನಡವನ್ನು ಉಳಿಸಿ-ಬೆಳೆಸಲು ನಮ್ಮ ಸಹಕಾರ ಸದಾಯಿದೆ. ಕನ್ನಡ ಭಾಷೆ ಉಳಿಯಬೇಕಾದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಬೇಕು. ನಮ್ಮ ಸಂಘದ ವತಿಯಿಂದ ಇತರನ್ನು ಸಂಪರ್ಕಿಸಿದ್ದೇವೆ. ಆ ಮೂಲಕ ಇತರ ತರಗತಿಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಸದ್ಯದಲ್ಲಿ ಇತರ ವಿದ್ಯಾರ್ಥಿಗಳಿಗೂ ಸಹಾಯ ದೊರಕಬಹುದು.ವಸಂತ್‌ ಎನ್‌. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ, ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ

Advertisement

Udayavani is now on Telegram. Click here to join our channel and stay updated with the latest news.

Next