ಹೊಸದಿಲ್ಲಿ: ವಿವಾದಿತ ಸಮಾನ ನಾಗರಿಕ ಸಂಹಿತೆ ಜಾರಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಬೇಕೋ, ಬೇಡವೋ ಎಂಬ ಬಗ್ಗೆ 22ನೇ ಕಾನೂನು ಆಯೋಗ ಹೊಸದಾಗಿ ಸಾರ್ವಜನಿಕರಿಂದ ಸಲಹೆ, ಆಕ್ಷೇಪಗಳನ್ನು ಆಹ್ವಾನಿಸಲು ನಿರ್ಧರಿಸಿದೆ.
ಅದರಂತೆ ನಾಗರಿಕರು, ಧಾರ್ಮಿಕ ಸಂಘ ಸಂಸ್ಥೆಗಳು ಸಹಿತ ಸಂಬಂಧಪಟ್ಟವರಿಂದ ಸಲಹೆಗಳನ್ನು ಆಹ್ವಾನಿಸುವುದಾಗಿ ಬುಧವಾರ ಆಯೋಗ ಮಾಹಿತಿ ನೀಡಿದೆ.
ಈ ಹಿಂದೆ 21ನೇ ಕಾನೂನು ಆಯೋಗವು (ಇದರ ಅವಧಿ 2018ರ ಆಗಸ್ಟ್‌ನಲ್ಲಿ ಮುಗಿದಿತ್ತು) ಯುಸಿಸಿ ಕುರಿತು ಪರಿಶೀಲಿಸಿತ್ತು. ಜತೆಗೆ, ಇದು ರಾಜಕೀಯ ಸೂಕ್ಷ್ಮತೆಯ ವಿಚಾರವಾಗಿರುವ ಕಾರಣ ಎರಡು ಬಾರಿ ಸಂಬಂಧಪಟ್ಟವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಅದರಂತೆ, 2018ರಲ್ಲಿ “ಕೌಟುಂಬಿಕ ಕಾನೂನಿನಲ್ಲಿ ಸುಧಾರಣೆಗಳು’ ಎಂಬ ಸಮಾಲೋಚನ ಪತ್ರವನ್ನು ಸಲ್ಲಿಸಿತ್ತು.
ಇದಾಗಿ ಮೂರು ವರ್ಷಗಳು ಕಳೆದ ಬಳಿಕ ಈ ವಿಚಾರದಲ್ಲಿ ಮತ್ತೂಮ್ಮೆ ಸಾರ್ವಜನಿಕರ ಅಭಿಪ್ರಾಯ ಪಡೆಯುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಆಯೋಗ ಬಂದಿದೆ. ಅದರಂತೆ, ನೋಟಿಸ್ ನೀಡಿದ ದಿನಾಂಕದಿಂದ 30 ದಿನಗಳ ಒಳಗಾಗಿ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕರು, ಧಾರ್ಮಿಕ ಸಂಘ ಸಂಸ್ಥೆಗಳು ಸಲ್ಲಿಸಬಹುದು ಎಂದು ಹೇಳಿದೆ. ಬಿಜೆಪಿ ಆಡಳಿತ ಇರುವ ಎಲ್ಲ ರಾಜ್ಯಗಳಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕಾನೂನು ತಜ್ಞರ ಸಮಿತಿಯನ್ನು ರಚಿಸಲಾಗಿದೆ.