Advertisement

UCC: ಏಕರೂಪ ನಾಗರಿಕ ಸಂಹಿತೆ- ತೀವ್ರಗೊಂಡ ಚರ್ಚೆ 

10:30 PM Jul 02, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಧ್ವನಿಯೆತ್ತಿದ ಬಳಿಕ, ಈ ವಿಚಾರ ಕುರಿತು ಬಿಜೆಪಿ ಅತೀವ ಆಸಕ್ತಿ ವಹಿಸಿದೆ. ಆದರೆ, ಕಾಂಗ್ರೆಸ್‌ “ಕಾದು ನೋಡುವ ತಂತ್ರ’ದ ಮೊರೆ ಹೋಗಿದ್ದು, ಕರಡು ವಿಧೇಯಕ ಅಥವಾ ಯುಸಿಸಿ ಕುರಿತ ವರದಿ ಬಂದ ಬಳಿಕವಷ್ಟೇ ಪ್ರತಿಕ್ರಿಯಿಸಲು ಅಥವಾ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ.

Advertisement

ಕರಡು ವಿಧೇಯಕ ಸಿದ್ಧಗೊಂಡ ಬಳಿಕ ನಡೆಯುವ ಚರ್ಚೆಯಲ್ಲಿ ನಾವು ಪಾಲ್ಗೊಳ್ಳುತ್ತೇವೆ. ಕರಡುವಿನಲ್ಲಿ ಏನೇನು ಪ್ರಸ್ತಾಪ ಮಾಡಲಾಗಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ಸದ್ಯಕ್ಕೆ ಕಾನೂನು ಆಯೋಗವು ಸಾರ್ವಜನಿಕರ ಸಭೆ ಆಹ್ವಾನಿಸಿದ ನೋಟಿಸ್‌ ಮಾತ್ರ ನಮ್ಮ ಬಳಿ ಇದೆ. ನಂತರದಲ್ಲಿ ಯಾವುದೇ ಹೊಸ ಬದಲಾವಣೆ ಆಗಿಲ್ಲ. ಕೇಂದ್ರ ಸರ್ಕಾರದ ಮುಂದಿನ ನಡೆಯನ್ನು ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಭಾನುವಾರ ಹೇಳಿದ್ದಾರೆ.

ಜತೆಗೆ, ಸರ್ಕಾರದ ವೈಫ‌ಲ್ಯಗಳನ್ನು ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಸಮಾಜವನ್ನು ವಿಭಜಿಸುವ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ, ಚೀನಾವು ಭಾರತದ ಭೂಪ್ರದೇಶದೊಳಗೆ ಕುಳಿತಿದೆ, ದೇಶದ ಜನ ಬೆಲೆಯೇರಿಕೆ, ನಿರುದ್ಯೋಗದಿಂದ ತತ್ತರಿಸಿಹೋಗಿದ್ದಾರೆ. ಆದರೆ, ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಪ್ರಧಾನಿ ಮೋದಿ, ಧ್ರುವೀಕರಣ ಮತ್ತು ಹಾದಿತಪ್ಪಿಸುವ ವಿಚಾರಗಳತ್ತಲೇ ಜನರ ಗಮನ ಸೆಳೆಯುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.

ಇಂದು ಸ್ಥಾಯೀ ಸಮಿತಿ ಸಭೆ: 2018ರಲ್ಲಿ ಕಾನೂನು ಆಯೋಗ ಹೊರಡಿಸಿದ ಸಮಾಲೋಚನಾ ಪತ್ರದ ಕುರಿತು ಚರ್ಚೆ ನಡೆಸಲು ಸೋಮವಾರ ಸಂಸದೀಯ ಸ್ಥಾಯೀ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಯುಸಿಸಿ ವಿರುದ್ಧ ವಾದ ಮಂಡಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಏಕೆಂದರೆ, ಆ ಸಮಾಲೋಚನಾ ಪತ್ರದಲ್ಲಿ “ಈ ಹಂತದಲ್ಲಿ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿಲ್ಲ’ ಎಂಬ ನಿರ್ಧಾರಕ್ಕೆ ಬರಲಾಗಿತ್ತು.

ಈ ನಡುವೆ, ಹಿಮಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನಕ್ಕೇರಿರುವ ಕಾಂಗ್ರೆಸ್‌ ನಾಯಕ ವಿಕ್ರಮಾದಿತ್ಯ ಸಿಂಗ್‌ ಯುಸಿಸಿ ಪರ ಧ್ವನಿಯೆತ್ತಿದ್ದಾರೆ. “ಏಕರೂಪ ನಾಗರಿಕ ಸಂಹಿತೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಈ ಹಿಂದೆಯೇ ಹೇಳಿದ್ದೆವು. ಕಾಂಗ್ರೆಸ್‌ ಯಾವತ್ತೂ ಏಕತೆ ಮತ್ತು ಸಾರ್ವಭೌಮತೆಯನ್ನು ಮುಂದಕ್ಕೆ ಒಯ್ಯುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆದರೆ, ಬಿಜೆಪಿ ದೇಶದ ನೈಜ ಸಮಸ್ಯೆಗಳ ಕುರಿತು ಮಾತನಾಡದೇ, ಜನರ ಹಾದಿ ತಪ್ಪಿಸುತ್ತಿದೆ. ಮಣಿಪುರವು ಹೊತ್ತಿ ಉರಿಯುತ್ತಿದ್ದರೂ ಅಲ್ಲಿನ ಮುಖ್ಯಮಂತ್ರಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದೂ ಸಿಂಗ್‌ ಆರೋಪಿಸಿದ್ದಾರೆ.

Advertisement

ವಿರೋಧಿಯಲ್ಲ, ಆದರೆ

ನಾವು ಸಮಾನ ನಾಗರಿಕ ಸಂಹಿತೆಯ ಪರಿಕಲ್ಪನೆಯನ್ನು ವಿರೋಧಿಸುವುದಿಲ್ಲ. ಹಾಗಂತ, ಬಿಜೆಪಿ ಮತ್ತು ಆ ಪಕ್ಷ ಅಧಿಕಾರದಲ್ಲಿರುವ ಸರ್ಕಾರಗಳು ದೇಶದಲ್ಲಿ ಇದನ್ನು ಜಾರಿಗೆ ತರುತ್ತಿರುವ ರೀತಿಯನ್ನು ವಿರೋಧಿಸುತ್ತೇವೆ ಎಂದು ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ ನಾಯಕಿ ಮಾಯಾವತಿ ಹೇಳಿದ್ದಾರೆ.

ಒವೈಸಿ ವಿರುದ್ಧ ಧಾಮಿ ಕಿಡಿ

“ಮುಸ್ಲಿಮರನ್ನು ಗುರಿ ಮಾಡಲೆಂದೇ ಸಂಹಿತೆ ಯನ್ನು ಜಾರಿ ಮಾಡಲಾಗುತ್ತಿದೆೆ’ ಎಂದಿರುವ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ವಿರುದ್ಧ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸಿಟ್ಟಾಗಿದ್ದಾರೆ. “ಒವೈಸಿಯಂಥ ಜನರೇ ಜಿನ್ನಾ ಮಾದರಿಯ ಸಂಸ್ಕೃತಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ’ ಎಂದಿದ್ದಾರೆ.

ಇಂದು ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರ ಸಭೆ

ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕನ್ವೆನ್ಶನ್‌ ಕೇಂದ್ರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರ ಸಭೆ ನಡೆಯಲಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯವಾದ ಚರ್ಚೆ ನಡೆಯಲಿದೆ. ಅಷ್ಟು ಮಾತ್ರವಲ್ಲ ಹಲವು ರಾಜ್ಯಗಳಲ್ಲಿ ಸಂಘಟನಾತ್ಮಕವಾಗಿ ಪಕ್ಷದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಈ ಕುರಿತ ಕೆಲವು ಮಹತ್ವದ ನಿರ್ಧಾರಗಳನ್ನು ಇಲ್ಲಿ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲ ಕೇಂದ್ರ ಸಂಪುಟವನ್ನು ಪುನಾರಚನೆಯ ಕುರಿತೂ ನಿರ್ಧಾರವಾಗಬಹುದು. ಈಗಾಗಲೇ ಸಂಪುಟವನ್ನು ಪುನಾರಚನೆ ಮಾಡುವ ಚರ್ಚೆ ಬಿಜೆಪಿಯಲ್ಲಿ ಜೋರಾಗಿ ನಡೆಯುತ್ತಿದೆ. ಪಕ್ಷದಲ್ಲಿ ಸಂಘಟನಾತ್ಮಕವಾಗಿ ಬದಲಾವಣೆ ಮಾಡುವುದಾದರೆ, ಕರ್ನಾಟಕದ ಬಗ್ಗೆಯೂ ಪ್ರಮುಖ ನಿರ್ಧಾರ ಹೊರಬೀಳಬಹುದು. ಹಾಗಾಗಿ ರಾಜ್ಯದ ಪಾಲಿಗೂ ಇದು ಕುತೂಹಲಕರ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next