Advertisement

ಅಪರಿಚಿತ ಯುವಕನ ಶವ ಪತ್ತೆ; ಕೊಲೆ ಶಂಕೆ

09:50 AM Nov 12, 2018 | Team Udayavani |

ಬೆಳ್ತಂಗಡಿ: ಉಜಿರೆ ಗ್ರಾಮದ ಗುರಿಪಳ್ಳ ಕ್ರಾಸ್‌ ಅಳಕೆ ರಸ್ತೆಯಲ್ಲಿ ಅಪರಿಚಿತ ಯುವಕನ ಮೃತದೇಹ ರವಿವಾರ ಪತ್ತೆಯಾಗಿದ್ದು, ಇದೊಂದು ಕೊಲೆಯಾಗಿರಬೇಕು ಎಂಬ ಶಂಕೆ ಮೂಡಿದೆ.  ಯುವಕನ ಮುಖಕ್ಕೆ ಪ್ಲಾಸ್ಟಿಕ್‌ ಟೇಪ್‌ ಸುತ್ತಲಾಗಿದ್ದು, ಎಲ್ಲಿಯೋ ಕೊಲೆ ಮಾಡಿ ಇಲ್ಲಿಗೆ ತಂದು ಬಿಸಾಡಿರಬೇಕು ಎಂದು ಸಂಶಯಿಸಲಾಗಿದೆ.

Advertisement

ಯುವಕನ ವಯಸ್ಸು ಸುಮಾರು 30ರಿಂದ 35 ವರ್ಷವೆಂದು ಅಂದಾಜಿಸಲಾಗಿದ್ದು, ಕಪ್ಪು ಪ್ಯಾಂಟ್‌ ಹಾಗೂ ಬೂದು ಬಣ್ಣದ ಟಿಶರ್ಟ್‌ ಧರಿಸಿದ್ದಾನೆ. ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಈತನನ್ನು ಉಸಿರುಗಟ್ಟಿಸಿ  ಕೊಲೆ ಮಾಡಿ ವಾಹನದಲ್ಲಿ ತಂದು ಶವವನ್ನು ಇಲ್ಲಿ ಎಸೆದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ನಿವಾಸಿ ಅನಿಲ್‌ ಪ್ರಕಾಶ್‌ ಡಿ’ ಸೋಜಾ ಅವರು ರವಿವಾರ ಬೆಳಗ್ಗೆ ವಾಕಿಂಗ್‌ ಹೋಗುವ ಸಂದರ್ಭ ಮೃತದೇಹ ಚರಂಡಿ ಬದಿಯಲ್ಲಿ ಕಂಡುಬಂದಿದೆ. ಅವರು ನೀಡಿದ ಮಾಹಿತಿಯಂತೆ  ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ., ಪಿಎಸ್‌ಐ ರವಿ ಬಿ.ಎಸ್‌. ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹದ ಮೇಲೆ ಗುರುತು ಪತ್ತೆಗೆ ಸಹಕಾರಿಯಾಗುವ ಯಾವುದೇ ವಸ್ತುಗಳು ಕಂಡುಬಂದಿಲ್ಲ.

ಕೃತ್ಯ ಎಸಗಿರುವವರೇ ಮೊಬೈಲ್‌ ಹಾಗೂ ಪರ್ಸನ್ನು ಎಗರಿಸಿರುವ ಸಾಧ್ಯತೆ ಇದೆ. ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ನ. 12ರಂದು ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ವಾರಸುದಾರರಿದ್ದಲ್ಲಿ ಬೆಳ್ತಂಗಡಿ ಠಾಣೆಯನ್ನು ಸಂಪರ್ಕಿಸಬಹುದು. ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂದೇಶ್‌  ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next