Advertisement

ಸಮವಸ್ತ್ರಕ್ಕೆ ಅಸಮಾಧಾನ​​​​​​​

06:00 AM Nov 19, 2018 | |

ಬೆಂಗಳೂರು: ಗರ್ಭಿಣಿ ಪೊಲೀಸ್‌ ಸಿಬ್ಬಂದಿಗೆ ಸಮವಸ್ತ್ರ ಕಡ್ಡಾಯ(ಪ್ಯಾಂಟ್‌ ಧರಿಸಿ ಔಟ್‌ ಶರ್ಟ್‌ ಮಾಡಬೇಕು) ಮಾಡಿ ಆದೇಶ ಹೊರಡಿಸಿರುವ ನಗರ ಪೊಲೀಸ್‌ ಆಯುಕ್ತರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಆಯೋಗ, ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆಯುವುದಾಗಿ ತಿಳಿಸಿದೆ.

Advertisement

ಈ ಕುರಿತು ಉದಯವಾಣಿ ಜತೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ$¾àಬಾಯಿ, ಪೊಲೀಸ್‌ ಇಲಾಖೆ ಶಿಸ್ತಿನ ಇಲಾಖೆ. ಕರ್ತವ್ಯದ ವೇಳೆ, ಕಳ್ಳರನ್ನು ಬೆನ್ನಟ್ಟುವ ವೇಳೆ ಸೀರೆ ಧರಿಸುವುದರಿಂದ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ ಎಂಬ ಉದ್ದೇಶದಿಂದ ಏಕರೂಪ ಸಮವಸ್ತ್ರ ಧರಿಸಬೇಕೆಂದು ಇತ್ತೀಚೆಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಗರ್ಭಿಣಿ ಮಹಿಳಾ ಸಿಬ್ಬಂದಿಯೂ ಕಡ್ಡಾಯವಾಗಿ ಪ್ಯಾಂಟ್‌- ಶರ್ಟ್‌ ಸಮವಸ್ತ್ರ 
ಧರಿಸಲೇಬೇಕೆಂದು ನಗರ ಪೊಲೀಸ್‌ ಆಯುಕ್ತ ಸುನಿಲ್‌ಕುಮಾರ್‌ ಕೂಡ ಆದೇಶ ಹೊರಡಿಸಿದ್ದಾರೆ.

ಆದರೆ, ಗರ್ಭಿಣಿ ಸಿಬ್ಬಂದಿಗೆ ಇದು ಬಹಳ ಕಷ್ಟವಾಗುತ್ತದೆ. ಔಟ್‌ ಶರ್ಟ್‌ ಮಾಡಿ ಲಾಠಿ ಹಿಡಿದು ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವುದು ಸಿಬ್ಬಂದಿಗೆ ಮುಜುಗರ ಉಂಟು ಮಾಡುತ್ತದೆ. ಇದು ಮಹಿಳಾ ಸ್ವಾಭಿಮಾನಕ್ಕೂ ಧಕ್ಕೆಯಾಗುತ್ತದೆ. ಅಲ್ಲದೆ, ಈ ವೇಳೆ ಕೆಲ ಅನಾರೋಗ್ಯ ಸಮಸ್ಯೆಗಳು ಕೂಡ ಇರುತ್ತದೆ. ಪ್ರಮುಖವಾಗಿ ಕೆಲಸದ ವೇಳೆ ಬಗ್ಗುವುದು, ಏಳುವುದು ಮಾಡುವಾಗ ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಹೀಗೆ ಈ ವೇಳೆ ಮಹಿಳಾ ಸಿಬ್ಬಂದಿಗೆ ಉಂಟಾಗುವ ಸಮಸ್ಯೆಗಳನ್ನು ಉಲ್ಲೇಖೀಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು, ಗರ್ಭಿಣಿ ಸಿಬ್ಬಂದಿಗೆ ಸಮವಸ್ತ್ರದಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದರು.

ಹಿರಿಯ ಆದೇಶ ಕಡ್ಡಾಯ
ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಆದೇಶ ಪಾಲಿಸುವುದು ಪ್ರತಿ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ. ನಾನು ಕೂಡ ಗರ್ಭಿಣಿ ಸಂದರ್ಭದಲ್ಲಿ ಪ್ಯಾಂಟ್‌ ಧರಿಸಿಯೇ ಕರ್ತವ್ಯ ನಿರ್ವಹಿಸಿದ್ದೇನೆ. ಅನಿವಾರ್ಯವೂ ಹೌದು. ಪ್ಯಾಂಟ್‌ ಹಾಗೂ ಶರ್ಟ್‌ ಧರಿಸುವುದರಿಂದ ಕರ್ತವ್ಯಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ. ಆದರೆ, ಈ ವೇಳೆ ಕೆಲ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಮಹಿಳಾ ಐಪಿಎಸ್‌ ಅಧಿಕಾರಿಯೊಬ್ಬರು ಹೇಳಿದರು.
ಕೇಂದ್ರ ಸರ್ಕಾರದ ಸಿಬ್ಬಂದಿಗೆ ಮಾತೃತ್ವ ರಜೆ ಜತೆಗೆ ಮಗುವಿನ ಪಾಲನೆಗಾಗಿ ಎರಡು ವರ್ಷಗಳವರೆಗೆ ರಜೆ ಇರುತ್ತದೆ. ಆದರೆ, ಅಷ್ಟು ದಿನಗಳ ರಜೆ ಯಾವುದೇ ಕಾರಣಕ್ಕೂ ಸಿಗುವುದಿಲ್ಲ. ಕೆಲ ರಾಜ್ಯಗಳಲ್ಲಿ ಇರಬಹುದು. ಆದರೆ, ರಾಜ್ಯದಲ್ಲಿ ಆ ವ್ಯವಸ್ಥೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗರ್ಭಿಣಿ ಪೊಲೀಸ್‌ ಸಿಬ್ಬಂದಿ ಪ್ಯಾಂಟ್‌ ಧರಿಸಿ  ಔಟ್‌ಶರ್ಟ್‌ ಮಾಡಬೇಕು  ಎಂದು ನಗರ ಪೊಲೀಸ್‌ ಆಯುಕ್ತ ಸುನಿಲ್‌ಕುಮಾರ್‌ ಹೊರಡಿಸಿದ್ದ ಸುತ್ತೋಲೆ ಚರ್ಚೆಗೆ ಗ್ರಾಸವಾಗಿರುವ ಬಗ್ಗೆ ಉದಯವಾಣಿಯಲ್ಲಿ  ಭಾನುವಾರ ವಿಶೇಷ ವರದಿ ಪ್ರಕಟವಾಗಿತ್ತು

Advertisement
Advertisement

Udayavani is now on Telegram. Click here to join our channel and stay updated with the latest news.

Next